ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ಮರೆತ ರಾಜ್ಯ ಸರ್ಕಾರ: ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ

Published 7 ನವೆಂಬರ್ 2023, 10:44 IST
Last Updated 7 ನವೆಂಬರ್ 2023, 10:44 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯ ಭೀಕರ ಬರ ಪರಿಸ್ಥಿತಿಗೆ ಸಿಲುಕಿದ್ದು, ರೈತರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದರೆ, ಸರ್ಕಾರ ಅಧಿಕಾರ ಹಂಚಿಕೆಯ ಕಚ್ಚಾಟದಲ್ಲಿ ಮುಳುಗಿ ರೈತರನ್ನು ಮರೆತಿದೆ ಎಂದು ವಿಧಾನಸಭೆ ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

ಚಿತ್ರದುರ್ಗ ತಾಲ್ಲೂಕಿನ ಕೊಳಹಾಳು ಗ್ರಾಮದಲ್ಲಿ ಬರ ಪರಿಸ್ಥಿತಿಯನ್ನು ವೀಕ್ಷಿಸಿ ರೈತರ ಸಂಕಷ್ಟ ಆಲಿಸಿದ ಬಿಜೆಪಿ ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ ಕಾಗೇರಿ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ರಾಜ್ಯ ಹಿಂದೆಂದೂ ಕಾಣದ ಬರ ಪರಿಸ್ಥಿತಿಗೆ ಕರ್ನಾಟಕ ತುತ್ತಾಗಿದೆ. 220ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಸರ್ಕಾರವೇ ಬರ ಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಕುಡಿಯುವ ನೀರು, ಜಾನುವಾರು ಮೇವು ಸೇರಿ ಹಲವು ಸಮಸ್ಯೆಗಳು ಎದುರಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ಕುರ್ಚಿಗೆ ಪೈಪೋಟಿ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಭೀಕರವಾಗಿದೆ. ಮೆಕ್ಕೆಜೋಳ ಮೂರು ಅಡಿಗಿಂತ ಹೆಚ್ಚು ಬೆಳೆದಿಲ್ಲ. ತೆನೆಯಲ್ಲಿ ಕಾಳು ಕಾಣುತ್ತಿಲ್ಲ. ಶೇಂಗಾ ಬೆಳೆ ಸಂಪೂರ್ಣ ಹಾಳಾಗಿದ್ದು, ಮೇವು ಲಭ್ಯವಾಗುವುದು ಅನುಮಾನವಾಗಿದೆ. ಪ್ರತಿ ಎಕರೆಗೆ ಸರಾಸರಿ ₹ 30 ಸಾವಿರವನ್ನು ರೈತರು ವೆಚ್ಚ ಮಾಡಿದ್ದಾರೆ. ಬಿತ್ತನೆ ಬೀಜ, ಗೊಬ್ಬರವನ್ನು ಸಾಲ ತಂದಿರುವ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸರ್ಕಾರ ಮಾತ್ರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಶೇ 30ರಿಂದ 40ರಷ್ಟು ಮಾತ್ರ ಮಳೆಯಾಗಿದೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವ ಮುನ್ಸೂಚನೆಗಳಿವೆ. ಕೆಲಸ ಅರಸಿ ಜನರು ಗುಳೆ ಹೋಗುತ್ತಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಪರಿಸ್ಥಿತಿ ಭೀಕರವಾಗಿದ್ದರೂ ಸಚಿವರು, ಅಧಿಕಾರಿಗಳು ಬರ ನಿರ್ವಹಣೆಗೆ ಮುಂದಾಗುತ್ತಿಲ್ಲ’ ಎಂದು ಕಿಡಿಕಾರಿದರು.

‘ಮೆಕ್ಕೆಜೋಳ, ಶೇಂಗಾ ಸೇರಿ ಎಲ್ಲ ಬೆಳೆಗಳಿಗೆ ಸರ್ಕಾರ ಕೂಡಲೇ ಬರ ಪರಿಹಾರವನ್ನು ಪ್ರಕಟಿಸಬೇಕು. ಗುಳೆ ತಪ್ಪಿಸಲು ನರೇಗಾ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಕೆಲಸ ನೀಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ ಏಳು ಗಂಟೆ ವಿದ್ಯುತ್‌ ಪೂರೈಸಬೇಕು. ಸಹಕಾರಿ ಸಂಘ, ಬ್ಯಾಂಕ್‌ಗಳು ಸಾಲ ವಸೂಲಾತಿಯನ್ನು ಕೂಡಲೇ ನಿಲ್ಲಿಸಬೇಕು. ಜಾನುವಾರುಗಳಿಗೆ ಮೇವು ನೀಡಬೇಕು’ ಎಂದು ಆಗ್ರಹಿಸಿದರು.

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಂ.ಚಂದ್ರಪ್ಪ, ಹರೀಶ್‌, ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಮಾಜಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಇದ್ದರು.

‘ಮೋದಿ ತಾರತಮ್ಯ ಮಾಡಿಲ್ಲ’

ಬರ ಪರಿಸ್ಥಿತಿ ನಿರ್ವಹಣೆ ಹಾಗೂ ಆಡಳಿತದಲ್ಲಿ ವೈಫಲ್ಯ ಕಂಡಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರವನ್ನು ಬೊಟ್ಟು ಮಾಡುತ್ತಿದೆ. ಕರ್ನಾಟಕಕ್ಕೆ ಅನುದಾನ ನೀಡುವಲ್ಲಿ ಹಾಗೂ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ತಾರತಮ್ಯ ಮಾಡಿಲ್ಲ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

‘ಕಾಂಗ್ರೆಸ್‌ ನೇತೃತ್ವದ ಯುಪಿಎ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಗೆ 2006ರಿಂದ 2014ರವರೆಗೆ ₹ 2,250 ಕೋಟಿ ಅನುದಾನ ಕರ್ನಾಟಕಕ್ಕೆ ಲಭ್ಯವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರವಧಿಯಲ್ಲಿ 2014ರಿಂದ 2022ರವರೆಗೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ನಿರ್ವಹಣೆಗೆ ₹ 13,488 ಕೋಟಿ ಅನುದಾನ ಹರಿದು ಬಂದಿದೆ. ಇನ್ನೂ ಏಕೆ ಪ್ರಧಾನಿ ಮೋದಿ ಅವರನ್ನು ನಿಂದಿಸುತ್ತೀರಿ’ ಎಂದು ಪ್ರಶ್ನಿಸಿದರು.

ತೀವ್ರ ಬರ ಪರಿಸ್ಥಿತಿಗೆ ಎದುರಾದಾಗ ಈಶಾನ್ಯ ರಾಜ್ಯಗಳಿಂದಲೂ ಮೇವು ತರಿಸಲಾಗಿದೆ. ಪ್ರಸ್ತುತ ರಾಜ್ಯ ಸರ್ಕಾರ ಮೇವು ಪೂರೈಸುವಲ್ಲಿ ಆಸಕ್ತಿ ತೋರುತ್ತಿಲ್ಲ.
ಜಿ.ಎಚ್‌.ತಿಪ್ಪಾರೆಡ್ಡಿ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT