ಮಂಗಳವಾರ, ಜನವರಿ 18, 2022
26 °C
ಕೃಷಿ ಯಂತ್ರಧಾರೆ ಕೇಂದ್ರದಿಂದ ಬಾಡಿಗೆ ಆಧಾರದಲ್ಲಿ ಸೌಲಭ್ಯ

ಚಿತ್ರದುರ್ಗ | ರೈತರಿಗೆ ವರವಾದ ರಾಗಿ ಒಕ್ಕಣೆ ಯಂತ್ರ

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ತಾಲ್ಲೂಕಿನಲ್ಲಿ ರಾಗಿ ಒಕ್ಕಣೆ ನಡೆಯುತ್ತಿದ್ದು, ಕೃಷಿ ಯಂತ್ರಧಾರೆ ಕೇಂದ್ರದಿಂದ ಬಾಡಿಗೆ ಆಧಾರದಲ್ಲಿ ಸಿಗುವ ರಾಗಿ ಒಕ್ಕಣೆ ಯಂತ್ರ ರೈತರಿಗೆ ವರವಾಗಿ ಪರಿಣಮಿಸಿದೆ.

ಕೃಷಿ ಇಲಾಖೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಶಿವಗಂಗಾ ಗ್ರಾಮದಲ್ಲಿ ನಡೆಯುತ್ತಿರುವ ‘ಕೃಷಿ ಯಂತ್ರಧಾರೆ’ ಕೇಂದ್ರದಿಂದ ಬಾಡಿಗೆ ಆಧಾರದಲ್ಲಿ ರಾಗಿ ಒಕ್ಕಣೆ ಯಂತ್ರ ಒದಗಿಸಲಾಗುತ್ತಿದೆ. ಪ್ರತೀ ಗಂಟೆಗೆ ₹1,400 ದರ ನಿಗದಿ ಮಾಡಿದ್ದು, ಗಂಟೆಗೆ 2 ಲೋಡ್ ರಾಗಿ ಹುಲ್ಲು ಒಕ್ಕಣೆ ಮಾಡಬಹುದು. ಈ ಯಂತ್ರ ಒಂದು ಗಂಟೆಯಲ್ಲಿ 8 ರಿಂದ 10 ಕ್ವಿಂಟಲ್ ರಾಗಿ ಒಕ್ಕಣೆ ಮಾಡುವ ಸಾಮರ್ಥ್ಯ ಹೊಂದಿದ್ದು, ರೈತರಿಗೆ ಸಮಯ ಹಾಗೂ ಖರ್ಚು ಎರಡೂ ಉಳಿತಾಯ ಆಗುತ್ತಿದೆ.

‘ಹಿಂದೆ ಎತ್ತುಗಳಿಗೆ ರೋಣಗಲ್ಲನ್ನು ಕಟ್ಟಿ ಸುತ್ತಿಸುವ ಮೂಲಕ ರಾಗಿ ಹುಲ್ಲು ತುಳಿಸುತ್ತಿದ್ದರು. ದೊಡ್ಡ ರೈತರು ವಾರಗಟ್ಟಲೆ ಸುಗ್ಗಿ ಮಾಡುತ್ತಿದ್ದರು. ಈಗ ರೈತರ ಮನೆಗಳಲ್ಲಿ ಎತ್ತುಗಳಿಲ್ಲ. ಎಲ್ಲರೂ ಹೊಲ ಉಳುಮೆ ಮಾಡಲು, ಬಿತ್ತನೆ ಮಾಡಲು ಟ್ರ್ಯಾಕ್ಟರ್ ಅವಲಂಬಿಸಿದ್ದಾರೆ. ಕಟಾವಿಗೂ ಯಂತ್ರ ಬಳಸುತ್ತಿದ್ದಾರೆ. ಕೃಷಿ ಯಂತ್ರಧಾರೆ ಕೇಂದ್ರದ ರಾಗಿ ಒಕ್ಕಣೆ ಯಂತ್ರದಿಂದ ರೈತರಿಗೆ ಅನುಕೂಲ ಆಗಿದೆ. ಇಡೀ ದಿನ ತುಳಿಸುವಷ್ಟು ಹುಲ್ಲನ್ನು ಒಂದೇ ಗಂಟೆಯಲ್ಲಿ ಒಕ್ಕಣೆ ಮಾಡಬಹುದು. ನಮ್ಮೂರಿನಲ್ಲಿ ಎಲ್ಲಾ ರೈತರೂ ಈ ಯಂತ್ರ ಬಳಸುತ್ತಿದ್ದಾರೆ’ ಎನ್ನುತ್ತಾರೆ ಮೇಲಿನ ಕೊಟ್ಟಿಗೆಯ ರೈತರಾದ ದಿನೇಶ್, ಟಾಕೇಶಪ್ಪ, ಮಂಜುನಾಥ, ತಿಪ್ಪೇಶಪ್ಪ, ಓಂಕಾರಪ್ಪ, ಜಯಪ್ಪ ಹಾಗೂ ರಂಗಪ್ಪ.

‘ನಮ್ಮ ಕೃಷಿ ಯಂತ್ರಧಾರೆ ಕೇಂದ್ರದಲ್ಲಿರುವ ರಾಗಿ ಒಕ್ಕಣೆ ಯಂತ್ರವನ್ನು ಹೆಚ್ಚು ರೈತರು ಬಳಕೆ ಮಾಡುತ್ತಿದ್ದಾರೆ. ಇದು ಮೂರು ದಿನದ ಕೆಲಸವನ್ನು ಮೂರೇ ಗಂಟೆಗಳಲ್ಲಿ ಮಾಡುವ ಸಾಮರ್ಥ್ಯ ಹೊಂದಿದೆ. ರಾಗಿ ಹುಲ್ಲನ್ನು ಯಂತ್ರಕ್ಕೆ ಹಾಕಲು ಐದಾರು ಜನ ಇದ್ದರೆ ಸಾಕು. ಒಕ್ಕಣೆ ನಂತರ ಬರುವ ಹುಲ್ಲು ಮೇವಿಗೆ ಬಳಕೆ ಆಗುತ್ತದೆ. ಉತ್ತಮ ಗುಣಮಟ್ಟದ ರಾಗಿ ಸಿಗುತ್ತದೆ. ರಾಗಿಯನ್ನು ಮತ್ತೆ ಜರಡಿಗೆ ಹಾಕುವ ಅಗತ್ಯ ಇಲ್ಲ’ ಎನ್ನುತ್ತಾರೆ ಶಿವಗಂಗಾ ಕೃಷಿ ಯಂತ್ರಧಾರೆ ಕೇಂದ್ರದ ಮ್ಯಾನೇಜರ್ ಕೇಶವಮೂರ್ತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.