ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋವಾದಲ್ಲಿ ಶೀಘ್ರವೇ ಕನ್ನಡ ಭವನ: ಸಚಿವ ಶಿವರಾಜ್ ತಂಗಡಗಿ

Published 17 ಡಿಸೆಂಬರ್ 2023, 8:27 IST
Last Updated 17 ಡಿಸೆಂಬರ್ 2023, 8:27 IST
ಅಕ್ಷರ ಗಾತ್ರ

ಗೋವಾ: ‘ಗೋವಾ ರಾಜ್ಯದಲ್ಲಿ ಶೀಘ್ರವೇ ಕನ್ನಡ ಭವನ ನಿರ್ಮಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಸ್ಥಳೀಯ ಕನ್ನಡಿಗರಿಗೆ ಭರವಸೆ ನೀಡಿದರು.

ಸಚಿವರಾದ ಬಳಿಕ‌ ಮೊದಲ ಬಾರಿಗೆ ಗೋವಾ ರಾಜ್ಯಕ್ಕೆ ಶನಿವಾರ ಭೇಟಿ ನೀಡಿದ ಅವರು, ದಕ್ಷಿಣ ಗೋವಾದ ಜುವಾರಿ ನಗರದಲ್ಲಿನ ಕನ್ನಡಿಗರ ಸಮಸ್ಯೆ ಆಲಿಸಿದ ಬಳಿಕ‌ ಮಾತನಾಡಿದರು.

‘ಕೇರಳ, ಮಹಾರಾಷ್ಟ್ರದಲ್ಲಿ ಅಲ್ಲಿನ‌ ‌ಸರ್ಕಾರ ನೀಡಿದ ಸ್ಥಳದಲ್ಲಿ ಕನ್ನಡ ಭವನ ನಿರ್ಮಿಸಲಾಗಿದೆ. ಗೋವಾದಲ್ಲಿ ಕನ್ನಡ ಭವನ ನಿರ್ಮಿಸಲು ಜಾಗ ನೀಡುವಂತೆ ಹಲವು ಬಾರಿ ಇಲ್ಲಿನ‌ ಸರ್ಕಾರಕ್ಕೆ ಕೋರಲಾಗಿತ್ತು. ಆದರೆ, ಭೂಮಿ ನೀಡಲು ಇಲ್ಲಿನ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಈ ಬಾರಿ ನಾವೇ ಒಂದು ಎಕರೆಯಷ್ಟು ಭೂಮಿ‌ ಖರೀದಿಸಿ ಕನ್ನಡ ಭವನ ನಿರ್ಮಿಸುತ್ತೇವೆ’ ಎಂದರು.

‘ದಕ್ಷಿಣ ಗೋವಾದಲ್ಲಿ ಒಂದೆರೆಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಲಾಗಿದೆ. ಈ‌ ಭಾಗದ ಜಿಲ್ಲಾಧಿಕಾರಿ‌ಯವರನ್ನು ಸಂಪರ್ಕಿಸಿ, ಶೀಘ್ರವೇ ಜಾಗದ ಖರೀದಿ ಪ್ರಕ್ರಿಯೆ ಅಂತಿಮಗೊಳಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಮುಂದಿನ‌ ಆಯವ್ಯಯದಲ್ಲಿ ಕನ್ನಡಭವನ ನಿರ್ಮಾಣದ ಬಗ್ಗೆ ಘೋಷಣೆ ಮಾಡಿಸಿ, ಅವರಿಂದಲೇ ಭೂಮಿ ಪೂಜೆ ನೆರವೇರಿಸಲಾಗುವುದು’ ಎಂದರು.‌

‘ಗೋವಾದಲ್ಲಿ ಒಟ್ಟು 15 ಲಕ್ಷ ಜನಸಂಖ್ಯೆ ಇದ್ದು, ಈ ಪೈಕಿ ನಾಲ್ಕರಿಂದ ಐದು ಲಕ್ಷ‌ ಕನ್ನಡಿಗರೇ ಇದ್ದಾರೆ. ನೀವು ಮನಸ್ಸು ಮಾಡಿದರೆ ಮೂರ್ನಾಲ್ಕು ಶಾಸಕರನ್ನು ನೀವೇ ಆಯ್ಕೆ ಮಾಡಬಹುದು’ ಎಂದರು.

ಗೋವಾ ಬೈನಾದಲ್ಲಿ ಉತ್ತರ ಕರ್ನಾಟಕದವರೇ ಹೆಚ್ಚಿದ್ದು, ಸಂತ್ರಸ್ತರಾಗಿರುವ ಅವರಿಗೆ ಗೋವಾ ಸರ್ಕಾರ ಪುನರ್ವಸತಿ ಕಲ್ಪಿಸಿಕೊಟ್ಟಿಲ್ಲ. ಸಂತ್ರಸ್ತರಿಗೆ ಗೋವಾ ಸರ್ಕಾರ ಪುನರ್ವಸತಿ ಕಲ್ಪಿಸಿಕೊಡಬೇಕು. ಗೋವಾ ರಾಜ್ಯ ಶೇ 70ರಷ್ಟು ಪ್ರವಾಸೋದ್ಯಮವನ್ನು ಅವಲಂಬಿಸಿದ್ದು, ಇಲ್ಲಿಗೆ ಭೇಟಿ ನೀಡುವವರಲ್ಲಿ ಕನ್ನಡಿಗರೇ ಹೆಚ್ಚಿದ್ದಾರೆ. ಇಲ್ಲಿನ ವಿದ್ಯುತ್ ಉತ್ಪಾದನಾ ಘಟಕದಲ್ಲಿ‌ ಕನ್ನಡಿಗರು ಹೆಚ್ಚಿದ್ದಾರೆ. ಹೀಗಾಗಿ, ಕನ್ನಡಿಗರಿಗೆ ಗೋವಾ ಸರ್ಕಾರ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.

ಗೋವಾದಲ್ಲಿ ಕನ್ನಡ ಭವನ ನಿರ್ಮಿಸಲು ದಕ್ಷಿಣ ಗೋವಾದ ಸ್ಥಳಗಳಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಭೇಟಿ ನೀಡಿದರು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ‌‌ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಗೋವಾ ಕನ್ನಡ ಸಾಹಿತ್ಯ ಪರಿಷತ್, ಗೋವಾ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಗೋವಾ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT