ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ಕಸ ವಿಂಗಡಣೆಗೆ ‘ಕಾರ್ಡ್‌’ ನಿಗಾ

Published 9 ಜೂನ್ 2024, 7:07 IST
Last Updated 9 ಜೂನ್ 2024, 7:07 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಸವನ್ನು ಮೂಲದಲ್ಲಿಯೇ ವಿಂಗಡಿಸಿ ಸಂಗ್ರಹಿಸುವ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಗರಸಭೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಕಸ ಉತ್ಪಾದನೆಯಾಗುವ ಸ್ಥಳ ಹಾಗೂ ಸಂಗ್ರಹಿಸುವ ಸಿಬ್ಬಂದಿಯ ಮೇಲೆ ನಿಗಾ ಇಡಲು ‘ಕಾರ್ಡ್‌’ಗಳನ್ನು ವಿತರಿಸಲಾಗುತ್ತಿದೆ.

ನಗರಸಭೆಯ 19 ವಾರ್ಡ್‌ಗಳ ಪ್ರತಿ ಮನೆ ಮತ್ತು ಅಂಗಡಿಗಳಿಗೆ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಏಪ್ರಿಲ್‌ನಲ್ಲಿ ನಡೆಸಿದ ಈ ಪ್ರಯೋಗ ಯಶಸ್ವಿಯಾಗಿದ್ದು, ಹಂತ–ಹಂತವಾಗಿ ನಗರದ ಎಲ್ಲ ವಾರ್ಡ್‌ಗಳಿಗೆ ಕಾರ್ಡ್‌ ನೀಡಲು ನಿರ್ಧರಿಸಿದೆ. ಕಸ ವಿಂಗಡಣೆ, ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿ ಆಗುತ್ತಿದ್ದ ಲೋಪಗಳನ್ನು ಸರಿಪಡಿಸಲು ಇದರಿಂದ ಅನುಕೂಲವಾಗಿದೆ.

ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿವೆ. ನಗರದಲ್ಲಿ ಕಸದ ನಿರ್ವಹಣೆಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿವೆ. ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವನೆಯಿಂದ ದುರಂತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರು ಕಸ ವಿಲೇವಾರಿಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದರು. ನಗರಸಭೆಯ ಕಾರ್ಯವೈಖರಿ ಹಾಗೂ ನಾಗರಿಕರ ಜವಾಬ್ದಾರಿಯನ್ನು ಪ್ರಶ್ನಿಸಿದ್ದರು. ಕಸ ನಿರ್ವಹಣೆಗೆ ಸಂಬಂಧಿಸಿದಂತೆ ನಗರಸಭೆ ಈಗ ಕೈಗೊಂಡಿರುವ ಕ್ರಮ ಹೊಸ ಭರವಸೆ ಮೂಡಿಸಿದೆ.

ಏನಿದು ವ್ಯವಸ್ಥೆ?: ನಗರಸಭೆ ವತಿಯಿಂದ ವಾರ್ಡ್‌ ವ್ಯಾಪ್ತಿಯ ಪ್ರತಿ ಮನೆ, ಅಂಗಡಿಗೆ ಕಾರ್ಡ್‌ವೊಂದನ್ನು ನೀಡಲಾಗುತ್ತದೆ. ಹೆಸರು, ಫೋನ್‌ ಸಂಖ್ಯೆ, ವಾರ್ಡ್‌ ಸಂಖ್ಯೆ ಉಲ್ಲೇಖಿಸಲಾಗಿದೆ. ‘ಕಸವನ್ನು ವಿಂಗಡಿಸಿ ನೀಡುತ್ತಿದ್ದಾರೆಯೇ’ ಎಂಬ ಕಾಲಂನಲ್ಲಿ ಹೌದು ಮತ್ತು ಇಲ್ಲ ಎಂಬುದರ ಕೆಳಗೆ ಸರಿ ಅಥವಾ ತಪ್ಪು ಚಿಹ್ನೆಯನ್ನು ಹಾಕಬೇಕಿದೆ. ತಿಂಗಳ ವಾರು ಪಟ್ಟಿಯಲ್ಲಿ ಕಸ ಉತ್ಪಾದನೆಯಾಗುವ ಮನೆ ಅಥವಾ ಅಂಗಡಿ ಮಾಲೀಕರ ಸಹಿ, ಕಸ ಸಂಗ್ರಹಿಸುವವರ ಸಹಿ ಕಡ್ಡಾಯ.

‘ಕಸ ಉತ್ಪಾದನೆ ಮಾಡುವವರೇ ವಿಲೇವಾರಿಗೆ ಕೈಜೋಡಿಸಬೇಕು ಎಂಬ ನಿಯಮವಿದೆ. ಆದರೆ, ಕಸದ ವಿಚಾರದಲ್ಲಿ ನಾಗರಿಕ ಪ್ರಜ್ಞೆಯನ್ನು ಪ್ರಶ್ನಿಸುವ ಹಲವು ಸಂದರ್ಭಗಳನ್ನು ಎದುರಿಸಿದ್ದೇವೆ. ಎಲ್ಲೆಂದರಲ್ಲಿ ಕಸ ಬಿಸಾಡುವ, ಚರಂಡಿಗೆ ಎಸೆಯುವ ಪ್ರವೃತ್ತಿ ಸಾಮಾನ್ಯ ಎಂಬಂತಿದೆ. ಇದನ್ನು ಪ್ರಶ್ನಿಸಿದರೆ ಕಸ ಸಂಗ್ರಹಿಸುವ ವಾಹನ ಬಂದಿಲ್ಲ ಎಂಬ ದೂರು ಹೇಳುತ್ತಿದ್ದರು. ಕಸ ಸಂಗ್ರಹಿಸುವ ವಾಹನ ಹಾಗೂ ಜನರ ಮೇಲೆ ನಿಗಾ ಇಡಲು ಕಾರ್ಡ್‌ ವ್ಯವಸ್ಥೆ ರೂಪಿಸಲಾಗಿದೆ’ ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ವಿವರಿಸಿದರು.

19 ವಾರ್ಡ್‌ಗಳಲ್ಲಿ ಕಾರ್ಡ್‌:ಈ ವ್ಯವಸ್ಥೆಯನ್ನು ಹಂತ–ಹಂತವಾಗಿ ಜಾರಿಗೆ ತರಲಾಗುತ್ತಿದೆ. ವಾರ್ಡ್ ಸಂಖ್ಯೆ 9 ರಿಂದ 17ರಲ್ಲಿ ಏಪ್ರಿಲ್‌, 5, 6, 25, 27, 21, 24, 26ನೇ ವಾರ್ಡ್‌ಗಳಲ್ಲಿ ಮೇ ಹಾಗೂ 18, 22, 28ನೇ ವಾರ್ಡ್‌ಗಳಲ್ಲಿ ಜೂನ್ ತಿಂಗಳಿನಿಂದ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಈವರೆಗೆ 19 ವಾರ್ಡ್‌ಗಳಲ್ಲಿ ಕಾರ್ಡ್ ಹಂಚಿಕೆ ಮಾಡಲಾಗಿದೆ. ಕಾರ್ಡ್‌ ವಿತರಿಸಿದ ಬಳಿಕ ಜನರು ಕಸವನ್ನು ಬೇರ್ಪಡಿಸಿ ನೀಡುತ್ತಿದ್ದಾರೆ. ವಾಹನಗಳು ನಿಯಮಿತವಾಗಿ ವಾರ್ಡ್‌ಗಳಿಗೆ ಭೇಟಿ ನೀಡುತ್ತಿವೆ.

ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಿಗೆ ಅನುಗುಣವಾಗಿ ಕಸ ಸಂಗ್ರಹಿಸುವ ವಾಹನ ಮತ್ತು ಸಿಬ್ಬಂದಿ ಇಲ್ಲ. ಪ್ರತಿ ಬಡಾವಣೆಗೆ ಎರಡು ದಿನಕ್ಕೊಮ್ಮೆ ಕಸ ಸಂಗ್ರಹಿಸುವ ವಾಹನ ತೆರಳುತ್ತಿದೆ. ಹೆಚ್ಚುವರಿ ವಾಹನ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಆಗ ಪ್ರತಿ ದಿನ ಬಡಾವಣೆಗೆ ಕಸ ಸಂಗ್ರಹಿಸುವ ವಾಹನ ತೆರಳಲಿದೆ.

‘ಪ್ರತಿ ವಾರ್ಡ್‌ಗೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆಗಾಗ ವಾರ್ಡ್‌ಗಳಿಗೆ ಭೇಟಿ ನೀಡಿ ಕಾರ್ಡ್‌ ಪರಿಶೀಲಿಸುವ ಕಾರ್ಯ ನಡೆಯುತ್ತಿದೆ. ನಿತ್ಯ ಬೆಳಿಗ್ಗೆ ಕಸ ಸಂಗ್ರಹಿಸುವ ವಾಹನಗಳ ಮೇಲೆಯೂ ನಿಗಾ ಇಡಲಾಗಿದೆ. ವಾಹನವು ಕಸ ಸಂಗ್ರಹಿಸಲು ಬಾರದಿರುವುದು ಕಾರ್ಡ್‌ ಮೂಲಕ ಗೊತ್ತಾಗುತ್ತಿದೆ. ಇದರಿಂದ ಕಸ ಎಲ್ಲೆಂದರಲ್ಲಿ ಬಿಸಾಡುವುದು ತಪ್ಪುತ್ತದೆ’ ಎನ್ನುತ್ತಾರೆ ಪೌರಾಯುಕ್ತೆ ರೇಣುಕಾ.

ಕಸ ವಿಂಗಡಣೆ, ಸಂಗ್ರಹ ಹಾಗೂ ವಿಲೇವಾರಿ ಮೇಲೆ ನಿಗಾ ಇಡಲು ಇದರಿಂದ ಅನುಕೂಲವಾಗಿದೆ. ನಗರದ ಎಲ್ಲ ವಾರ್ಡ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಎಂ.ರೇಣುಕಾ, ನಗರಸಭೆ ಪೌರಾಯುಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT