ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಬಿತ್ತನೆಗೆ ಸಿದ್ಧವಾಗದ ಭೂಮಿ

ಬಿತ್ತನೆ ಬೀಜ ಕೊಳ್ಳಲು ರೈತರ ಹಿಂದೇಟು
Last Updated 6 ಜುಲೈ 2022, 4:30 IST
ಅಕ್ಷರ ಗಾತ್ರ

ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ಮಳೆ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆಗೆ ಭೂಮಿ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗದೆ ರೈತರು ಚಿಂತಿತರಾಗಿದ್ದಾರೆ.

ತಾಲ್ಲೂಕಿನಲ್ಲಿ ಮಳೆಯಾಶ್ರಿತ ಕೃಷಿ ಪದ್ಧತಿ ಮಾತ್ರ ಜಾರಿಯಲ್ಲಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವುದು ವಾಡಿಕೆ. ಇಲ್ಲಿನ ಖುಷ್ಕಿ ಪ್ರದೇಶದ ಪ್ರಮುಖ ಬೆಳೆ ಶೇಂಗಾ ಆಗಿದ್ದು, ಇದನ್ನು ಜುಲೈ ತಿಂಗಳ ಆರಂಭದಿಂದ ಅಂತ್ಯದವರೆಗೆ ಬಿತ್ತನೆ ಮಾಡಲಾಗುತ್ತದೆ.

ತಾಲ್ಲೂಕಿನಲ್ಲಿ 32,000 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಇದರಲ್ಲಿ 28,000 ಹೆಕ್ಟೇರ್‌ನಲ್ಲಿ ಶೇಂಗಾ
ಬಿತ್ತನೆ ಮಾಡಲಾಗುತ್ತಿತ್ತು. ಈ ವರ್ಷ ಸಕಾಲಕ್ಕೆ ಮಳೆ ಬಾರದ ಪರಿಣಾಮ ಶೇ 50ರಷ್ಟು ಪ್ರದೇಶದಲ್ಲಿ ಬಿತ್ತನೆಗೆ ಹೊಲಗಳನ್ನು ಸಿದ್ಧತೆ ಮಾಡಿಕೊಂಡಿಲ್ಲ. ಈ ವಾರ ಹದ ಮಳೆ ಬಂದಲ್ಲಿ ಅನುಕೂಲ. ಜತೆಗೆ ಸಕಾಲಕ್ಕೆ ಬಿತ್ತನೆ ಮಾಡಲು ಸಹಕಾರಿಯಾಗುತ್ತದೆ
ಎಂದು ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ವಿ.ಸಿ. ಉಮೇಶ್ ಮಾಹಿತಿ ನೀಡಿದರು.

‘ಇಲಾಖೆಯಿಂದ ರಿಯಾಯಿತಿ ದರದಲ್ಲಿ ಶೇಂಗಾ ಬಿತ್ತನೆ ಬೀಜ ನೀಡಲಾಗುತ್ತಿದ್ದು, ಇದುವರೆಗೆ 3,000 ಕ್ವಿಂಟಲ್ ಬಿತ್ತನೆ ಬೀಜ ಖರ್ಚಾಗಿದೆ. ನಾವು 7 ಸಾವಿರದಿಂದ 8 ಸಾವಿರ ಕ್ವಿಂಟಲ್ ಬೀಜ ಮಾರಾಟ ಆಗಬಹುದು ಎಂದು ಅಂದಾಜಿಸಿದ್ದೆವು. ಮಳೆ ಕೊರತೆ ಮತ್ತು ಖಾಸಗಿಯಾಗಿ ಸ್ವಲ್ಪ ಕಡಿಮೆ ದರಕ್ಕೆ ಬೀಜ ಸಿಗುತ್ತಿರುವುದು ಮಾರಾಟ ಕುಸಿತಕ್ಕೆ ಕಾರಣವಾಗಿದೆ. ಇದುವರೆಗೆ 3,500 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಬಿತ್ತನೆಯಾಗಿದ್ದು, ಇದರಲ್ಲಿ ದೇವಸಮುದ್ರ ಹೋಬಳಿಯಲ್ಲಿ ಅಧಿಕ ಪ್ರಮಾಣದಲ್ಲಿ ಹತ್ತಿ ಬಿತ್ತನೆಯಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿವರ್ಷ ಮಳೆ ಕೊರತೆ, ದುಬಾರಿ ಬೆಲೆಗೆ ಬಿತ್ತನೆ ಬೀಜ ಕೊಳ್ಳುವುದು, ಬೆಲೆ ಕುಸಿತದಿಂದ ಸಾಕಷ್ಟು ತೊಂದರೆ ಅನುಭವಿಸಿ ಕೃಷಿ ಮಾಡುತ್ತಿದ್ದೇವೆ. ಇದನ್ನು ಹೊರತುಪಡಿಸಿದಲ್ಲಿ ನಮಗೆ ಬೇರೆ ಉದ್ಯೋಗವಿಲ್ಲ. ಕೃಷಿ ಮಾಡಬೇಕು, ಇಲ್ಲವೇ ಕುಟುಂಬ ಸಮೇತ ಗುಳೆ ಹೋಗಬೇಕು ಎಂಬ ಸ್ಥಿತಿಯಲ್ಲಿದ್ದೇವೆ. ನಮ್ಮ ಕಷ್ಟವನ್ನು ಸರ್ಕಾರ ಕೇಳುತ್ತಿಲ್ಲ. ಫಸಲ್ ಬಿಮಾ ಯೋಜನೆಗೆ ಪ್ರತಿವರ್ಷ ಪ್ರೀಮಿಯಂ ಹಣ ಪಾವತಿಸುತ್ತಿದ್ದೇವೆ. ಆದರೆ,
ನಾನಾ ಕಾರಣ ಹೇಳಿ ವಿಮೆ ನೀಡುತ್ತಿಲ್ಲ. ಈ ವರ್ಷ ವಿಮೆ ಕಟ್ಟುವುದನ್ನು ಬಿಟ್ಟರೆ ಅದೇ ಲಾಭ ಎಂಬ ನಿರ್ಧಾರ ಮಾಡಿದ್ದೇವೆ. ವಿಮೆ ಕಟ್ಟಿ ಎಂದು ಪ್ರಚಾರ, ಮನವಿ ಮಾಡುವ ಅಧಿಕಾರಿಗಳು ವಿಮೆ ಹಣ ಕೊಡಿಸಲು ಕಾಳಜಿ ತೋರುತ್ತಿಲ್ಲ’ ಎಂದು ರೈತರಾದ ಮಂಜುನಾಥ ರೆಡ್ಡಿ, ರಾಮದಾಸ್ ದೂರಿದರು.

ಕೋಟ್‌...

ಕೃಷಿ ಇಲಾಖೆಯು ಸಂಕಷ್ಟದಲ್ಲೂ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಬಿತ್ತನೆ ಶೇಂಗಾ ಬೀಜ ಒದಗಿಸುತ್ತಿದೆ. ಇದನ್ನು ಯಾರೂ ಪ್ರಶ್ನೆ ಮಾಡದಿರುವುದು ಅನುಮಾನ ಹಾಗೂ ಬೇಸರ ತರಿಸಿದೆ.

ಹನುಮಂತಪ್ಪ, ಬೆಳೆಗಾರ, ಮೊಳಕಾಲ್ಮುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT