ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ದಲ್ಲಾಲಿ ತಪ್ಪಿಸಲು ಹೋಗಿ ಮಸಣ ಸೇರಿದ ರೈತರು

ಹಸೆಮಣೆ ಏರಬೇಕಿದ್ದ ಸಹೋದರನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಣ್ಣ
Last Updated 14 ಡಿಸೆಂಬರ್ 2021, 3:39 IST
ಅಕ್ಷರ ಗಾತ್ರ

ಸುವರ್ಣಾ ಬಸವರಾಜ್‌

ಹಿರಿಯೂರು: ‘ಹುಬ್ಬಳ್ಳಿ ಹಾಗೂ ಗದಗ ಮಾರ್ಕೆಟ್‌ಗಳಲ್ಲಿ ದಲ್ಲಾಲಿ ವಸೂಲಿ ಮಾಡ್ತಾರೆ. ಬೆಂಗಳೂರಲ್ಲಿ ದಲ್ಲಾಲಿ ಇರಲ್ಲ. ಹೇಗೊ ನಾಲ್ಕು ಕಾಸು ಹೆಚ್ಗೆ ಸಿಗುತ್ತೆ ಅಂತಾ ಈರುಳ್ಳಿಯನ್ನು ಲಾರೀಲಿ ತುಂಬ್ಕಂಡು ಹೋಗ್ವಾಗ ಹಿಂಗಾಗೈತೆ. ಎಲ್ಲಾ ನಮ್ಮ ಹಣೆಬರಹ...’

ಹಿರಿಯೂರಿನ ರಾಷ್ಟ್ರೀಯ ಹೆದ್ದಾರಿ–4ರ ಬೈಪಾಸ್ ರಸ್ತೆಯಲ್ಲಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಪ್ರಶಾಂತ್ ಹಟ್ಟಿ (36) ಅವರ ಅಣ್ಣ ಪ್ರವೀಣ್ ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಒರೆಸುತ್ತಾ ಹೇಳಿದ ಮಾತುಗಳಿವು.

‘ಗುರಪ್ಪ, ಸುರೇಶ, ರಮೇಶ ಅಲಿಯಾಸ್‌ ರಾಮನಗೌಡ ಪಾಟೀಲ ಹಾಗೂ ನನ್ನ ತಮ್ಮ ಪ್ರಶಾಂತ್ ಎಲ್ಲರೂ ಸೇರಿ 240 ಪ್ಯಾಕೆಟ್ ಈರುಳ್ಳಿ ತುಂಬಿಕೊಂಡು ಬೆಂಗಳೂರಿನ ಮಾರುಕಟ್ಟೆಗೆ ಹೊರಟಿದ್ದರು. ಸತತ ಮಳೆಯ ಕಾರಣ ಈರುಳ್ಳಿ ಗುಣಮಟ್ಟ ಹೇಳಿಕೊಳ್ಳುವಂತಿರಲಿಲ್ಲ. ಲಾರಿ ಲೋಡಿಗೆ ₹ 17 ಸಾವಿರ ಬಾಡಿಗೆ ಮಾತಾಡಿಕೊಂಡಿದ್ದರು. ಹುಬ್ಬಳ್ಳಿ–ಗದಗ ಮಾರ್ಕೆಟ್‌ಗಳಲ್ಲಿ ದಲ್ಲಾಲಿ ವಸೂಲಿ ಮಾಡದಿದ್ದರೆ ಇವರ‍್ಯಾರೂ ಬೆಂಗಳೂರಿಗೆ ಹೋಗುತ್ತಿರಲಿಲ್ಲ. ಆಗಿದ್ದ ನಷ್ಟವನ್ನ ಸ್ವಲ್ಪವಾದ್ರೂ ಕಮ್ಮಿ ಮಾಡ್ಕೊಳ್ಳೋಣ ಅಂತಾ ಹೊರಟಿದ್ದಕ್ಕೆ ನಾಲ್ಕು ಜೀವಗಳು ಬಲಿಯಾಗಿವೆ’ ಎಂದು ಅವರು ಕಣ್ಣೀರಾದರು.

ಮೂವರು ಅವಿವಾಹಿತರು: ‘ಗುರಪ್ಪನಿಗೆ ಮದುವೆಯಾಗಿದ್ದು, ಚಿಕ್ಕ ವಯಸ್ಸಿನ ಮಗನಿದ್ದಾನೆ. ಪ್ರಶಾಂತ್‌ಗೆ ಕನ್ಯೆ ನೋಡ್ತಿದ್ದೆವು. ಸುರೇಶನಿಗೆ ಕನ್ಯೆ ನೋಡಿ ಮಾತುಕತೆಯಾಗಿತ್ತು. ರಮೇಶ್ ಕೂಡ ಕನ್ಯೆ ಹುಡುಕಾಟದಲ್ಲಿದ್ದ. ಗುರಪ್ಪನ ಪತ್ನಿ ಮತ್ತು ಮಗ ಅನಾಥರಾಗಿದ್ದಾರೆ. ಮದುವೆಯ ಕನಸು ಕಂಡಿದ್ದ ಉಳಿದ ಮೂವರು ಶವವಾಗಿ ಹೋಗಿದ್ದಾರೆ. ಇಲ್ಲಿಂದ ಶವಗಳನ್ನು ಒಯ್ದು ಅಪ್ಪ–ಅವ್ವನಿಗೆ ಹೇಗೆ ತೋರಿಸಲಿ. ಅವರೆಲ್ಲ ಈ ನೋವನ್ನು ಹೇಗೆ ತಡೆದುಕೊಳ್ಳುತ್ತಾರೋ’ ಎಂದು ಪ್ರವೀಣ್ ಬಿಕ್ಕಿ ಬಿಕ್ಕಿ ಅತ್ತರು.

‘ನಮ್ಮ ಕಡೆಯಿಂದ ಬೆಂಗಳೂರಿಗೆ ನಿತ್ಯ ಎಂಟತ್ತು ಲಾರಿ ಲೋಡ್ ಈರುಳ್ಳಿ ಹೋಗುತ್ತದೆ. ಮಾರುಕಟ್ಟೆಯಲ್ಲಿನ ತಾರತಮ್ಯವೇ ನಾವು ಬೆಂಗಳೂರು ಕಡೆ ಮುಖ ಮಾಡಲು ಕಾರಣ. ಸಾವಿರಾರು ಎಕರೆ ಈರುಳ್ಳಿ ಬೆಳೆ ಮಳೆಗೆ ಸಿಕ್ಕಿ ಕೊಳೆತು ಹೋದದ್ದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಮುಂದಿನ ವರ್ಷ ಬೆಳೆ ಬೆಳೆದು ಆಗಿರುವ ನಷ್ಟ ತುಂಬಿಕೊಳ್ಳುತ್ತೇವೆ. ಆದರೆ, ದುಡಿದು ಮನೆಯವರನ್ನು ಸಾಕುತ್ತಿದ್ದ ಮಕ್ಕಳು ಶವವಾಗಿದ್ದಾರೆ. ಈ ನಷ್ಟವನ್ನು ಭರ್ತಿ ಮಾಡುವುದಾದರೂ ಹೇಗೆ’ ಎಂದು ಮೃತ ಗುರಪ್ಪನ ಸಂಬಂಧಿ ಬಸಪ್ಪ ಅವರು ಒತ್ತಿ ಬರುತ್ತಿದ್ದ ಅಳುವನ್ನು ತಡೆದು ಹೇಳಿದರು.

ಸಾವಿನ ತಾಣ: ‘ನ್ಯಾಯಾಲಯ ಸಂಕೀರ್ಣ ದಾಟಿದ ನಂತರ ವೇದಾವತಿ ಸೇತುವೆವರೆಗಿನ ಬೈಪಾಸ್ ರಸ್ತೆ ಇಳಿಜಾರಿನಿಂದ ಕೂಡಿದೆ. ವಾಹನಗಳು ಅತಿ ವೇಗವಾಗಿ ಸಂಚರಿಸುತ್ತವೆ. ರಸ್ತೆ ವಿಭಜಕದ ನಡುವೆ ದೀಪಗಳನ್ನು ಅಳವಡಿಸದ ಕಾರಣ ಎದುರಿನಿಂದ ಬರುವ ವಾಹನಗಳ ಬೆಳಕಿನಲ್ಲಿ ಮುಂದೆ ಸಾಗುವ ವಾಹನಗಳು ಕಾಣಿಸುವುದಿಲ್ಲ. ಹೀಗಾಗಿ ಆಲೂರು ಕ್ರಾಸ್ ಬಳಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಗರ ಠಾಣೆ ಸಿಪಿಐ ಶಿವಕುಮಾರ್ ಅವರು ಸಿಬ್ಬಂದಿಯೊಂದಿಗೆ ಬಂದು ಸರಣಿ ಅಪಘಾತಕ್ಕೀಡಾಗಿದ್ದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರವನ್ನು ಮುಕ್ತಗೊಳಿಸಿದರು. ಅಪಘಾತ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಡಿವೈಎಸ್‌ಪಿ ರೋಷನ್ ಜಮೀರ್ ಅವರೂ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT