ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹ

ರಾಜ್ಯ ಕಾಡುಗೊಲ್ಲರ ಸಂಘದ ಜಿಲ್ಲಾ ಘಟಕದ ಪ್ರತಿಭಟನೆ
Published 22 ನವೆಂಬರ್ 2023, 6:43 IST
Last Updated 22 ನವೆಂಬರ್ 2023, 6:43 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಹಾಗೂ ಕಾಡುಗೊಲ್ಲ ಅಭಿವೃದ್ಧಿ ನಿಗಮ ಪುನಶ್ಚೇತನಗೊಳಿಸಲು ಆಗ್ರಹಿಸಿ ರಾಜ್ಯ ಕಾಡುಗೊಲ್ಲರ ಸಂಘದ ಜಿಲ್ಲಾ ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬಹುತೇಕ ಗೊಲ್ಲರಹಟ್ಟಿಗಳಲ್ಲಿ ಕಾಡುಗೊಲ್ ಸಮುದಾಯದವರು ದನ-ಕುರಿ, ಪಶುಪಾಲನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಕಾಡಿನಲ್ಲಿ ಮತ್ತು ಊರಿಂದ ಊರಿಗೆ ಮೇವು ನೀರಿಗೆ ಅಲೆಯುತ್ತಾ ಸಂಕಷ್ಟದಲ್ಲಿದ್ದಾರೆ. ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಒಳಪಡಿಸಲು ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಅದರ ವರದಿಯು ರಾಜ್ಯ ಸರ್ಕಾರದಿಂದ ಶಿಫಾರಸುಗೊಂಡು ಕೇಂದ್ರ ಸರ್ಕಾರದ ಮುಂದಿದೆ. ಈ ಬಗ್ಗೆ ರಾಜ್ಯ ಸರ್ಕಾರ ವಿಶೇಷ ಆಸಕ್ತಿವ ಹಿಸಿ ಕೇಂದ್ರ ಸರ್ಕಾರಕ್ಕೆ ಸಮುದಾಯದ ವಸ್ತುಸ್ಥಿತಿ ವಿವರಿಸಬೇಕು. ಈ ಮೂಲಕ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾಡುಗೊಲ್ಲ ಅಭಿವೃದ್ಧಿ ನಿಗಮವು ನೋಂದಣಿ ಹಂತದಲ್ಲಿದೆ. ಇದನ್ನು ಕೂಡಲೇ ನೋಂದಣಿ ಮಾಡಿಸಿ ಅಧ್ಯಕ್ಷರು, ಪದಾಧಿಕಾರಿಗಳನ್ನೊಳಗೊಂಡ ನಿರ್ದೇಶಕ ಮಂಡಳಿ ರಚಿಸಬೇಕು. ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಕಾಡುಗೊಲ್ಲರು ವಾಸಿಸುವ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಬೇಕು. ಜತೆಗೆ ಹಟ್ಟಿಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಮುದಾಯದ ಹೆಣ್ಣು ಮಕ್ಕಳ ಆರೋಗ್ಯ, ವಿದ್ಯಾಭ್ಯಾಸಕ್ಕಾಗಿ ಸರ್ಕಾರ ‘ಶುಚಿತ್ವ ಮತ್ತು ಶಿಕ್ಷಣದೊಂದಿಗೆ ಅರಿವಿನೆಡೆಗೆ’ ಎಂಬ ಕಾರ್ಯಕ್ರಮ ರೂಪಿಸಬೇಕು. ಜತೆಗೆ ಸೂಕ್ತ ಅನುದಾನ ಮೀಸಲಿಟ್ಟು ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ರಾಜುಕುಮಾರ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ, ನಿವೃತ್ತ ಕೃಷಿ ಅಧಿಕಾರಿ ರಂಗಸ್ವಾಮಿ, ಆನಂದಪ್ಪ, ಪ್ರಕಾಶ್‌, ದೇವರಾಜ್, ಮಧುಗೌಡ, ವಿಕಾಸ್‌, ಕೇಶವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT