ಭಾನುವಾರ, ಅಕ್ಟೋಬರ್ 25, 2020
26 °C
ವಾಸನೆ ಬರದಂತಹ ಔಷಧ ಸಿಂಪಡಿಸಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಸೂಚನೆ

ಹೊಸದುರ್ಗ: ಘನತ್ಯಾಜ್ಯ ವಿಲೇವಾರಿ ಘಟಕದ ಸ್ವಚ್ಛತೆ ಕಾಪಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಇಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕದ ಸ್ವಚ್ಛತೆ ಕಾಪಾಡಲು ಹೆಚ್ಚು ಕಾಳಜಿ ವಹಿಸಬೇಕು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್‌ ಅವರಿಗೆ ಸೂಚಿಸಿದರು.

ಪಟ್ಟಣದ ಹೊರವಲಯದಲ್ಲಿರುವ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಗಳವಾರ ಭೇಟಿ ನೀಡಿ, ಹಸಿಕಸ ವಾಸನೆ ಬರದಂತಹ ಔಷಧವನ್ನು ತಾವೇ ಸಿಂಪಡಿಸಿ ಮಾತನಾಡಿದರು.

‘ಜಿಲ್ಲೆಗೆ ಮಾದರಿಯಾಗುವ ರೀತಿಯಲ್ಲಿ ಪಟ್ಟಣದ ಮನೆ, ಮನೆ ಗಳಿಂದ ಅಂಗಡಿ–ಮುಂಗಟ್ಟುಗಳಿಂದ ಸಂಗ್ರಹಿಸಿದ ಘನತ್ಯಾಜ್ಯವನ್ನು ಹಸಿ ಮತ್ತು ಒಣಕಸವಾಗಿ ಬೇರ್ಪಡಿಸುತ್ತಿರುವುದು ಶ್ಲಾಘನೀಯ. ಈ ಹಸಿಕಸವನ್ನು ಕಾಂಪೋಸ್ಟ್‌ ಹಾಗೂ ಎರೆಹುಳು ಗೊಬ್ಬರವಾಗಿ ತಯಾರಿಸಿ, ಒಂದು ಟ್ರ್ಯಾಕ್ಟರ್‌ ಲೋಡ್‌ ಗೊಬ್ಬವನ್ನು ₹ 1,500ಕ್ಕೆ ಕಡಿಮೆ ದರದಲ್ಲಿ ರೈತರಿಗೆ ನೀಡುತ್ತಿರುವುದು ಮೆಚ್ಚುಗೆಯ ಸಂಗತಿ. ಒಣಕಸವನ್ನು ಸಂಸ್ಕರಿಸಿ ಮಾರಾಟ ಮಾಡುತ್ತಿರುವುದರಿಂದ ಪುರಸಭೆಯ ಆದಾಯ ವೃದ್ಧಿಗೆ ಸಹಕಾರಿಯಾಗಿದೆ’ ಎಂದು ತಿಳಿಸಿದರು.

‘ಸಮೀಪದಲ್ಲಿಯೇ ₹11 ಕೋಟಿ ವೆಚ್ಚದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣವಾಗುತ್ತಿದೆ. ಸುಮಾರು 14 ಎಕರೆ ಪ್ರದೇಶದಲ್ಲಿ 1,000ಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಹಾಗಾಗಿ ಘನತ್ಯಾಜ್ಯ ವಿಲೇವಾರಿ ಘಟಕದಿಂದ ವಾಸನೆ ಬರದಂತೆ ಔಷಧ ಸಿಂಪಡಿಸುತ್ತಿರಬೇಕು. ಈ ಘಟಕದ ಸುತ್ತಲೂ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ಹಸಿರುವನ ನಿರ್ಮಿಸಬೇಕು. ಇಲ್ಲಿನ ಕಾರ್ಮಿಕರ ಆರೋಗ್ಯ ಪಾಲನೆಗೆ ಹೆಚ್ಚು ಕಾಳಜಿ ವಹಿಸಬೇಕು. ಪಟ್ಟಣದಲ್ಲಿ ಕೆಡವುವ ಹಳೆಯ ಮನೆಯ ಭಗ್ನಾವಶೇಷ ಸಂಗ್ರಹಣೆಗೆ 2 ಎಕರೆ ಜಮೀನು ಮೀಸಲಿಡಲಾಗುವುದು’ ಎಂದು ಭರವಸೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್‌, ‘ಕಾರ್ಮಿಕರ ಆರೋಗ್ಯ ಪಾಲನೆ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕದ ಸ್ವಚ್ಛತೆ ಪಾಲನೆಗೆ ಒತ್ತು ನೀಡಲಾಗುತ್ತಿದೆ. ವಾಸನೆ ಬರದಂತೆ ಬಯೋ ಹಾಗೂ ಒಡೋರ್‌ ಕಲ್ಚರ್‌ ಆಯುರ್ವೇದಿಕ್‌ ಔಷಧ ಸಿಂಪಡಿಸಲಾಗುತ್ತಿದೆ. ಕಾಂಪೋಸ್ಟ್‌ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಘಟಕ, ಒಣಕಸ ಕೇಂದ್ರ ಸ್ಥಾಪಿಸಲಾಗಿದೆ. ಒಣಕಸದಲ್ಲಿ ಸುಮಾರು 18 ಬಗೆಯ ವಿವಿಧ ಸಾಮಗ್ರಿಗಳನ್ನು ಪ್ರತ್ಯೇಕಿಸಿ ಮಾರಾಟ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಘನತ್ಯಾಜ್ಯ ವಿಲೇವಾರಿ ಘಟಕದ ಸುತ್ತಲೂ ಸಸಿ ನೆಟ್ಟರು. ಪುರಸಭೆ ಪರಿಸರ ಎಂಜಿನಿಯರ್‌ ಜಿ.ವಿ.ತಿಮ್ಮರಾಜು, ಆರೋಗ್ಯ ನಿರೀಕ್ಷಕ ಕಲೀಂಉಲ್ಲಾ, ಗುತ್ತಿಗೆದಾರ ಎನ್‌.ವಿ.ಶೇಖರಪ್ಪ, ತಿಮ್ಮೇಶ್‌, ಮಹೇಶ್‌ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.