ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಚಳವಳಿಯ ಚೈತನ್ಯ ಭೂಮಿ ಸ್ಮಾರಕ

ಜಯಣ್ಣ ಶ್ರದ್ಧಾಂಜಲಿ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಆಶಯ
Last Updated 21 ಡಿಸೆಂಬರ್ 2020, 4:23 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೋರಾಟಗಾರ ಎಂ.ಜಯಣ್ಣ ಅವರ ಸಮಾಧಿ ಸ್ಥಳದಲ್ಲಿ ನಿರ್ಮಿಸಲು ಉದ್ದೇಶಿಸಿದ ಸ್ಮಾರಕ ದಲಿತ ಚಳವಳಿಯ ಚೈತನ್ಯ ಭೂಮಿಯಾಗಲಿ ಎಂದು ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕ್ಯಾದಿಗೆರೆಯ ಸ್ಮಾರಕ ಸ್ಥಳದಲ್ಲಿ ಎಂ.ಜಯಣ್ಣ ಮೊಮೋರಿಯಲ್‌ ಚಾರಿಟಬಲ್‌ ಟ್ರಸ್ಟ್‌ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ದಲಿತ ಚಳವಳಿಯ ನೇತಾರ ಪ್ರೊ.ಬಿ.ಕೃಷ್ಣಪ್ಪ ಸೇರಿ ಅನೇಕರನ್ನು ಕಳೆದುಕೊಂಡಿದ್ದೇವೆ. ಕೃಷ್ಣಪ್ಪ ಅವರ ನಂಬಿಕಸ್ಥ ಯೋಧರ ರೀತಿಯಲ್ಲಿದ್ದ ಜಯಣ್ಣ ನಿಧನರಾಗಿದ್ದಾರೆ. ದಲಿತ ಸಂಘರ್ಷ ಸಮಿತಿ ನಂಬಿದ್ದ ತತ್ವ, ಆದರ್ಶನಗಳನ್ನು ಕೊನೆಯವರೆಗೆ ಪಾಲನೆ ಮಾಡಿಕೊಂಡು ಬಂದವರು ಜಯಣ್ಣ’ ಎಂದು ನೆನಪಿಸಿಕೊಂಡರು.

‘ಒಳಮೀಸಲಾತಿಯ ಬಗೆಗೆ ಜಯಣ್ಣ ಮೊದಲಿನಿಂದಲೂ ಧ್ವನಿ ಎತ್ತಿದ್ದರು. 1999ರಿಂದಲೂ ಅವರಿಗೆ ಜತೆಯಾಗಿದ್ದೆ. ಕೊನೆಯ ದಿನದವರೆಗೆ ಅತ್ಯಂತ ಪ್ರಾಮಾಣಿಕವಾಗಿ ಹೋರಾಟ ಮಾಡಿದರು. ಆದರೂ, ಈ ಹೋರಾಟಕ್ಕೆ ಮುಕ್ತಿ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕವಿ ಸಿದ್ದಲಿಂಗಯ್ಯ, ‘ಜಯಣ್ಣ ಅವರು ಕಡುಕಷ್ಟದಲ್ಲೇ ಬದುಕು ಸವೆಸಿದರು. ಬಡತನದಲ್ಲಿ ಜೀವನ ಸಾಗಿಸಿದರೂ ಆದರ್ಶಪ್ರಾಯವಾಗಿದ್ದರು. ಹಾಸಿಗೆ–ಹೊದಿಕೆ ಇರದ ಸಂದರ್ಭದಲ್ಲಿ ಗೋಣಿಚೀಲದಲ್ಲಿ ಮಲಗುತ್ತಿದ್ದರು. ಸಮಾಜದ ಎಲ್ಲರ ಪ್ರೀತಿಗೆ ಪಾತ್ರರಾದರು. ಭದ್ರಾ ಮೇಲ್ದಂಡೆ ಯೋಜನೆಗೆ ಹೋರಾಟ ನಡೆಸಿ ಇತಿಹಾಸ ಸೃಷ್ಟಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ದಲಿತ ಚಳವಳಿಯಲ್ಲಿ ಬೆಳೆದರೂ ದಲಿತ ಸಮುದಾಯಕ್ಕೆ ಅವರು ಸೀಮಿತವಾಗಲಿಲ್ಲ. ರೈತರು ಸೇರಿದಂತೆ ಸರ್ವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಸಮಾಜದ ಪ್ರತಿಯೊಬ್ಬರ ನೋವಿಗೆ ಸ್ಪಂದಿಸಿ ಹೊಸ ಮಾರ್ಗವೊಂದನ್ನು ಮುಂದಿಟ್ಟಿದ್ದಾರೆ. ವಿನಯಶೀಲತೆ, ಸಜ್ಜನಿಕೆ ಹಾಗೂ ನಮ್ರತೆಯ ಮೂಲಕ ಎಲ್ಲರ ಮನ ಗೆದ್ದಿದ್ದರು’ ಎಂದರು.

ಜಯಣ್ಣ ಅವರ ಪತ್ನಿ ಮಾರಕ್ಕ, ಬಿಎಸ್‌ಪಿ ಮುಖಂಡ ಮಾರಸಂದ್ರ ಮುನಿಯಪ್ಪ, ದಲಿತ ಮುಖಂಡರಾದ ಮೋಹನ್‌ ರಾಜ್‌, ಕಲಿವೀರ, ಚಳ್ಳಕೆರೆ ನಗರಸಭೆ ಅಧ್ಯಕ್ಷೆ ಜಯಲಕ್ಷ್ಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನರಸಿಂಹರಾಜು, ಪ್ರಕಾಶ
ಮೂರ್ತಿ, ಮುಂಡರಗಿ ನಾಗರಾಜ ಇದ್ದರು.

ಪಾದಪೂಜೆ ಪ್ರಸಂಗ ಉಲ್ಲೇಖ

ದಲಿತರನ್ನು ನೋಡುವ ಸಮಾಜದ ದೃಷ್ಟಿ ಬದಲಾಗಿದೆ ಎಂಬುದನ್ನು ಮನದಟ್ಟು ಮಾಡಿಸಲು ಕವಿ ಸಿದ್ದಲಿಂಗಯ್ಯ ಅವರು ಪಾದಪೂಜೆಯ ಪ್ರಸಂಗವೊಂದನ್ನು ಭಾಷಣದಲ್ಲಿ ಉಲ್ಲೇಖಿಸಿದರು.

‘ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್‌ ಅವರು ದೇಶಕ್ಕೆ ಒಳಿತಾಗಲಿ ಎಂಬ ಆಶಯದಿಂದ ಬ್ರಾಹ್ಮಣರ ಪಾದಪೂಜೆ ಮಾಡಿದ್ದರು. ರಾಮಮನೋಹರ ಲೋಹಿಯಾ ಸೇರಿ ಅನೇಕರ ಟೀಕೆಗೆ ಗುರಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪೌರಕಾರ್ಮಿಕರ ಪಾದಪೂಜೆ ನೆರವೇರಿಸಿದರು. ದಲಿತರನ್ನು ನೋಡುವ ದೃಷ್ಟಿಕೋನ ಬದಲಾಗಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಸಿಗಲಾರದು’ ಎಂದರು.

‘ಟ್ರಸ್ಟ್‌ ಸಮಾಜದ ಆಸ್ತಿ’

ಎಂ.ಜಯಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಟ್ರಸ್ಟ್‌ ಎಚ್‌.ಆಂಜನೇಯ ಹಾಗೂ ಎ.ನಾರಾಯಣಸ್ವಾಮಿ ಅವರ ಸ್ವತ್ತಲ್ಲ. ಇದು ಇಡೀ ಸಮಾಜದ ಆಸ್ತಿ ಎಂದು ಸಂಸದ ಎ.ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.

‘ಕೆಲ ದಿನಗಳಿಂದ ಈ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ. ಟ್ರಸ್ಟ್‌ ಅಭಿವೃದ್ಧಿಗೆ ಕೈಜೋಡಿಸಿದ್ದೇವೆ. ಇದು ಎಲ್ಲರಿಗೂ ಸೇರಿದ್ದು. ಇದರ ಕಾರ್ಯನಿರ್ವಹಣೆಯಲ್ಲಿ ಯಾರೊಬ್ಬರು ಹಸ್ತಕ್ಷೇಪ ಮಾಡುವುದಿಲ್ಲ’ ಎಂದರು.

‘ಜಯಣ್ಣ ಅವರು ಕೇವಲ ದಲಿತರ ಧ್ವನಿ ಆಗಿರದೇ ರೈತರ ಕನಸಿನ ನೀರಾವರಿ ಯೋಜನೆಗೆ ನಾಯಕತ್ವ ನೀಡಿದರು. ದಲಿತ ಚಳವಳಿಗೆ ಅನೇಕರು ಜೀವತ್ಯಾಗ ಮಾಡಿದ್ದಾರೆ. ಆದರೂ, ದಲಿತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಶಾಸಕ, ಸಚಿವ, ಸಂಸದನರಾದರೂ ಬೇಸರವಿದೆ’ ಎಂದರು.

ಹತ್ತು ಕೋಟಿ ವೆಚ್ಚದ ಸ್ಮಾರಕ

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕ್ಯಾದಿಗೆರೆ ಬಳಿ ನಿರ್ಮಿಸಲು ಉದ್ದೇಶಿಸಿದ ಸ್ಮಾರಕದ ರೂಪುರೇಷೆಯನ್ನು ಸಂಸದ ಎ.ನಾರಾಯಣಸ್ವಾಮಿ ಸಭೆಯ ಮುಂದಿಟ್ಟರು.

ಸಮಾಧಿ ಸ್ಥಳದಲ್ಲಿ ಮಂಟಪ, ಸಮೀಪದಲ್ಲೇ ಸಭಾಂಗಣ, ಕೊಠಡಿಗಳು ಇರಲಿವೆ. ಬುದ್ಧನ ಪ್ರತಿಮೆ ಮಾದರಿಯ ವಿನ್ಯಾಸ ಸಿದ್ಧಗೊಂಡಿದೆ. ಭವಿಷ್ಯದ ಅಭಿವೃದ್ಧಿಯ ದೃಷ್ಟಿಯೂ ರೂಪುರೇಷೆಯಲ್ಲಿದೆ. ಹಂತಹಂತವಾಗಿ ಸ್ಮಾರಕ ಅಭಿವೃದ್ಧಿಯಾಗಲಿದೆ
ಎಂದು ಸಭೆಗೆ ಮಾಹಿತಿ ನೀಡಲಾಯಿತು.

* ದಲಿತ ಚಳವಳಿಗೆ ಜಯಣ್ಣ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು. ಶೋಷಿತರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದರು. ಸ್ಮಾರಕದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳೋಣ.

- ಎಚ್‌.ಆಂಜನೇಯ, ಮಾಜಿ ಸಚಿವ

* ಮೇಲ್ಜಾತಿಗೆ ಶೇ 10ರಷ್ಟು ಮೀಸಲಾತಿ ನೀಡಲಾಗಿದೆ. ಆದಾಯದ ಮಿತಿಯನ್ನು ₹ 8 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಪರಿಶಿಷ್ಟರ ಆದಾಯದ ಮಿತಿ ₹ 2 ಲಕ್ಷವಿದೆ. ಈ ತಾರತಮ್ಯವನ್ನು ಸಂಸದರು, ಶಾಸಕರು ಪ್ರಶ್ನಿಸಬೇಕು.

-ಮಾವಳ್ಳಿ ಶಂಕರ್‌, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ

* 1970ರ ದಶಕದಿಂದಲೂ ಜಯಣ್ಣ ಅವರೊಂದಿಗೆ ಒಡನಾಟವಿತ್ತು. ಬದುಕಿನ ಸಂಕಷ್ಟದ ನಡುವೆಯೂ ಸಾಮಾಜಿಕ ಕಾರಣಗಳಿಗೆ ಹೋರಾಟಕ್ಕೆ ಧುಮುಕಿದರು. ಸ್ಮಾರಕದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವೆ.

- ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ, ಚಿತ್ರದುರ್ಗ

* ಅಂಬೇಡ್ಕರ್‌ ಆಶಯಗಳನ್ನು ಸಾಕಾರಗೊಳಿಸಲು ಜಯಣ್ಣ ಶ್ರಮಿಸಿದರು. ಭದ್ರಾ ಮೇಲ್ದಂಡೆ ಯೋಜನೆಗೆ ಅವರು ನೀಡಿದ ಕೊಡುಗೆ ಅನನ್ಯ. ಜಿಲ್ಲೆಯ ಜನರು ಅವರನ್ನು ಎಂದಿಗೂ ಮರೆಯಲಾರರು.

-ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT