ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ಸ್ಯಾಂಜನೇಯ ಬ್ರಹ್ಮ ರಥೋತ್ಸವ

Last Updated 10 ಡಿಸೆಂಬರ್ 2022, 3:55 IST
ಅಕ್ಷರ ಗಾತ್ರ

ಪರಶುರಾಂಪುರ: ಹೋಬಳಿ ಮತ್ಸಮುದ್ರ ಗ್ರಾಮ ಮತ್ಸ್ಯಾಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಶನಿವಾರ ನಡೆಯಲಿದ್ದು ತಾಲ್ಲೂಕು ಆಡಳಿತ, ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆಯಿಂದ ಸಕಲ ಸಿದ್ಧತೆಗಳು ನಡೆಯುತ್ತಿವೆ.

ಡಿ. 10ರಂದು ಬ್ರಹ್ಮರಥೋತ್ಸವ, 11ರಂದು ಉಟ್ಲಪರಿಷೆ, 12ರಂದು ಮಹಾ ಮಂಗಳಾರತಿಯೊಂದಿಗೆ ಜಾತ್ರೆಗೆ ತೆರೆಬೀಳಲಿದೆ.

ಐತಿಹ್ಯ: ‘ಇಲ್ಲಿನ ಆಂಜನೇಯ ದೇವಸ್ಥಾನವನ್ನು ವ್ಯಾಸರಾಯರು ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಆಂಜನೇಯ ಸ್ವಾಮಿಯು ಲಂಕಾ ದಹನ ಮಾಡಿ ಬರುವಾಗ ಈ ಭಾಗದಿಂದ ಹಾದು ಹೋಗುವಾಗ ಬಾಯರಿಕೆಯಾಯಿತು. ಆಗ ವೇದಾವತಿ ನದಿ ತೀರದಲ್ಲಿನ ಬಂಡೆಯನ್ನು ತನ್ನ ಮೊಳಕೈಯಿಂದ ಗುದ್ದಿ ನೀರು ತೆಗೆದು ಕುಡಿದ ಎಂಬ ಪ್ರತೀತಿಯಿದೆ. ಅದಕ್ಕೆ ಈಗಲೂ ಈ ಜಾಗವನ್ನು ಮಂಗದೋಣಿ ಎಂದು ಕರೆಯುತ್ತಾರೆ’ ಎನ್ನುತ್ತಾರೆ ಇಲ್ಲಿನ ಹಿರಿಯರು.

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ವಿಶೇಷ ಜಾತ್ರೆ ನಡೆಯುತ್ತ ಬಂದಿದೆ. ಜಾತ್ರೆಗೆ ಸುತ್ತ ಮುತ್ತಲ ಜಿಲ್ಲೆಯ ಜನರು, ಸೀಮಾಂಧ್ರ ಮತ್ತು ತೆಲಂಗಾಣದಿಂದಲೂ ಭಕ್ತರು ಬರುತ್ತಾರೆ.

ವಿನೋದಕ್ಕಾಗಿ ಉಟ್ಲ ಪರಿಷೆ: ಪ್ರತಿ ವರ್ಷ ಜಾತ್ರೆಯಲ್ಲಿ ಉಟ್ಲ ಪರಿಷೆಯನ್ನು ಮಾಡುತ್ತ ಬಂದಿದ್ದಾರೆ. ಉದ್ದನೆಯ ಕಂಬಕ್ಕೆ ಜೇಡಿ ಮಣ್ಣನ್ನು ಮೆತ್ತಿ ಕಂಬದ ಮೇಲಿನಿಂದ ಒಬ್ಬ ವ್ಯಕ್ತಿ ಲೋಳೆರಸವನ್ನು ಬಿಡುತ್ತಿರುತ್ತಾನೆ ಅದನ್ನು ಮೀರಿ ಕಂಬವನ್ನು ಹತ್ತಿದವರು ಸ್ಪರ್ಧೆಯಲ್ಲಿ ವಿಜೇತರಾಗುತ್ತಾರೆ. ಈ ಆಟ ನೋಡಲು ಸುತ್ತ ಮತ್ತಲ ಹಳ್ಳಿಗಳಿಂದ ಸಾವಿರಾರು ಜನ
ಸೇರುತ್ತಾರೆ.

ಪ್ರತಿ ಶನಿವಾರವೂ ಸ್ವಾಮಿಗೆ ಪೂಜೆ ನಡೆಯುತ್ತದೆ. ಕಾರ್ತಿಕ ಮಾಸದ ಜಾತ್ರೆಯಲ್ಲಿ ವಿಶೇಷ ಪೂಜೆ ನಡೆಯುತ್ತದೆ ಎಂದು ಅರ್ಚಕ ಸುಧೀಂದ್ರಚಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT