ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಕವಾಡಿಗರಹಟ್ಟಿ ಕಾಯಕಲ್ಪಕ್ಕೆ ಆಮೆ ವೇಗ

Published 10 ಜೂನ್ 2024, 7:34 IST
Last Updated 10 ಜೂನ್ 2024, 7:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಚರಂಡಿಯಲ್ಲಿ ಬಿದ್ದ ತ್ಯಾಜ್ಯ ಕೊಳೆತು ಮೂಗಿಗೆ ಬಡಿಯುವ ದುರ್ನಾತ. ಮನೆಯ ಸುತ್ತ ಎಲ್ಲೆಂದರಲ್ಲಿ ಬಿದ್ದ ಕಸ. ಬಯಲಲ್ಲೇ ನೀರು ಕಾಯಿಸಿ ಸ್ನಾನ ಮಾಡುವ ಗಂಡಸರು. ಮನೆಯ ಎದುರು ನೂತನವಾಗಿ ಅಳವಡಿಸಿದ ನಲ್ಲಿ (ನಳ) ಸುತ್ತ ಕುಳಿತು ಪಾತ್ರೆ ತೊಳೆಯುವ ಮಹಿಳೆಯರು...

ನಗರದ 17ನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ಕವಾಡಿಗರಹಟ್ಟಿಯ ದೃಶ್ಯವಿದು. ಕಲುಷಿತ ನೀರು ಕುಡಿದು ಏಳು ಮಂದಿ ಮೃತಪಟ್ಟು, 240ಕ್ಕೂ ಅಧಿಕ ಜನರು ಅಸ್ವಸ್ಥಗೊಂಡ ಈ ಹಟ್ಟಿಯ ಚಿತ್ರಣ ಹತ್ತು ತಿಂಗಳು ಕಳೆದರೂ ಸುಧಾರಿಸಿಲ್ಲ. ಮೂಲಸೌಲಭ್ಯ ಕಲ್ಪಿಸುವುದಾಗಿ ಸರ್ಕಾರ ನೀಡಿದ ಭರವಸೆ ಪರಿಪೂರ್ಣವಾಗಿ ಈಡೇರಿಲ್ಲ. ನಿತ್ಯ ಬೆಳಿಗ್ಗೆ ಕಾಣುವ ಚಿತ್ರಣವನ್ನು ಗಮನಿಸಿದರೆ ಇಂತಹ ದುರಂತ ಮರುಕಳಿಸದು ಎಂದು ದೃಢವಾಗಿ ಹೇಳುವುದು ಕಷ್ಟ.

ಈ ದುರಂತವು ಸಾಂಕ್ರಾಮಿಕ ಕಾಯಿಲರಯಾದ ಕಾಲರಾದಿಂದ ಸಂಭವಿಸಿದೆ ಎಂಬುದನ್ನು ಸರ್ಕಾರ ಒಪ್ಪಿಕೊಂಡಿದೆ. ಸ್ವಚ್ಛತೆ, ಕುಡಿಯುವ ನೀರಿಗೆ ಒತ್ತು ನೀಡುವುದಾಗಿ ಭರವಸೆ ನೀಡಿತ್ತು. ನಾಗರಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಹಾಗೂ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆದಿತ್ತು. ಕುಡಿಯುವ ನೀರಿನ ಶುದ್ಧತೆ ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಲಾಗಿತ್ತು. ಇಂತಹ ದುರಂತ ಮತ್ತೆ ಸಂಭವಿಸದಂತೆ ಎಚ್ಚರವಹಿಸುವ ಭರವಸೆ ನೀಡಿತ್ತು. ಆದರೆ, ಸರ್ಕಾರಿ ಆಡಳಿತ ಯಂತ್ರ ತ್ವರಿತವಾಗಿ ಸ್ಪಂದಿಸದಿರುವ ಬಗ್ಗೆ ಜನರಿಗೆ ಅಸಮಾಧಾನವಿದೆ.

ಚಿತ್ರದುರ್ಗದ ಕವಾಡಿಗರಹಟ್ಟಿಯ ಮನೆ ಮುಂಭಾಗದಲ್ಲಿ ಅಳವಡಿಸಿ ಹೊಸ ನಲ್ಲಿಯ ಸಮೀಪದಲ್ಲಿ ಪಾತ್ರೆ ತೊಳೆಯುವ ಮಹಿಳೆಯರು ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗದ ಕವಾಡಿಗರಹಟ್ಟಿಯ ಮನೆ ಮುಂಭಾಗದಲ್ಲಿ ಅಳವಡಿಸಿ ಹೊಸ ನಲ್ಲಿಯ ಸಮೀಪದಲ್ಲಿ ಪಾತ್ರೆ ತೊಳೆಯುವ ಮಹಿಳೆಯರು ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ

ಕವಾಡಿಗರಹಟ್ಟಿಗೆ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ ₹ 3.07 ಕೋಟಿ ಹಾಗೂ ಸಮಾಜ ಕಲ್ಯಾಣ ಇಲಾಖೆ ₹ 1.03 ಕೋಟಿ ಅನುದಾನ ನೀಡಿವೆ. 2023ರ ಆಗಸ್ಟ್‌ನಲ್ಲಿ ದುರಂತ ಸಂಭವಿಸಿದ್ದು, ಸೆ. 9ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ನೀರಿನ ಕೊಳವೆ ಮಾರ್ಗ ನಿರ್ಮಾಣ, ಪ್ರತಿ ಮನೆಗೆ ನಳ ಸಂಪರ್ಕ, ನೂತನ ನೀರಿನ ಟ್ಯಾಂಕ್‌ ನಿರ್ಮಾಣ ಕಾಮಗಾರಿಯನ್ನು ನಗರಾಭಿವೃದ್ಧಿ ಇಲಾಖೆ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೈಗೆತ್ತಿಕೊಂಡಿದ್ದವು. ಮನೆ–ಮನೆ ನಳ ಸಂಪರ್ಕ, ನೂತನ ಟ್ಯಾಂಕ್‌ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಹೊಸ ಪೈಪ್‌ಲೈನ್‌ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ.

ಚಿತ್ರದುರ್ಗದ ಕವಾಡಿಗಹಟ್ಟಿಯಲ್ಲಿ ಚೊಂಬು ಹಿಡಿದು ಬಯಲುಶೌಚಕ್ಕೆ ತೆರಳುತ್ತಿರುವ ಮಹಿಳೆ ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗದ ಕವಾಡಿಗಹಟ್ಟಿಯಲ್ಲಿ ಚೊಂಬು ಹಿಡಿದು ಬಯಲುಶೌಚಕ್ಕೆ ತೆರಳುತ್ತಿರುವ ಮಹಿಳೆ ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ

ಕಲುಷಿತ ನೀರು ಕುಡಿದು ದುರಂತ ಸಂಭವಿಸಿದಾಗ ಭೇಟಿ ನೀಡಿದ್ದ ತಜ್ಞರ ತಂಡ ಕಾರಣ ಪತ್ತೆ ಮಾಡಿತ್ತು. ಪ್ರತಿ ಮನೆಗೆ ಸಂಪರ್ಕ ಕಲ್ಪಿಸಿದ ನೀರಿನ ಕೊಳವೆ ಮಾರ್ಗದಲ್ಲಿ ಚರಂಡಿಯ ಕೊಳಚೆ ಸೇರಿದ್ದು ಪರಿಶೀಲನೆಯ ವೇಳೆ ಬೆಳಕಿಗೆ ಬಂದಿತ್ತು. ಚರಂಡಿಯಲ್ಲಿ ಹಾದು ಹೋಗಿರುವ ಪೈಪ್‌ಗಳು ಅಸುರಕ್ಷಿತವಾಗಿರುವುದು ಗೊತ್ತಾಗಿತ್ತು. ಕೊಳವೆ ಮಾರ್ಗದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಲಾಗಿದ್ದು, ಚರಂಡಿ ಪಕ್ಕದಲ್ಲಿದ್ದ ಪೈಪ್‌ಗಳನ್ನು ಬೀದಿಯ ಮಧ್ಯದಲ್ಲಿ ಅಳವಡಿಸಲಾಗಿದೆ. ಎಲ್ಲ ಮನೆಗಳ ಎದುರು ಹೊಸ ನಲ್ಲಿಗಳು ಕಾಣುತ್ತಿವೆ.

ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ನಿಂತಿರುವುದು ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ನಿಂತಿರುವುದು ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ

ಸಮಾಜ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ₹ 1.03 ಕೋಟಿ ಅನುದಾನದಲ್ಲಿ ಚರಂಡಿ ನಿರ್ಮಾಣ, ಒಳಚರಂಡಿ ದುರಸ್ತಿ, ಸಾರ್ವಜನಿಕ ಶೌಚಾಲಯ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು. ಲೋಕಸಭಾ ಚುನಾವಣೆಗೂ ಮುನ್ನ ಟೆಂಡರ್‌ ಕರೆಯಲಾಗಿದ್ದು, ಗುತ್ತಿಗೆದಾರರು ಮುಂದೆ ಬಂದಿಲ್ಲ. ಟೆಂಡರ್‌ ಪ್ರಕ್ರಿಯೆ ಮತ್ತೊಮ್ಮೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕವಾಡಿಗರಹಟ್ಟಿಗೆ ಮೂಲಸೌಲಭ್ಯ ಕಲ್ಪಿಸುವ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ.

ಶೋಭಾ
ಶೋಭಾ
ಮನೆ ಬೀದಿಯಿಂದ ದೂರ ಇದೆ ಎಂಬ ಕಾರಣಕ್ಕೆ ನಲ್ಲಿ (ನಳ) ಸಂಪರ್ಕ ಕಲ್ಪಿಸಿಲ್ಲ. ಬೇರೆ ಮನೆಗಳ ನಲ್ಲಿಯಲ್ಲಿ ನೀರು ಹಿಡಿಯುತ್ತೇವೆ. ಎಲ್ಲ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದರೆ ಅನುಕೂಲ
ಶೋಭಾ ಪೆಟ್ಟಿಗೆ ಅಂಗಡಿ ವ್ಯಾಪಾರಿ ಕವಾಡಿಗರಹಟ್ಟಿ
ಗೌರಮ್ಮ
ಗೌರಮ್ಮ
ಹೆದ್ದಾರಿ ನಿರ್ಮಾಣಕ್ಕೆ ನಮ್ಮ ಮನೆ ತೆರವುಗೊಳಿಸಲಾಗುತ್ತಿದೆ. ಜೂನ್‌ ಅಂತ್ಯಕ್ಕೆ ಮನೆ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. ಪರ್ಯಾಯ ವಸತಿ ನಿವೇಶನದ ವ್ಯವಸ್ಥೆ ಇನ್ನೂ ಕಲ್ಪಿಸಿಲ್ಲ
ಗೌರಮ್ಮ ಕೂಲಿ ಕಾರ್ಮಿಕರು ಕವಾಡಿಗರಹಟ್ಟಿ
ಅಂಜಿನಪ್ಪ
ಅಂಜಿನಪ್ಪ
ಕುಡಿಯುವ ನೀರು ಭೀತಿ ಸೃಷ್ಟಿಸಿದೆ. ಸ್ಥಳೀಯ ಶುದ್ಧ ಕುಡಿಯುವ ನೀರಿನ ಘಟಕದ ಮೇಲೆ ಜನರಿಗೆ ಭರವಸೆ ಮೂಡಿಲ್ಲ. ಗಾರೆಹಟ್ಟಿ ರೈಲ್ವೆ ಹಳಿ ಸಮೀಪದ ಆರ್‌ಒ ಪ್ಲಾಂಟ್‌ಗಳಿಂದ ನೀರು ತರುತ್ತೇವೆ
ಅಂಜಿನಪ್ಪ ಆಟೊ ಚಾಲಕ ಕವಾಡಿಗರಹಟ್ಟಿ

ಹೊಸ ಟ್ಯಾಂಕ್‌ ಬಳಕೆಗೆ ವಿಘ್ನ

ಕವಾಡಿಗರಹಟ್ಟಿಯಲ್ಲಿ 2.5 ಲಕ್ಷ ಲೀಟರ್‌ ಸಾಮರ್ಥ್ಯದ ನೂತನ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ ಈ ಟ್ಯಾಂಕ್‌ನಿಂದ ಮನೆಗಳಿಗೆ ಸಂಪರ್ಕ ಕಲ್ಪಿಸಲು ಕೆಲವರು ತಕರಾರು ವ್ಯಕ್ತಪಡಿಸಿದ್ದಾರೆ. ಇದರಿಂದ ನೂತನ ಟ್ಯಾಂಕ್‌ ಬಳಕೆ ಸಾಧ್ಯವಾಗುತ್ತಿಲ್ಲ. ಕವಾಡಿಗರಹಟ್ಟಿಯಲ್ಲಿ 50 ಸಾವಿರ ಲೀಟರ್‌ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌ ಇತ್ತು. 30 ವರ್ಷಗಳಿಂದ ಈ ಟ್ಯಾಂಕ್‌ ಬಳಕೆಯಾಗುತ್ತಿದ್ದು ಶಿಥಿಲಾವಸ್ಥೆ ತಲುಪಿದೆ. ಹೆದ್ದಾರಿ ವಿಸ್ತರಣೆಗೆ ಈ ಟ್ಯಾಂಕ್ ತೆರವುಗೊಳಿಸಬೇಕಿತ್ತು. ಅಷ್ಟರಲ್ಲಿ ಟ್ಯಾಂಕ್‌ ನೀರು ಸೇವಿಸಿ ದೊಡ್ಡ ದುರಂತ ಸಂಭವಿಸಿತ್ತು. ಕಲುಷಿತ ನೀರಿನ ದುರಂತ ಸಂಭವಿಸಿದ ಬಳಿಕ ಟ್ಯಾಂಕ್‌ ಬಳಕೆಗೆ ನಿರ್ಬಂಧ ವಿಧಿಸಲಾಗಿತ್ತು. ಟ್ಯಾಂಕರ್‌ಗಳ ಮೂಲಕ ಮನೆ–ಮನೆಗೆ ನೀರು ಪೂರೈಸಲಾಗುತ್ತಿತ್ತು. ಆರೋಗ್ಯಾಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ಸಮಿತಿ ಸಲಹೆ ಪಡೆದು ಹಳೆ ಟ್ಯಾಂಕ್‌ ಬಳಸಲಾಗುತ್ತಿತ್ತು. ಈಗಲೂ ಇದೇ ಟ್ಯಾಂಕ್‌ನಿಂದ ಪ್ರತಿ ಮನೆಗೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ‘ನಗರಾಭಿವೃದ್ಧಿ ಇಲಾಖೆಯ ಅನುದಾನದಲ್ಲಿ ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನೂತನ ಟ್ಯಾಂಕ್‌ ನಿರ್ಮಿಸಲಾಗಿದೆ. ಟ್ಯಾಂಕಿನಿಂದ ಜನವಸತಿ ಪ್ರದೇಶಕ್ಕೆ ಕೊಳವೆ ಸಂಪರ್ಕ ಕಲ್ಪಿಸಲು ಜಮೀನು ಮಾಲೀಕರು ತಕರಾರು ವ್ಯಕ್ತಪಡಿಸಿದ್ದಾರೆ. 150ರಿಂದ 200 ಅಡಿಯಷ್ಟು ಕೊಳವೆ ಮಾರ್ಗ ಅಳವಡಿಕೆಗೆ ಸಮಸ್ಯೆ ಎದುರಾಗಿದೆ’ ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

ಆತಂಕದಲ್ಲಿವೆ 60 ಕುಟುಂಬ

ಕವಾಡಿಗರಹಟ್ಟಿಯ ಮೂಲಕ ಹಾದುಹೋಗಿರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿ ಎರಡು ವರ್ಷಗಳಿಂದ ನಡೆಯುತ್ತಿದೆ. ಈ ಹೆದ್ದಾರಿಗೆ ಕವಾಡಿಗರಹಟ್ಟಿಯ ಸುಮಾರು 60 ಮನೆಗಳು ನೆಲಸಮವಾಗಲಿವೆ. ಈ ಮನೆಯ ನಿವಾಸಿಗಳು ಆತಂಕದಿಂದ ಬದುಕುತ್ತಿದ್ದಾರೆ. ಹೆದ್ದಾರಿ ಅಭಿವೃದ್ಧಿಗೆ ತೆರವಾಗುವ ಮನೆಗಳನ್ನು ಗುರುತಿಸಲಾಗಿದೆ. ಕುಡಿಯುವ ನೀರು ಪೂರೈಸುವ ಹಳೆಯ ಟ್ಯಾಂಕ್‌ ಕೂಡ ನೆಲಸಮವಾಗಬೇಕಿದೆ. ಈ ಮನೆಗಳ ಮಾಲೀಕರಲ್ಲಿ ಕೆಲವರಿಗೆ ಹಕ್ಕುಪತ್ರ ಇಲ್ಲ. ಹಕ್ಕುಪತ್ರ ಇರುವವರಿಗೆ ₹ 3 ಲಕ್ಷದವರೆಗೆ ಪರಿಹಾರ ನೀಡಲಾಗಿದೆ. ಪರ್ಯಾಯ ವಸತಿ ಸೌಲಭ್ಯ ಕಲ್ಪಿಸುವಂತೆ ಇಲ್ಲಿನ ಜನರು ಪಟ್ಟು ಹಿಡಿದಿದ್ದಾರೆ. ‘ಹೆದ್ದಾರಿ ಅಭಿವೃದ್ಧಿಗೆ ಮನೆ ಕಳೆದುಕೊಳ್ಳುತ್ತಿರುವ ಕುಟುಂಬಗಳಿಗೆ ನಿವೇಶನ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಆಶ್ರಯ ಬಡಾವಣೆಯಲ್ಲಿ ಮೂರು ಎಕರೆಯಲ್ಲಿ ಬಡಾವಣೆ ನಿರ್ಮಿಸಲಾಗಿದೆ. 60 ಕುಟುಂಬಗಳ ಪಟ್ಟಿ ಕೂಡ ಸಿದ್ಧವಾಗಿದೆ. ಶೀಘ್ರದಲ್ಲೇ ನಿವೇಶನ ವಿತರಣೆ ಮಾಡಲಾಗುತ್ತದೆ. ವಸತಿ ಸೌಲಭ್ಯಕ್ಕೆ ಮುಂದಿನ ದಿನಗಳಲ್ಲಿ ಆದ್ಯತೆ ನೀಡಲಾಗುವುದು’ ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

ಶೌಚಕ್ಕೆ ಬಯಲು ಆಶ್ರಯಿಸಿದ ಜನ

ಚಿತ್ರದುರ್ಗ ಜಿಲ್ಲೆಯನ್ನು ಬಯಲುಶೌಚ ಮುಕ್ತವಾಗಿರುವುದಾಗಿ ಘೋಷಣೆ ಮಾಡಲಾಗಿದೆ. ಆದರೆ ಕವಾಡಿಗರಹಟ್ಟಿಯಲ್ಲಿ ಇಂದಿಗೂ ಶೌಚ ಕ್ರಿಯೆಗೆ ಜನರು ಬಯಲನ್ನೇ ಆಶ್ರಯಿಸಿದ್ದಾರೆ. ಕಾಲರಾದಂತಹ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾದ ಬಯಲು ಶೌಚಕ್ಕೆ ಇತಿಶ್ರೀ ಹಾಡುವುದಾಗಿ ಜಿಲ್ಲಾಡಳಿತ ಆಶ್ವಾಸನೆ ನೀಡಿತ್ತು. ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿತ್ತು. ಆ  ಆಶ್ವಾಸನೆ ಈವರೆಗೆ ಈಡೇರಿಲ್ಲ. ಕಿರಿದಾದ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳಾವಕಾಶವಿಲ್ಲ. ವೈಯಕ್ತಿಕ ಶೌಚಾಲಯಗಳು ಇಲ್ಲದಿರುವ ಕಾರಣಕ್ಕೆ ಅನೇಕರು ಬಯಲು ಕಡೆಗೆ ಹೋಗುತ್ತಾರೆ. ಮಹಿಳೆಯರು ಮತ್ತು ಪುರುಷರು ನಿತ್ಯ ಬೆಳಿಗ್ಗೆ ಚೊಂಬು ಹಿಡಿದು ಶೌಚಕ್ಕೆ ತೆರಳುವ ದೃಶ್ಯ ಇಲ್ಲಿ ಸಾಮಾನ್ಯ. ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸದಿರುವುದರಿಂದ ಬಯಲು ಆಶ್ರಯಿಸುವುದು ಅನಿವಾರ್ಯವಾಗಿದೆ ಎಂದು ಜನರು ಹೇಳುತ್ತಿದ್ದಾರೆ. ‘ಸಮಾಜ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ 1.03 ಕೋಟಿ ಅನುದಾನದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವೂ ಸೇರಿತ್ತು. ಕಾಮಗಾರಿಗೆ ಟೆಂಡರ್‌ ಕರೆಯಲಾಗಿದ್ದು ಯಾರೊಬ್ಬರೂ ಒಲವು ತೋರಿಲ್ಲ. ಮತ್ತೊಮ್ಮೆ ಟೆಂಡರ್ ಕರೆದು ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಲಾಗುವುದು. ಶೌಚಾಲಯ ಬಳಕೆ ಹಾಗೂ ಬಯಲು ಶೌಚಕ್ಕೆ ತೆರಳದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ಪೌರಾಯುಕ್ತೆ ರೇಣುಕಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT