ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚಿಟಿಗರನ್ನು ಒಕ್ಕಲೆಬ್ಬಿಸುವ ಹುನ್ನಾರ: ಆರೋಪ

Published 22 ನವೆಂಬರ್ 2023, 13:10 IST
Last Updated 22 ನವೆಂಬರ್ 2023, 13:10 IST
ಅಕ್ಷರ ಗಾತ್ರ

ಹಿರಿಯೂರು: ‘ಕಾಂತರಾಜ್ ಆಯೋಗದ ಜಾತಿ ಜನಗಣತಿ ಸಂದರ್ಭದಲ್ಲಿ ಕೆಲ ಧಾರ್ಮಿಕ ನೇತಾರರು ಮತ್ತು ರಾಜಕೀಯ ಮುಖಂಡರು ಕುಂಚಿಟಿಗರು ಜಾತಿ ಕಾಲಂನಲ್ಲಿ ಒಕ್ಕಲಿಗ ಮತ್ತು ಉಪಜಾತಿ ಕಾಲಂನಲ್ಲಿ ಕುಂಚಿಟಿಗ ಎಂದು ಬರೆಯಿಸಿ ಎಂದು ತಿಳಿಸುವ ಮೂಲಕ ಕುಂಚಿಟಿಗರನ್ನೆಲ್ಲ ಒಕ್ಕಲೆಬ್ಬಿಸಿದ್ದಾರೆ’ ಎಂದು ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿ ರಮೇಶ್ ಆರೋಪಿಸಿದರು.

‘ಮೈಸೂರಿನ ಡಿ. ಬನುಮಯ್ಯ ಅವರು 1920-21ರ ಜನ ಗಣತಿಯಲ್ಲಿ ಮೈಸೂರು ಮಹಾರಾಜರಿಗೆ ಮನವಿ ಮಾಡಿ, ಕುಂಚಿಟಿಗ ಹಿಂದೂ ಧರ್ಮದಲ್ಲಿ ಒಂದು ಸ್ವತಂತ್ರ ಜಾತಿ ಎಂದು ಬರೆಯಿಸಿ ಜನಗಣತಿ ಮಾಡಿಸಿದ್ದಾರೆ. ಆದರೂ ಜೀತಪದ್ಧತಿ ಮರು ಸ್ಥಾಪಿಸಲು ಹೊರಟಿರುವ ಕೆಲವರು ಕುಂಚಿಟಿಗರನ್ನು ಒಕ್ಕಲಿಗರ ಉಪಜಾತಿ ಎಂದು ಪದೇ ಪದೇ ದಾರಿ ತಪ್ಪಿಸುತ್ತಿದ್ಧಾರೆ. ಜೊತೆಗೆ ಪ್ರಾದೇಶಿಕ ಭಾಷೆಗಳ ವ್ಯತ್ಯಾಸ ಮತ್ತು ಸ್ಥಳೀಯ ಪ್ರಭಾವಕ್ಕೆ ಮಣಿದು ಕುಂಚವಕ್ಕಲ್, ಕಮಾಟಿ, ನಾಮಧಾರಿ, ಲಿಂಗಾಯತ ಕುಂಚಿಟಿಗ, ಕುಂಚಿಟಿಗ ಒಕ್ಕಲಿಗ, ಕುರುಚಿಯನ್, ಕುಂಜಿಡಿಗರ್, ಗೌಂಡರ್, ಇತ್ಯಾದಿಯಾಗಿ ಬರೆಯಿಸಿರುವವರೆಲ್ಲ ಮನೆದೇವರು ಮತ್ತು ಕುಲ ಬೆಡಗಿನ ಆಧಾರದಲ್ಲಿ ಕುಂಚಿಟಿಗ ಜಾತಿಗೆ ಸೇರಿದವರಾಗಿದ್ದಾರೆ. ಕರ್ನಾಟಕ ರಾಜ್ಯದ 18 ಜಿಲ್ಲೆ 46 ತಾಲ್ಲೂಕುಗಳಲ್ಲಿ 26 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಕುಂಚಿಟಿಗರ ಸಂಖ್ಯಾಬಲ ಕುಗ್ಗಿಸಲು ಜಾತಿ ಮತ್ತು ಉಪಜಾತಿ ಎಂದು ಜನಗಣತಿ ಸಂದರ್ಭದಲ್ಲಿ ಗೊಂದಲ ಉಂಟುಮಾಡಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಜಾತಿ ಜನಗಣತಿ ವರದಿಯಲ್ಲಿ ಕುಂಚವಕ್ಕಲ್, ಕಮಾಟಿ, ನಾಮಧಾರಿ, ಲಿಂಗಾಯತ ಕುಂಚಿಟಿಗ, ಕುಂಚಿಟಿಗ ಒಕ್ಕಲಿಗ, ಕುರುಚಿಯನ್, ಕುಂಜಿಡಿಗರ್, ಗೌಂಡರ್ ಹೆಸರಿನ ಜಾತಿಗಳನ್ನು ಕುಂಚಿಟಿಗ ಜಾತಿಗೆ ಕ್ರೋಢೀಕರಿಸಿ ವರದಿ ಬಿಡುಗಡೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT