7
ಹೊಸದುರ್ಗ: ಯುವ ಬಿಗ್ರೇಡ್‌ನಿಂದ ಐತಿಹಾಸಿಕ ಸ್ಥಳಗಳ ಸ್ವಚ್ಛತೆಗೆ ಚಾಲನೆ

ಹಾಲರಾಮೇಶ್ವರ ಕ್ಷೇತ್ರ ಸ್ವಚ್ಛಗೊಳಿಸಿದ ಯುವಕರು

Published:
Updated:
ಹೊಸದುರ್ಗ ತಾಲ್ಲೂಕಿನ ಪುರಾಣ ಪ್ರಸಿದ್ಧ ಹಾಲುರಾಮೇಶ್ವರ ಪುಣ್ಯಕ್ಷೇತ್ರವನ್ನು ಯುವ ಬ್ರಿಗೇಡ್‌ ಯುವಕರು ಭಾನುವಾರ ಸ್ವಚ್ಛಗೊಳಿಸುತ್ತಿರುವುದು.

ಹೊಸದುರ್ಗ: ರಾಜ್ಯದ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ತಾಲ್ಲೂಕಿನ ಹಾಲುರಾಮೇಶ್ವರ ಪುಣ್ಯಕ್ಷೇತ್ರವನ್ನು ತಾಲ್ಲೂಕು ಯುವ ಬ್ರಿಗೇಡ್‌ ಯುವಕರು ಭಾನುವಾರ ಸ್ವಚ್ಛಗೊಳಿಸಿದರು.

25ಕ್ಕೂ ಅಧಿಕ ಮಂದಿ ಯುವಕ–ಯುವತಿಯರು ಬೆಳಿಗ್ಗೆ 7ಕ್ಕೆ ಕ್ಷೇತ್ರಕ್ಕೆ ಬಂದಿದ್ದರು. ಐತಿಹಾಸಿಕ ಕ್ಷೇತ್ರ ಸ್ವಚ್ಛಗೊಳಿಸಿ ಧಾರ್ಮಿಕ ಶ್ರೇಷ್ಠತೆ ಕಾಪಾಡಿ ಎಂಬ ಜೈಕಾರ ಕೂಗುತ್ತಾ, ಬಹು ಹರ್ಷದಿಂದ ಮಚ್ಚು, ಕುಡುಗೋಲು, ಗುದ್ದಲಿ, ಸಲಿಕೆ, ಹಾರೆ, ಪಿಕಾಸಿ, ಬಾಂಡ್ಲಿ ಹಿಡಿದು ಸ್ವಚ್ಛತೆ ಕಾರ್ಯದಲ್ಲಿ ತೊಡಗಿದರು.

ಗಂಗಾದೇವಿ ದೇಗುಲದ ಕಟ್ಟಡದ ಹಿಂಭಾಗದಲ್ಲಿ ತುಂಬಿಕೊಂಡಿದ್ದ ಎರಡು ಟ್ರ್ಯಾಕ್ಟರ್‌ ಹೂಳನ್ನು ತೆಗೆದು ಟ್ರ್ಯಾಕ್ಟರ್‌ಗೆ ತುಂಬಿದರು. ಹಾಗೆಯೇ ಪುಣ್ಯಕ್ಷೇತ್ರದ ಆವರಣದಲ್ಲಿ ಬೆಳೆದಿದ್ದ ಪಾರ್ಥೇನಿಯಂ ಹಾಗೂ ಕಾಡು ಜಾತಿಯ ಗಿಡಗಳು, ಪ್ಲಾಸ್ಟಿಕ್‌ ವಸ್ತು, ಕಸ–ಕಡ್ಡಿ ತೆಗೆದು ಟ್ರ್ಯಾಕ್ಟರ್‌ನಲ್ಲಿ ಸಾಗಿಸಿದರು. ಮಧ್ಯಾಹ್ನ 1.30ರವರೆಗೂ ಸ್ವಚ್ಛತೆ ಮಾಡಿದರು.

ತಾಲ್ಲೂಕು ಯುವ ಬ್ರಿಗೇಡ್‌ ಸಂಚಾಲಕ ಪ್ರದೀಪ್‌ ಮಾತನಾಡಿ, ‘ಕಳೆದ ವರ್ಷ ಪಟ್ಟಣದ ಐತಿಹಾಸಿಕ ಹೊಂಡದ ಹೂಳು ತೆಗೆಯಲಾಯಿತು. ಈ ಕಾರ್ಯದಿಂದ ಅಂತರ್ಜಲ ವೃದ್ಧಿಗೆ ಒಂದೊಷ್ಟು ಸಹಕಾರಿಯಾಗಿತ್ತು. ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇದಿದ್ದರಿಂದ ನಮ್ಮ ಕೆಲಸ ರಾಜಕೀಯ ಪ್ರೇರಿತವಾಗಬಾರದೆಂಬ ಕಾರಣದಿಂದ 4 ತಿಂಗಳು ಸ್ವಚ್ಛತೆ ಕಾರ್ಯ ನಿಲ್ಲಿಸಿದ್ದೆವು. ಈಗ ಮತ್ತೆ ಆರಂಭಿಸಿದ್ದೇವೆ’ ಎಂದು ತಿಳಿಸಿದರು.

ಸಮಾಜ ಸೇವಕ ಎ.ಆರ್‌.ಶಮಂತ್‌ ಮಾತನಾಡಿ, ‘ಇದು ಧಾರ್ಮಿಕ ಪಾವಿತ್ರ್ಯ ಕ್ಷೇತ್ರವಾಗಿದ್ದು, ನಿತ್ಯವೂ ಸಾವಿರಾರು ಭಕ್ತರು ತಮ್ಮ ಕಷ್ಟಗಳ ನಿವಾರಣೆಗೆ ಪ್ರಾರ್ಥಿಸಿ ಇಲ್ಲಿಗೆ ಬರುತ್ತಾರೆ. ಇಂತಹ ಕ್ಷೇತ್ರದ ಐತಿಹಾಸಿಕ ಹಿರಿಮೆಗೆ ಧಕ್ಕೆಯಾಗದಂತೆ ತಾಲ್ಲೂಕು ಆಡಳಿತ ಕಾಳಜಿ ವಹಿಸಬೇಕು. ಭಕ್ತರಿಗೆ ಮೂಲಸೌಕರ್ಯ ಒದಗಿಸಬೇಕು. ಗಂಗೆ ಕೊಳದ ನೀರನ್ನು ಚರಂಡಿಗೆ ಬಿಡದೇ ಐತಿಹಾಸಿಕ ಹೊಂಡಕ್ಕೆ ಬಿಡಲು ಕ್ರಮ ಕೈಗೊಳ್ಳಬೇಕು. ಸ್ವಚ್ಛತೆಗೂ ಪ್ರಾಶಸ್ತ್ಯ ನೀಡಬೇಕು’ ಎಂದು ಮನವಿ ಮಾಡಿದರು.

ಡಿ.ರಾಮಚಂದ್ರಪ್ಪ, ಮೋಹನ್‌ ಗುಜ್ಜಾರ್‌, ಪ್ರಸನ್ನಕುಮಾರ್‌, ನಾಗಶೇಖರ್‌, ರಂಗಸ್ವಾಮಿ, ಮಂಜುನಾಥ್‌, ಅರುಣ್‌, ಸೋದರಿ ನಿವೇದಿತಾ ಪ್ರತಿಷ್ಠಾನದ ಎನ್‌.ಎಂ.ಜ್ಯೋತಿ, ಜಿ.ಎ.ಮಾನಸಾ, ವಿಂದ್ಯಾ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.

ದೇಗುಲ ಜೀರ್ಣೋದ್ಧಾರದಿಂದ ಕ್ಷೇತ್ರದ ಮೂಲ ಸಂಸ್ಕೃತಿಗೆ ಧಕ್ಕೆಯಾಗಬಾರದು. ಇಲ್ಲಿದ್ದ ಗಂಗೆ, ಯಮುನಾ ಹಾಗೂ ಸರಸ್ವತಿ ಈ ಮೂರು ಕೊಳಗಳನ್ನು ಉಳಿಸಬೇಕು.
ಎ.ಆರ್‌.ಶಮಂತ್‌, ಸಮಾಜ ಸೇವಕ ಹೊಸದುರ್ಗ

ಕ್ಷೇತ್ರದ ಆವರಣದ ಸ್ವಚ್ಛತೆ ಕಾಪಾಡಬೇಕು ಎಂಬ ಸೂಚನೆಯ ನಾಮಫಲಕಗಳನ್ನು ಹಾಕಬೇಕು. ಹಾಗೆಯೇ ಡಸ್ಟ್‌ಬಿನ್‌ಗಳ ವ್ಯವಸ್ಥೆ ಮಾಡಬೇಕು.
ಡಿ.ರಾಮಚಂದ್ರ, ಬಿಜೆಪಿ ನಗರ ಘಟಕದ ಅಧ್ಯಕ್ಷ

ಐತಿಹಾಸಿಕ ಕ್ಷೇತ್ರವನ್ನು ಸ್ವಚ್ಛಗೊಳಿಸುತ್ತಿರುವುದು ಸಂತಸ ತಂದಿದೆ. ಇಂತಹ ಪುಣ್ಯಕ್ಷೇತ್ರವನ್ನು ಪ್ರವಾಸಿ ತಾಣವಾಗಿ ರೂಪಿಸಲು ಕ್ರಮ ಕೈಗೊಳ್ಳಬೇಕು.
ಎನ್‌.ಎಂ.ಜ್ಯೋತಿ, ಸೋದರಿ ನಿವೇದಿತಾ ಪ್ರತಿಷ್ಠಾನದ ಸದಸ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !