ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಾರಹಟ್ಟಿ | ರುದ್ರಭೂಮಿ ಸಮಸ್ಯೆ; ಪೊಲೀಸ್ ಭದ್ರತೆಯಲ್ಲಿ ಅಂತ್ಯ ಸಂಸ್ಕಾರ

Published 4 ಜನವರಿ 2024, 7:35 IST
Last Updated 4 ಜನವರಿ 2024, 7:35 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸಪುರ ರಸ್ತೆಯಲ್ಲಿರುವ ಉಪ್ಪಾರಹಟ್ಟಿ ಗ್ರಾಮದಲ್ಲಿ ರುದ್ರಭೂಮಿ ಸಮಸ್ಯೆ ಇರುವ ಕಾರಣ ಮಂಗಳವಾರ ರಾತ್ರಿ ಮೃತಪಟ್ಟ ವ್ಯಕ್ತಿಯೊಬ್ಬರನ್ನು ಪೊಲೀಸ್ ಭದ್ರತೆಯಲ್ಲಿ ಬುಧವಾರ ಸಂಜೆ ಅಂತ್ಯಸಂಸ್ಕಾರ ನಡೆಸಲಾಯಿತು.

ಉಪ್ಪಾರಹಟ್ಟಿಯಲ್ಲಿ ಮಂಗಳವಾರ ರಾತ್ರಿ ಕಲ್ಲಪ್ಪ ಅವರು ಮೃತಪಟ್ಟಿದ್ದರು. ಪ್ರತ್ಯೇಕ ರುದ್ರಭೂಮಿ ಇಲ್ಲದ ಕಾರಣಕ್ಕೆ ಕಲ್ಲಪ್ಪ ಅವರ ಅಂತ್ಯಕ್ರಿಯೆಗೆ ಸ್ಥಳೀಯರು ಅವಕಾಶಕೊಟ್ಟಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಹಾಗೂ ಉಪ್ಪಾರ ಜನಾಂಗದವರು ರುದ್ರಭೂಮಿ ಸಮಸ್ಯೆಗೆ ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಮಾಡಿ ಪರಿಹರಿಸಬೇಕು ಎಂದು ಪಟ್ಟು ಹಿಡಿದಿದ್ದರು.

ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ರಾಜೇಶ್ ಕುಮಾರ್ ಮೃತರ ಸಂಬಂಧಿಕರ ಮನ ಒಲಿಸಲು ಪ್ರಯತ್ನಿಸಿದರೂ ಆಗಲಿಲ್ಲ. ಅಂತಿಮವಾಗಿ ಪೊಲೀಸ್ ಭದ್ರತೆಯಲ್ಲಿ ಮೊದಲು ಅಂತ್ಯಸಂಸ್ಕಾರ ಮಾಡುತ್ತಿದ್ದ ಜಾಗದಲ್ಲಿಯೇ ಅಂತ್ಯಕ್ರಿಯೆ ಮಾಡಿಸಿ, ವಾರದೊಳಗೆ ರುದ್ರಭೂಮಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಉಪಾರಹಟ್ಟಿ ಗ್ರಾಮದಲ್ಲಿ ಉಪ್ಪಾರ ಸಮುದಾಯಕ್ಕೆ ಸೇರಿದ ನೂರು ಮನೆಗಳಿದ್ದು, ಸುಮಾರು 600ಕ್ಕೂ ಹೆಚ್ಚು ಜನರಿದ್ದಾರೆ. ಹಟ್ಟಿಯಲ್ಲಿರುವ ಯಾರಿಗೂ ಒಂದಿಂಚು ಭೂಮಿ ಇಲ್ಲ. ಕೂಲಿಯೇ ಎಲ್ಲರಿಗೂ ಬದುಕಿನ ಆಧಾರ. ಹಟ್ಟಿಯಲ್ಲಿ ಯಾರಾದರೂ ಮರಣ ಹೊಂದಿದರೆ ಶವಸಂಸ್ಕಾರ ಮಾಡಲು ಒಂದಡಿ ಜಾಗವಿಲ್ಲ. ಸತ್ತವರನ್ನು ನೆಮ್ಮದಿಯಿಂದ ಅಂತ್ಯಸಂಸ್ಕಾರ ಮಾಡಲು ಜಾಗ ಕೇಳುವುದೇ ತಪ್ಪಾ ಎಂಬ ಪ್ರಶ್ನೆ ಗ್ರಾಮಸ್ಥರದ್ದು.

ಈಗಾಗಲೇ ಯರದಕಟ್ಟೆ ಗೋಮಾಳದ ಸರ್ವೆ ನಂ. 19ರಲ್ಲಿ 1.17 ಎಕರೆ ಜಮೀನನ್ನು ರುದ್ರಭೂಮಿಗೆ ಮಂಜೂರು ಮಾಡಿ ಪಹಣಿ ಬಂದಿದ್ದು, ಒಂದು ವರ್ಷ ಕಳೆದಿದೆ. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಏಳೆಂಟು ಮಂದಿ ಮರಣ ಹೊಂದಿದ್ದಾರೆ. ಆದಾಗ್ಯೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಅಲ್ಲಿನ ಸ್ಥಳೀಯರು ಬಿಡುತ್ತಿಲ್ಲ. ಆದ್ದರಿಂದ ವಿ.ವಿ.ಪುರ ರಸ್ತೆಯ ಪಕ್ಕದಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತಿದ್ಧಾರೆ.

ಉಪ್ಪಾರ ಜನಾಂಗದ ಮುಖಂಡ ನಾಗರಾಜ್ ಉಪ್ಪಾರ ಮಾತನಾಡಿ, ‘ಉಪ್ಪಾರಹಟ್ಟಿ ಗ್ರಾಮಕ್ಕೆ ರುದ್ರಭೂಮಿ ನೀಡುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ಸಚಿವ ಡಿ. ಸುಧಾಕರ್ ರುದ್ರಭೂಮಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ’ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪ್ಪಾರ ಸಮಾಜದ ನಿಕಟಪೂರ್ವ ಅಧ್ಯಕ್ಷ ಆರ್.ಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ಆಲೂರು ರಾಮಣ್ಣ, ನಿಂಗರಾಜ, ಶೇಖರಪ್ಪ, ಕಾಂತರಾಜ್, ಮಹಾಲಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT