ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿರಹಿತ ಸಮಾಜ ನಿರ್ಮಿಸಲು ಮುಂದಾಗಿ

‘ಮತ್ತೆ ಕಲ್ಯಾಣ’ದಲ್ಲಿ ಕವಿ ಎಲ್.ಎನ್. ಮುಕುಂದರಾಜ್ ಸಲಹೆ
Last Updated 13 ಆಗಸ್ಟ್ 2020, 16:24 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಸವಾದಿ ಶರಣರ ಆಶಯಗಳೊಂದಿಗೆ ವರ್ಗ, ವರ್ಣ, ಲಿಂಗ ತಾರತಮ್ಯಗಳನ್ನು ಮೀರಿದ ಸಮಸಮಾಜ ನಿರ್ಮಿಸಲು ಮುಂದಾಗಿ ಎಂದು ಕವಿ ಎಲ್.ಎನ್. ಮುಕುಂದರಾಜ್ ಸಲಹೆ ನೀಡಿದರು.

ಹೊಸದುರ್ಗದ ಸಾಣೇಹಳ್ಳಿಯ ಮಠದಿಂದ ನಡೆಯುತ್ತಿರುವ ‘ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘12ನೇ ಶತಮಾನ ದೇವರು, ಧರ್ಮ, ಸಮಸಮಾಜದ ಕುರಿತು ಹೊಸ ಪರಿಕಲ್ಪನೆ ಮೂಡಿಸಿದ ಅದ್ಭುತ ಕಾಲಮಾನ. ಕನ್ನಡಿಗರೆಲ್ಲರೂ ಸದಾ ನೆನಪಿಟ್ಟುಕೊಳ್ಳಬೇಕಾದ ಬಹುದೊಡ್ಡ ಚಳವಳಿ’ ಎಂದರು.

‘ಶರಣರ ಜೀವನ ಕ್ರಮ, ಕಾಯಕತತ್ವ, ದಾಸೋಹ, ಅಸಂಗ್ರಹತ್ವ, ಸಮಾನವಾದಗಳು ಸರ್ವಕಾಲಕ್ಕೂ ಆದರ್ಶ. ಈ ಕಾರಣಕ್ಕಾಗಿ ನಮ್ಮ ಆಲೋಚನೆಗಳು ಆಗಿಂದಾಗ್ಗೆ ಆ ಕಡೆಯೇ ಹರಿಯುತ್ತಿರುತ್ತದೆ. ಆ ಕಾಲಘಟ್ಟಕ್ಕಿಂತ ಮುಂಚೆ ಕಾಯಕದ ಬಗ್ಗೆ ಸಮಾನ ಗೌರವವಾಗಲಿ, ಆದಾಯವಾಗಲಿ ಇರಲಿಲ್ಲ. ಬಸವಾದಿ ಶರಣರು ಪರಂಪರಾನುಗತ ಸಂಪ್ರದಾಯ ಮೀರಿ ನೂತನ ಸಮಾಜ ಕಟ್ಟಲು ಶ್ರಮಿಸಿದರು’ ಎಂದು ಹೇಳಿದರು.

‘ಕಾಯಕ ನಿಷ್ಠೆಯ ಶರಣರ ವಿರುದ್ಧ ಪುರೋಹಿತಷಾಹಿ ವರ್ಗ ಸಿಡಿದೆದ್ದದ್ದು ಅಷ್ಟೇ ಅಲ್ಲ, ಅವರನ್ನೆಲ್ಲ ಧ್ವಂಸ ಮಾಡುವ ಪ್ರಯತ್ನವನ್ನೂ ಮಾಡಿತು. ಇದನ್ನೆಲ್ಲ ಮೆಟ್ಟಿನಿಂತ ಶರಣರದು ದುರಂತಮಯ ಹೋರಾಟ ಮತ್ತು ಆತ್ಮಾಹುತಿಯ ಸಂದರ್ಭವೂ ಹೌದು’ ಎಂದರು.

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ವಿಶ್ವದಲ್ಲಿ ಯಾವುದೇ ಚಳವಳಿ ಆರಂಭವಾಗಬೇಕಾದರೆ ಅದಕ್ಕೊಂದು ಕಾರಣ, ಪ್ರೇರಣೆ, ಪ್ರಯತ್ನ ಹಾಗೂ ಸಾಮೂಹಿಕ ಹೋರಾಟದ ಅಗತ್ಯವಿರುತ್ತದೆ’ ಎಂದು ತಿಳಿಸಿದರು.

‘12ನೇ ಶತಮಾನದಲ್ಲಿ ವಚನ ಚಳವಳಿ ನಡೆಯಲು ಮೂಲ ಕಾರಣ ಜಾತೀಯತೆ, ಪಟ್ಟಭದ್ರ ಹಿತಾಸಕ್ತರ ಅಟ್ಟಹಾಸ, ಸಂಪತ್ತಿನ ಕೇಂದ್ರೀಕರಣ ಹಾಗೂ ಅಧಿಕಾರ ದಾಹ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT