ಹಿರಿಯೂರು: ವಾಣಿವಿಲಾಸ ಜಲಾಶಯ ಸತತವಾಗಿ ಭರ್ತಿಯಾಗಿದ್ದರೂ ಅಲ್ಲಿಂದ ಆರೇಳು ಕಿ.ಮೀ. ದೂರದಲ್ಲಿರುವ ಗ್ರಾಮಗಳ ರೈತರ ಅಡಿಕೆ ತೋಟಗಳಿಗೆ ಫೆಬ್ರುವರಿಯಲ್ಲೇ ಬೇಸಿಗೆಯ ಬಿಸಿ ತಟ್ಟಿದೆ. ನೀರಿನ ಕೊರತೆ ಕಾಡುತ್ತಿದ್ದು ತೋಟ ಉಳಿಸಿಕೊಳ್ಳುವುದಕ್ಕಾಗಿ ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

ಸಮೀಪದಲ್ಲೇ ಜಲಾಶಯವಿದ್ದರೂ ಭರಮಗಿರಿ, ಗೌನಹಳ್ಳಿ, ಭೂತಯ್ಯನಹಟ್ಟಿ ಭಾಗದ ಕೆರೆಗಳು ನೀರಿಲ್ಲದೇ ಒಣಗಿ ಹೋಗಿವೆ. ವಿ.ವಿ. ಸಾಗರ ಅಣೆಕಟ್ಟೆಯಿಂದ ನೀರು ಪೂರೈಸುವ ಪೈಪ್ಲೈನ್ ಕೂಗಳತೆ ದೂರದಲ್ಲಿದ್ದರೂ ಇಲ್ಲಿಯವರೆಗೂ ಕೆರೆ ತುಂಬಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬೇಸಿಗೆ ಅವಧಿಯಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಸಾವಿರಾರು ಎಕರೆ ಅಡಿಕೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ.

ಜಲಾಶಯದ ನೀರು ದೊರೆಯುತ್ತದೆ ಎಂಬ ವಿಶ್ವಾಸದಿಂದ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆದಿದ್ದಾರೆ. ಆದರೆ, ಅವವರ ಊರುಗಳ ಕೆರೆಗಳಿಗೆ ನೀರು ತಲುಪದ ಕಾರಣ ತೋಟ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಪ್ರತಿವರ್ಷ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಇಂತಹ ಪರಿಸ್ಥಿತಿ ಬರುತ್ತಿತ್ತು. ಈಗ ಫೆಬ್ರುವರಿಯಲ್ಲೇ ಬಂದಿರುವುದು ಆತಂಕಕ್ಕೀಡು ಮಾಡಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

‘1,200 ಅಡಿವರೆಗೆ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಕೊರೆಸಿದ ನಾಲ್ಕು ಬಾವಿಯಲ್ಲಿ ಒಂದರಲ್ಲಿ ಮಾತ್ರ ಸ್ವಲ್ಪ ನೀರು ಸಿಕ್ಕಿತ್ತು. ಈಗ ಬೇಸಿಗೆಯಲ್ಲಿ ಅದೂ ಕೈಕೊಟ್ಟಿದೆ. ನಮ್ಮ 3 ಎಕರೆ ಅಡಿಕೆ ತೋಟ ಉಳಿಸಿಕೊಳ್ಳಲು 15 ದಿನಗಳಿಂದ ಟ್ಯಾಂಕರ್ನಿಂದ ನೀರು ತಂದು ಹಾಯಿಸುತ್ತಿದ್ದೇವೆ’ ಎಂದು ಗೌನಹಳ್ಳಿ ಗ್ರಾಮದ ರೈತ ಜಿ.ಎಸ್. ಬಸವರಾಜು ಹೇಳಿದರು.

ಸಾಕಷ್ಟು ರೈತರು ತೋಟದಲ್ಲಿ ತೊಟ್ಟಿ ನಿರ್ಮಿಸಿಕೊಂಡಿದ್ದು, ತಾಡಪಾಲು ಹೊದಿಕೆ ಹೊದಿಸಿ ನೀರು ಸಂಗ್ರಹಿಸಿಕೊಳ್ಳುತ್ತಿದ್ದಾರೆ. 12 ಕಿ.ಮೀ. ದೂರದಲ್ಲಿರುವ ಮಾರಿಕಣಿವೆ ಸಮೀಪದ ಹಳ್ಳದಿಂದ ಟ್ಯಾಂಕರ್ನಲ್ಲಿ ನೀರು ತರುತ್ತಿದ್ದಾರೆ. ತೋಟಕ್ಕೆ ಒಂದು ಟ್ಯಾಂಕರ್ ನೀರು ತರಲು ₹ 1,500 ಖರ್ಚು ಬರುತ್ತಿದೆ ಎಂದು ಅವರು ವಿವರಿಸಿದರು.

‘ಅಡಿಗೆ ಗಿಡಗಳ ಬುಡಕ್ಕೆ ನೀರು ಹಾಯಿಸುತ್ತೇವೆ. ದಿನಕ್ಕೆ ₹ 6,000 ಖರ್ಚು ಬರುತ್ತಿದೆ. ಮಳೆ ಸುರಿಯುವವರೆಗೂ ನಮ್ಮ ಪಾಡು ಇದೇ. 2017ರಲ್ಲಿ ಬರ ಬಂದು ಸಾವಿರಾರು ಎಕರೆ ಅಡಿಕೆ ನಾಶವಾದ ದೃಶ್ಯ ಈಗಲೂ ನಮ್ಮ ಕಣ್ಣಮುಂದಿದೆ. ಅಂತಹ ಪರಿಸ್ಥಿತಿ ಈಗ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ’ ಎಂದು ಗೋಗುದ್ದು ಗ್ರಾಮದ ಶೇಖರಪ್ಪ ಹೇಳಿದರು.

ಗೌನಹಳ್ಳಿ ಆಸುಪಾಸಿನಲ್ಲಿರುವ ಗುಡಿಹಳ್ಳಿ, ಗೋಗುದ್ದು, ಭೂತಯ್ಯನಹಟ್ಟಿ ಗ್ರಾಮಗಳಲ್ಲಿ ರೈತರು ಸಾವಿರಾರು ಎಕರೆಯಲ್ಲಿ ಅಡಿಕೆ ನಾಟಿ ಮಾಡಿದ್ದಾರೆ. ಸಾಕಷ್ಟು ನೀರಿದ್ದರೆ ಎಕರೆಗೆ ಆರೇಳು ಲಕ್ಷ ಆದಾಯ ಪಡೆಯಬಹುದಿದ್ದ ರೈತರು ಈಗ ತೋಟ ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ.

ಗೌನಹಳ್ಳಿ ಕೆರೆ ವಾಣಿವಿಲಾಸ ಅಣೆಕಟ್ಟೆಯಿಂದ ಕೇವಲ 8 ಕಿ.ಮೀ. ದೂರದಲ್ಲಿದೆ. ಊರಿನವರೆಗೆ ಪೈಪ್ ಲೈನ್ ಇದೆ. ಊರಿನ ಒಳಗಿಂದ ಕೆರೆಯವರೆಗೆ ಪೈಪ್ ಲೈನ್ ಮಾಡಿದಲ್ಲಿ ಕೆರೆಗೆ ನೀರು ಹರಿಸಬಹುದು. ಗೌನಹಳ್ಳಿ ಮತ್ತು ಭೂತಯ್ಯನಹಟ್ಟಿ ಕೆರೆಗಳು ತುಂಬಿದರೆ ಭರಂಪುರ, ಕೆಸಿ ರೊಪ್ಪ, ಮಲ್ಲರಸನಹಟ್ಟಿ, ಹುಲಿತೊಟ್ಲು, ಆಲಮರದಟ್ಟಿ, ಆದಿರಾಳು, ಬೀರೇನಹಳ್ಳಿ, ಗುಡಿಹಳ್ಳಿವರೆಗೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಗೌನಹಳ್ಳಿ ಕೆರೆಗೆ ಪೈಪ್ಲೈನ್ ಕಾಮಗಾರಿ ಮಾಡಬೇಕು ಎಂದು ರೈತರು ಒತ್ತಾಯಿಸಿದರು.

ನೀರಿನ ಲಭ್ಯತೆ ನೋಡಿ ಯೋಜನೆ ಜಾರಿ

‘ವಾಣಿವಿಲಾಸ ಸಾಗರ ಜಲಾಶಯ ಕೃಷ್ಣಾ ಕಣಿವೆಗೆ ಸೇರಿದ್ದು ನೀರನ್ನು ಹೇಗೆಂದರೆ ಹಾಗೆ ಬಳಸುವಂತಿಲ್ಲ. ನೀರಿನ ಲಭ್ಯತೆ ನೋಡಿಕೊಂಡು ಯೋಜನೆ ರೂಪಿಸಬೇಕು. ಮೊದಲ ಹಂತದಲ್ಲಿ ಜವನಗೊಂಡನಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುತ್ತೇವೆ. ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಆದಷ್ಟು ಬೇಗ ಆ ಕಾರ್ಯವನ್ನು ಮಾಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.