ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ತಿಂಗಳಾಂತ್ಯಕ್ಕೆ ರೈತರ ಖಾತೆಗೆ ಬೆಳೆ ವಿಮೆ: ಜಿಲ್ಲಾಧಿಕಾರಿ

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೂಚನೆ
Published 8 ಫೆಬ್ರುವರಿ 2024, 14:27 IST
Last Updated 8 ಫೆಬ್ರುವರಿ 2024, 14:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಾದ್ಯಂತ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ದತ್ತಾಂಶಗಳ ಮರು ಪರಿಶೀಲನೆ ಬಾಕಿ ಉಳಿದಿದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ತಿಂಗಳಾಂತ್ಯಕ್ಕೆ ರೈತರ ಖಾತೆಗೆ ಬೆಳೆ ವಿಮೆ ಪರಿಹಾರದ ಹಣ ಜಮೆಯಾಗುವಂತೆ ಕ್ರಮ ವಹಿಸಬೇಕು ಎಂದು ಕೃಷಿ ಹಾಗೂ ವಿಮಾ ಕಂಪನಿ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಫಸಲ್‌ ಬಿಮಾ ಯೋಜನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಳೆ ವಿಮೆಯ ಎಲ್ಲ ಕಾರ್ಯವನ್ನು 15 ದಿನದೊಳಗೆ ಪೂರ್ಣಗೊಳಿಸಬೇಕು. ಅರ್ಹರ ಖಾತೆಗೆ ಪರಿಹಾರದ ಹಣ ಜಮೆ ಮಾಡಬೇಕು. ಈ ವಿಚಾರದಲ್ಲಿ ಯಾವುದೇ ಸಬೂಬು ನೀಡಬಾರದು. ವಿಮೆ ಪರಿಹಾರದ ಕಾರ್ಯ ಸಂಪೂರ್ಣ ಪಾರದರ್ಶಕವಾಗಿ ಇರಬೇಕು. ತಾಂತ್ರಿಕ ಕಾರಣ ಎದುರಾದರೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ರೈತರು ಗೊಂದಲಕ್ಕೆ ಒಳಗಾಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಕೃಷಿ ವಿಮಾ ಕಂಪನಿಗಳು ಬೆಳೆ ಪರಿಹಾರ ಕಾರ್ಯವನ್ನು ವ್ಯಾಪಾರೀಕರಣದ ದೃಷ್ಟಿಯಿಂದ ನೋಡಬಾರದು. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಪ್ರತಿ ತಾಲ್ಲೂಕಿಗೂ ವಿಮಾ ಕಂಪನಿ ಪ್ರತಿನಿಧಿ ನೇಮಕ ಮಾಡಬೇಕು ಎಂದು ಸೂಚಿಸಿದರು.

‘2023-24ನೇ ಸಾಲಿನಲ್ಲಿ ಜಿಲ್ಲೆಯ 2,59,486 ಎಕರೆ ಕೃಷಿ ಭೂಮಿಯಲ್ಲಿ 1,05,000 ಎಕರೆ ಪ್ರದೇಶಕ್ಕೆ 80,633 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ ಶೇಂಗಾ 38,496, ಮುಸುಕಿನ ಜೋಳ 27,396, ತೊಗರಿ 4,109, ರಾಗಿ 2,719, ಸಾಮೆ 3,790, ಹೆಸರು 2,427, ಹತ್ತಿ 1,960, ಸೂರ್ಯಕಾಂತಿ 675, ಟೊಮ್ಯಾಟೊ 97, ಎಳ್ಳು 17, ಹುರುಳಿ 70, ನವಣೆ 376, ಸಜ್ಜೆ 51, ಕೆಂಪು ಮೆಣಸಿನಕಾಯಿಗೆ 61 ರೈತರು ನೋಂದಾಯಿಸಿದ್ದಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್‌ ವಿವರಿಸಿದರು.

‘ರಾಜ್ಯದಲ್ಲಿ ಖಾಸಗಿ ಬೆಳೆ ವಿಮೆ ಕಂಪನಿಗಳು ರೈತರನ್ನು ಶೋಷಣೆ ಮಾಡುತ್ತಿವೆ. ರಾಜ್ಯದಲ್ಲಿ ಬರ ಘೋಷಣೆ ಆದ ಬಳಿಕ ವಿವಿಧ ಜಿಲ್ಲೆಗಳಲ್ಲಿ ಮಧ್ಯಂತರ ಪರಿಹಾರ ನೀಡಲಾಗಿದೆ. ಆದರೆ ಜಿಲ್ಲೆಯ ರೈತರಿಗೆ ಮಾತ್ರ ನೀಡಿಲ್ಲ. ಬೆಳೆವಿಮೆ ಕಂಪನಿಗಳು ನೋಂದಣಿ ಮಾಡಿರುವ ರೈತರಿಗೆ ಯಾವುದೇ ರೀತಿ ಬಾಂಡ್‌ ನೀಡುತ್ತಿಲ್ಲ’ ಎಂದು ರೈತ ಮುಖಂಡ ಕೆ.ಪಿ. ಭೂತಯ್ಯ ದೂರಿದರು.

‘ಕಳೆದ ಬಾರಿ 8 ತಿಂಗಳ ಒಳಗೆ ರೈತರ ಖಾತೆಗೆ ಪರಿಹಾರ ಮೊತ್ತ ಜಮೆ ಮಾಡಲಾಗಿದೆ. ಪೂರ್ಣ ಪ್ರಮಾಣ ಹಣ ಜಮೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ. ಈ ಕಾರಣಕ್ಕೆ ಮಧ್ಯಂತರ ಪರಿಹಾರ ನೀಡಿಲ್ಲ’ ಎಂದು ಜಂಟಿ ನಿರ್ದೇಶಕ ಮಂಜುನಾಥ್‌ ಸ್ಪಷ್ಟನೆ ನೀಡಿದರು.

ಕೃಷಿ ಇಲಾಖೆ ಉಪನಿರ್ದೇಶಕ ಶಿವಕುಮಾರ್‌, ನರ್ಬಾಡ್‌ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕಿ ಕವಿತಾ ಶಶಿಧರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್‌, ವಿಮಾ ಕಂಪನಿ ಜಿಲ್ಲಾ ವ್ಯವಸ್ಥಾಪಕ ಹರ್ಷವರ್ಧನ್‌, ರೈತ ಮುಖಂಡರಾದ ಕೊಂಚೆ ಶಿವರುದ್ರಪ್ಪ, ಧನಂಜಯ್ ಇದ್ದರು.

Quote - ಬೆಳೆ ವಿಮೆ ಬಗ್ಗೆ ರೈತರಿಗೆ ಮಾಹಿತಿ ಕೊರತೆ ಇರುತ್ತದೆ. ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಕಾರ್ಯಾಗಾರ ಆಯೋಜಿಸಬೇಕು. ಪಹಣಿಗಳಲ್ಲಿ ಬೆಳೆ ತಪ್ಪಾಗಿ ನಮೂದು ಅದರೂ ರೈತರಿಗೆ ತೊಂದರೆಯಾಗುತ್ತದೆ. ಬಿ.ಟಿ.ಕುಮಾರಸ್ವಾಮಿ ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT