ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟಾಚಿಗೆ ಕಾರು ಡಿಕ್ಕಿ: ಡಾಬಾ ಮಾಲೀಕ ಸಾವು

ಒಂದೂವರೆ ವರ್ಷದಿಂದ ನಡೆಯುತ್ತಿದೆ ಬಿ.ಡಿ.ರಸ್ತೆ ವಿಸ್ತರಣೆ ಕಾಮಗಾರಿ
Last Updated 29 ಡಿಸೆಂಬರ್ 2020, 6:44 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಬಿ.ಡಿ. ರಸ್ತೆಯ ಎಲ್‌ಐಸಿ ಕಚೇರಿ ಸಮೀಪ ಹಿಟಾಚಿ ಹಾಗೂ ಕಾರು ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ತಿರುಮಲ ಡಾಬಾ ಮಾಲೀಕ ಕೆಂಚಪ್ಪ (39) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರ ನಾಲ್ವರು ಗಾಯಗೊಂಡಿದ್ದಾರೆ.‌

ಕೆಂಚಪ್ಪ ಅವರು ಭಾನುವಾರ ರಾತ್ರಿ 2 ಗಂಟೆಯ ಸುಮಾರಿಗೆ ಕಾರಿನಲ್ಲಿ ಚಳ್ಳಕೆರೆ ಗೇಟ್‌ನಿಂದ ಬಿ.ಡಿ. ರಸ್ತೆಯ ಮಾರ್ಗವಾಗಿ ಸಾಗುತ್ತಿದ್ದರು. ಕೆಎಸ್‌ಆರ್‌ಟಿಸಿ ಡಿಪೊ ಸಮೀಪ ರಸ್ತೆಯಲ್ಲಿ ಹಾಕಿದ್ದ ಮಣ್ಣಿನ ದಿಬ್ಬವನ್ನು ದಾಟಿದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಹಿಟಾಚಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ.

ಪ್ರಗತಿಯಲ್ಲಿರುವ ಕಾಮಗಾರಿಗೆ ಮುನ್ನೆಚ್ಚರಿಕೆ ಕ್ರಮ ಅನುಸರಿಸದೇ ಇರುವುದು ಅಪಘಾತಕ್ಕೆ ಕಾರಣವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೀಮ ಆರ್ಮಿಯ ಕಾರ್ಯಕರ್ತರೊಬ್ಬರು ಫೇಸ್‌ಬುಕ್‌ ಲೈವ್‌ ನಡೆಸಿ ರಸ್ತೆ ಕಾಮಗಾರಿಯ ಅವ್ಯವಸ್ಥೆಯನ್ನು ಬಿಡಿಸಿಟ್ಟಿದ್ದಾರೆ. ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಕೆಂಚಪ್ಪ ಅವರು ಚಳ್ಳಕೆರೆ ತಾಲ್ಲೂಕಿನ ಚಿಕ್ಕಮಧುರೆ ಗ್ರಾಮದವರು. ಇವರ ಪತ್ನಿ ರಾಜೇಶ್ವರಿ ಎಂಬುವರು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದರು. ಮತದಾನ ಮುಗಿದ ಬಳಿಕ ಪತ್ನಿ ಚಿತ್ರದುರ್ಗಕ್ಕೆ ಮರಳಿದ್ದರು. ಗ್ರಾಮದಲ್ಲಿ ಎಲ್ಲ ಕಾರ್ಯಗಳನ್ನು ಮುಗಿಸಿ ಸ್ನೇಹಿತರೊಂದಿಗೆ ರಾತ್ರಿ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಇವರು ಹೊಳಲ್ಕೆರೆ ರಸ್ತೆಯಲ್ಲಿ ತಿರುಮಲಾ ಡಾಬಾ ನಡೆಸುತ್ತಿದ್ದರು.

ಬಿ.ಡಿ.ರಸ್ತೆಯ ವಿಸ್ತರಣೆ ಕಾಮಗಾರಿ ಒಂದೂವರೆ ವರ್ಷದಿಂದ ನಡೆಯುತ್ತಿದೆ. ಚಳ್ಳಕೆರೆ ಗೇಟಿನಿಂದ ಪ್ರವಾಸಿ ಮಂದಿರದ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ 2019ರ ಮಾರ್ಚ್‌ ತಿಂಗಳಲ್ಲಿ ಪ್ರಾರಂಭವಾಗಿತ್ತು. ಒಂದೂವರೆ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಜನರು ಅಸಮಾಧಾನಗೊಂಡಿದ್ದಾರೆ.

ಕಾಮಗಾರಿಗೆ ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಸರಿಯಾದ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಕಾಮಗಾರಿಗೆ ಬಳಸುವ ವಾಹನ, ಯಂತ್ರಗಳು ರಸ್ತೆಯಲ್ಲೇ ನಿಲ್ಲುತ್ತವೆ. ರಸ್ತೆ ಕಾಮಗಾರಿ ಪ್ರಾರಂಭವಾದಾಗಿನಿಂದ ಸಂಭವಿಸಿದ ಹಲವು ಅಪಘಾತಗಳಲ್ಲಿ ಅನೇಕರು ಕೈ–ಕಾಲುಗಳನ್ನು ಕಳೆದುಕೊಂಡಿದ್ದಾರೆ.

ನಗರದಲ್ಲಿ ಸಂಚಾರ ದುಸ್ತರ:ಚಿತ್ರದುರ್ಗ ನಗರದ ಬಹುತೇಕ ರಸ್ತೆಗಳಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಏಕಕಾಲಕ್ಕೆ ಕೈಗೆತ್ತಿಕೊಂಡಿರುವುದು ಸಂಚಾರ ಸಮಸ್ಯೆ ಸೃಷ್ಟಿಸಿದೆ.

ಬಿ.ಡಿ.ರಸ್ತೆಯ ಕಾಮಗಾರಿ ಒಂದೂವರೆ ವರ್ಷದಿಂದ ಪೂರ್ಣಗೊಂಡಿಲ್ಲ. ಈ ನಡುವೆ ಹೊಳಲ್ಕೆರೆ ರಸ್ತೆ, ದಾವಣಗೆರೆ ರಸ್ತೆಯ ಕಾಮಗಾರಿಯನ್ನು ಆರಂಭಿಸಲಾಗಿದೆ. ತುರುವನೂರು ರಸ್ತೆ, ವಿ.ಪಿ.ಬಡಾವಣೆಯ ಮುಖ್ಯರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಸಂಚಾರಕ್ಕೆ ಸೂಚಿಸಿದ ಪರ್ಯಾಯ ಮಾರ್ಗಗಳನ್ನು ಅಗೆಯಲಾಗಿದೆ. ನಗರದಲ್ಲಿ ದೂಳಿನ ಪ್ರಮಾಣ ಹೆಚ್ಚಾಗಿದ್ದು, ಸಕಾಲಕ್ಕೆ ಯಾವ ಕಾಮಗಾರಿಯೂ ಪೂರ್ಣಗೊಳ್ಳುತ್ತಿಲ್ಲ.

ಮಹಾಸಂಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT