ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲು ಭದ್ರೆ ನೀರನ್ನು ವಾಣಿವಿಲಾಸಕ್ಕೆ ಹರಿಸೋಣ: ಸಚಿವ ಡಿ. ಸುಧಾಕರ್

Published 13 ಜನವರಿ 2024, 14:58 IST
Last Updated 13 ಜನವರಿ 2024, 14:58 IST
ಅಕ್ಷರ ಗಾತ್ರ

ಹಿರಿಯೂರು: ‘ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ನೀರನ್ನು ಮೊದಲು ವಾಣಿವಿಲಾಸ ಜಲಾಶಯಕ್ಕೆ ಹರಿದು ಬರುವಂತೆ ಮಾಡೋಣ. ನಂತರ ಯೋಜನೆಯಲ್ಲಿ ನಮ್ಮ ಪಾಲು ಎಷ್ಟು ಟಿಎಂಸಿ ಅಡಿ ಎಂಬುದನ್ನು ಯೋಚಿಸೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಶನಿವಾರ ಕೃಷಿ ಇಲಾಖೆ, ಕೃಷಿಕ ಸಮಾಜ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಅರಣ್ಯ, ಪಶುಪಾಲನಾ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಯಾರೂ ಚಿಂತೆ ಮಾಡುವ ಅಗತ್ಯವಿಲ್ಲ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ರೈಲ್ವೆ ಕಾಮಗಾರಿ ಅನುಮೋದನೆ ಮಾಡಿಸಿದ್ದು ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡಿಲ್ಲ. ಇದೇ ತಿಂಗಳ 30ರೊಳಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆಗೆ ಬರಲಿದ್ದಾರೆ. ಈ ಯೋಜನೆಯಿಂದ ವಿವಿ ಸಾಗರಕ್ಕೆ ಮೊದಲು ನೀರು ಹರಿಸುವ ಕೆಲಸಕ್ಕೆ ಒತ್ತು ನೀಡೋಣ. ಐಮಂಗಲ ಮತ್ತು ಜವನಗೊಂಡನಹಳ್ಳಿ ಹೋಬಳಿಗೂ ನೀರು ಹರಿಸಲಾಗುತ್ತದೆ. ಅಬ್ಬಿನಹೊಳಲು ಕಾಮಗಾರಿಯಿಂದ ‌ಮುಂದಿನ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಭದ್ರಾ ಜಲಾಶಯದ ನೀರು ವಾಣಿವಿಲಾಸಕ್ಕೆ ಹರಿದು ಬರಲಿದೆ’ ಎಂದು ಸಚಿವರು ಸ್ಪಷ್ಟಪಡಿಸಿದರು.

ಕೇಂದ್ರದ ಅಸಹಕಾರ: ‘ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದರೂ ರಾಜ್ಯದ ಸಹಾಯಕ್ಕೆ ಬರಲಿಲ್ಲ. ಹೀಗಿದ್ದರೂ ಕಾಂಗ್ರೆಸ್ ಪಕ್ಷದ ಸರ್ಕಾರ ರೈತರ ಬೆನ್ನಿಗೆ ನಿಂತಿದೆ. ದೇಶದಲ್ಲಿ ಒಂದೆರಡು ರಾಜ್ಯಗಳನ್ನು ಬಿಟ್ಟರೆ ಎಲ್ಲ ಕಡೆಯೂ ಬರಗಾಲ ಆವರಿಸಿದೆ. ನಮ್ಮ ರಾಜ್ಯದಲ್ಲಿ ಬರಗಾಲ ಇದ್ದರೂ ನೀರಿನ ಸಮಸ್ಯೆ ಎದುರಿಸಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಆಡಳಿತದ ಅಗಾಧ ಅನುಭವವಿರುವ ನಮ್ಮ ಸರ್ಕಾರ ಬರದ ಕಷ್ಟ ಎದುರಿಸಲು ಹಲವು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ಅವರು ತಿಳಿಸಿದರು.

‘ತಾಲ್ಲೂಕಿನಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಆಮೆಗತಿಯಲ್ಲಿ ಸಾಗುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಯೋಜನೆಯ ನೀರು ಹರಿಸುವ ಮೂಲಕ ವಾಣಿ ವಿಲಾಸ ಜಲಾಶಯವನ್ನು ಸದಾ ಜೀವಂತವಾಗಿ ಇಡಬೇಕು. ವಾಣಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಃಶ್ಚೇತನಗೊಳಿಸಬೇಕು’ ಎಂದು ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ ಸಚಿವರನ್ನು ಒತ್ತಾಯಿಸಿದರು.

‘ದೇಶದ 140 ಕೋಟಿ ಜನರಲ್ಲಿ ಶೇ 65ಕ್ಕೂ ಹೆಚ್ಚಿನ ಜನ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಆರ್ಥಿಕತೆಯಲ್ಲಿ 4ನೇ ಬಲಾಢ್ಯ ದೇಶವಾಗಿ ಭಾರತ ಹೊರ ಹೊಮ್ಮಿದೆ. ಕೃಷಿ ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಜಗತ್ತಿನ ಎರಡು ಪ್ರಮುಖ ರಾಷ್ಟ್ರಗಳೆಂದರೆ ಭಾರತ ಮತ್ತು ಚೀನಾ ಮಾತ್ರ. ಚೌಧರಿ ಚರಣ್ ಸಿಂಗ್ ಅವರು ಕೃಷಿ ಉತ್ಪನ್ನ ಮಾರಾಟ ಕಾಯ್ದೆಯನ್ನು ದೇಶದಾದ್ಯಂತ ಜಾರಿಗೆ ತಂದ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಜನ್ಮ ತಾಳಿದವು. ಜಮೀನ್ದಾರ್ ಪದ್ದತಿ ರದ್ದುಗೊಳಿಸಿ ಉಳುವವನೇ ಭೂಮಿಯ ಒಡೆಯ ಕಾಯ್ದೆಯನ್ನು ಜಾರಿಗೆ ತರಲಾಯಿತು’ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಒ.ಕುಮಾರ್, ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯಸ್ಥ ಮಂಜಪ್ಪ, ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ನಿರ್ದೇಶಕ ಸುರೇಶ್ ಏಕಬೋಟೆ, ಕೃಷಿಕ ಸಮಾಜದ ಉಪಾಧ್ಯಕ್ಷ ಎಚ್. ರಂಗನಾಥ್, ಪ್ರಧಾನ ಕಾರ್ಯದರ್ಶಿ ಬಿ. ರಾಜಶೇಖರ್, ರಾಜಣ್ಣ, ಖಾದಿ ರಮೇಶ್, ಆರ್.ನಾಗೇಂದ್ರ ನಾಯ್ಕ, ಕಂದಿಕೆರೆ ಸುರೇಶ್ ಬಾಬು, ಗಿಡ್ಡೋಬನಹಳ್ಳಿ ಅಶೋಕ್, ಜೆ.ಆರ್. ಸುಜಾತಾ, ರೈತ ಮುಖಂಡರಾದ ಹೊರಕೇರಪ್ಪ, ಕೆ.ಟಿ.ತಿಪ್ಪೇಸ್ವಾಮಿ, ಶಿವಕುಮಾರ್, ಜಗದೀಶ್ ಕಂದಿಕೆರೆ, ಕಸವನಹಳ್ಳಿ ರಮೇಶ್, ಎಸ್.ಶಿವರಂಜಿನಿ, ಉಪ ಕೃಷಿ ನಿರ್ದೇಶಕ ಪ್ರಭಾಕರ್, ಸಹಾಯಕ ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ್, ತೋಟಗಾರಿಕೆ ಇಲಾಖೆಯ ಲೋಕೇಶ್ ಉಪಸ್ಥಿತರಿದ್ದರು.

ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು.

ಮಾಜಿ ಪ್ರಧಾನಿ ಚರಣ್ ಸಿಂಗ್ ಅವರನ್ನು ರೈತ ಸಮುದಾಯ ಎಂದೂ ಮರೆಯಬಾರದು. ರೈತರ ಹಿತ ಕಾಯುವ ಹಲವು ಯೋಜನೆಗಳ ಹರಿಕಾರ ಚರಣ್ ಸಿಂಗ್
ಸುಧಾಕರ್
ನಡೆಯದ ಸಂವಾದ ಬೇಸರ
ರೈತ ದಿನಾಚರಣೆಯಲ್ಲಿ ರೈತರು ಮತ್ತು ರೈತ ಮಹಿಳೆಯರೊಂದಿಗೆ ಕೃಷಿ ವಿಜ್ಞಾನಿಗಳು ಸಂವಾದ ನಡೆಸುತ್ತಾರೆ ಎಂದು ಕರೆತಂದು ಸಂವಾದ ನಡೆಸದೆ ಕಾರ್ಯಕ್ರಮ ಮುಗಿಸಿದ್ದು ಆಹ್ವಾನ ಪತ್ರಿಕೆಯಲ್ಲಿ ಹೆಸರು ಇಲ್ಲದ ರಾಜಕಾರಣಿಗಳನ್ನು ವೇದಿಕೆಯ ಮೇಲೆ ಕುಳ್ಳಿರಿಸಿದ್ದು ರೈತರಿಗೆ ಅವಮಾನಿಸಿದಂತೆ. – ಕಸವನಹಳ್ಳಿ ರಮೇಶ್ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT