ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಅರಣ್ಯ ಇಲಾಖೆಯಿಂದ 7 ಲಕ್ಷ ಸಸಿ ನೆಡಲು ಸಿದ್ಧತೆ

ಗಡಿ ಪರಿಸರ ಪುನಶ್ಚೇ‌ತನ ಯೋಜನೆಯಲ್ಲಿ ಸಸಿ ಅಭಿವೃದ್ಧಿ
Published 1 ಜೂನ್ 2024, 7:47 IST
Last Updated 1 ಜೂನ್ 2024, 7:47 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆಯು ಅರಣ್ಯ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಸಸಿಗಳನ್ನು ನಾಟಿ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಸಾಮಾನ್ಯವಾಗಿ ಪ್ರಾದೇಶಿಕ ಅರಣ್ಯ ವಿಭಾಗದಿಂದ ಪ್ರತಿವರ್ಷ ಸಾವಿರದ ಲೆಕ್ಕದಲ್ಲಿ ಸಸಿಗಳನ್ನು ಬೆಳೆಸಿ ನಾಟಿ ಮಾಡಲಾಗುತ್ತಿತ್ತು. ಈ ಬಾರಿ 7 ಲಕ್ಷ ಸಸಿಗಳನ್ನು ಬೆಳೆಸುವ ಮೂಲಕ ಗಮನಾರ್ಹ ಸಾಧನೆ ಮಾಡಲು ಇಲಾಖೆ ಮುಂದಾಗಿದೆ.

‘ಪಟ್ಟಣದ ರಾಯದುರ್ಗ ರಸ್ತೆಯಲ್ಲಿ 30 ಎಕರೆ ಪ್ರದೇಶದಲ್ಲಿರುವ ಎಂ.ಡಿ.ಮಹದೇವಪ್ಪ ಸಸ್ಯ ಕ್ಷೇತ್ರದಲ್ಲಿ ಕಮರಾ ಜಾತಿಯ 2.50 ಲಕ್ಷ, ಸೀತಾಫಲ 29,000, ಹತ್ತಿ 10,400, ಆಲ 10,000, ತೇಗ 31,000, ಹುಣಸೆ 10,000, ಬಾಗೆ 40,000, ಬಸರಿ 32,000, ಬೇವು 4,000 ಸೇರಿದಂತೆ ಒಟ್ಟು 29 ಕಾಡು ಜಾತಿಯ ಸಸಿಗಳನ್ನು ಬೆಳೆಸಲಾಗಿದೆ’ ಎಂದು ಇಲಾಖೆಯ ಸಹಾಯಕ ಪ್ರಾದೇಶಿಕ ಅರಣ್ಯಾಧಿಕಾರಿ ಶ್ರೀಹರ್ಷ ತಿಳಿಸಿದರು.

‘2020-21ರಲ್ಲಿ ಕೋವಿಡ್‌ ಇದ್ದ ಕಾರಣ 41,860, 2021-22ನೇ ಸಾಲಿನಲ್ಲಿ 61,950, 2022-23ನೇ ಸಾಲಿನಲ್ಲಿ 1,01,440 ಸಸಿಗಳನ್ನು ಬೆಳೆಸಲಾಗಿತ್ತು. ಈ ವರ್ಷ ಗಣಿ ಪರಿಸರ ಪುನಶ್ಚೇತನ ಯೋಜನೆ ಮಂಜೂರಾಗಿದ್ದು, ಈ ಯೋಜನೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸಸಿಗಳನ್ನು ಬೆಳೆಸಲಾಗಿದೆ. 800 ಹೆಕ್ಟೇರ್‌ನಷ್ಟಿರುವ ಕಮರಾ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಈ ಸಸಿಗಳನ್ನು ನಾಟಿ ಮಾಡಬೇಕಿದೆ. ಈಚೆಗೆ ಮಳೆ ಬಂದ ಕಾರಣ ರಸ್ತೆ ಬದಿಯ ನೆಡುತೋಪಿನಲ್ಲಿ ಸಸಿಗಳನ್ನು ನೆಡಲಾಗಿದೆ’ ಎಂದು ಹೇಳಿದರು. 

‘ರಾಜ್ಯ ಗಣಿ ಪರಿಸರ ಪುನಶ್ಚೇತನ ಯೋಜನೆ, ಡಿಡಿಎಫ್‌ ಯೋಜನೆ, ಕಾಂಪಾ ಯೋಜನೆ ಮತ್ತು ಕೆಎಫ್‌ಡಿಎಫ್‌ ಯೋಜನೆಯಲ್ಲಿ ಅರಣ್ಯ ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ. ಜತೆಗೆ ರೈತರ ಜಮೀನಿನಲ್ಲೂ ನೆಡಲು ಸಸಿಗಳನ್ನು ನೀಡಲಾಗುವುದು. ಪ್ರತಿ ತೇಗದ ಸಸಿಗೆ ₹ 3 ಮತ್ತು ಸೀತಾಫಲ ಸಸಿಗೆ ₹ 6 ನಿಗದಿ ಮಾಡಲಾಗಿದೆ. ಅಗತ್ಯವಿರುವವರು ದಾಖಲೆ ನೀಡಿ ಪಡೆದುಕೊಳ್ಳಬಹುದು’  ಎಂದು ಮಾಹಿತಿ ನೀಡಿದರು.

‘ಮುತ್ತಿಗಾರಹಳ್ಳಿಯ ಕಮರಾ ಕಾವಲು ಪ್ರದೇಶ, ತುಮಕೂರ್ಲಹಳ್ಳಿ ಕಮರಾ ಕಾವಲು ಹಾಗೂ ಮಾರಮ್ಮನಹಳ್ಳಿ ಕಮರಾ ಕಾವಲು ವ್ಯಾಪ್ತಿಯಲ್ಲಿ ಈ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶೀಘ್ರ ಮಳೆ ಬಂದಲ್ಲಿ ಇನ್ನೂ ಅನುಕೂಲವಾಗಲಿದೆ. ಜೂನ್‌ ಅಂತ್ಯದ ಒಳಗಾಗಿ ನಾಟಿ ಕಾರ್ಯ ಪೂರ್ಣಗೊಳಿಸಲಾಗುವುದು’ ಎಂದರು.

‘ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಸಸಿಗಳನ್ನು ಬೆಳೆಸಿರುವುದು ಶ್ಲಾಘನೀಯ. ಆದರೆ ಸಸಿಗಳನ್ನು ನೆಡುವುದು ಮುಖ್ಯವಲ್ಲ. ಅವುಗಳನ್ನು ಕಾಪಾಡಿ ಮರಗಳನ್ನಾಗಿ ಬೆಳೆಸಿದಲ್ಲಿ ಉದ್ದೇಶ ಸಫಲವಾಗಲಿದೆ’ ಎಂದು ಪರಿಸರ ಪ್ರೇಮಿಗಳಾದ ವಿರೂಪಾಕ್ಷಪ್ಪ, ಗೋವಿಂದರಾಜು ಸಲಹೆ ನೀಡಿದರು.

ನಾಟಿಗೆ ಸಿದ್ಧವಾಗಿರುವ ಕಮರಾ ಜಾತಿಯ ಗಿಡಗಳು
ನಾಟಿಗೆ ಸಿದ್ಧವಾಗಿರುವ ಕಮರಾ ಜಾತಿಯ ಗಿಡಗಳು

Quote - ಅರಣ್ಯ ಇಲಾಖೆ ಜತೆ ಸಾರ್ವಜನಿಕರು ಸಹಕಾರ ನೀಡಿದಲ್ಲಿ ಮಾತ್ರ ಅರಣ್ಯ ಬೆಳೆಸುವ ಕಾರ್ಯಕ್ಕೆ ಅರ್ಥ ಬರುತ್ತದೆ. ಪರಿಸರ ಬೆಳೆಸುವುದು ಸರ್ಕಾರದ ಕರ್ತವ್ಯವಾದರೆ ಉಳಿಸುವುದು ಜನರ ಕೈಯಲ್ಲಿದೆ. ಶ್ರೀಹರ್ಷ ಅರಣ್ಯಾಧಿಕಾರಿ 

Cut-off box - ಅರಣ್ಯ ಸಂರಕ್ಷಣೆ: ಸಾಮರಸ್ಯ ಇರಲಿ ‘ರಸ್ತೆಬದಿ ಪ್ರತಿವರ್ಷ ನೆಡುತೋಪು ನಿರ್ಮಾಣ ಮಾಡಲಾಗುತ್ತಿದೆ. ಆದರೆ ಕುರಿಗಾಹಿಗಳು ಮರಗಳ ರೆಂಬೆ ಕಡಿದು ಕುರಿಗಳಿಗೆ ಮೇವಾಗಿ ಹಾಕುತ್ತಿರುವ ಪರಿಣಾಮ ಮರಗಳು ಇದ್ದೂ ಇಲ್ಲದಂತಾಗಿವೆ. ಸಸಿ ನೆಟ್ಟು 3 ವರ್ಷ ಬೆಳೆಸುವುದು ಮಾತ್ರ ನಮ್ಮ ಕಾರ್ಯ. ಮುಂದಿನದು ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಪ್ರಾದೇಶಿಕ ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ. ‘ರಸ್ತೆ ಬದಿಯ ಅನೇಕ ಮರಗಳನ್ನು ವಲಯ ಅರಣ್ಯ ವ್ಯಾಪ್ತಿಗೆ ಹಸ್ತಾಂತರ ಮಾಡಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ. ಪರಸ್ಪರ ಸಾಮರಸ್ಯದ ಮೂಲಕ ಮರಗಳನ್ನು ಕಾಪಾಡಲು ಮುಂದಾಗಬೇಕು’ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT