ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಿತ ಪ್ಲಾಸ್ಟಿಕ್‌ ವಿಲೇವಾರಿಗೆ ಸಿದ್ಧತೆ

ವ್ಯಾಪಾರಿಗಳಿಂದ ವಶಕ್ಕೆ ಪಡೆದಿದ್ದ ನಗರಸಭೆ
Last Updated 26 ಜೂನ್ 2019, 17:26 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರಸಭೆ ಮೂರು ವರ್ಷಗಳಿಂದ ವಶಕ್ಕೆ ಪಡೆದ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಿದ್ಧತೆ ನಡೆಸಿದೆ. ಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿ ಕಾನೂನುಬದ್ಧವಾಗಿ ನಾಶಪಡಿಸಲು ಮುಂದಾಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಲಹೆ ಮೇರೆಗೆ ಈ ವಿಲೇವಾರಿ ನಡೆಯಲಿದೆ. ಮಂಡಳಿಯ ಅಧಿಕಾರಿಗಳು ಹಾಗೂ ನಗರಸಭೆ ಪರಿಸರ ಎಂಜಿನಿಯರ್‌ಗಳ ನಡುವೆ ಸಮನ್ವಯತೆ ಏರ್ಪಟ್ಟಿದ್ದು, ಇದೇ ಮೊದಲ ಬಾರಿಗೆ ನಿಷೇಧಿತ ಪ್ಲಾಸ್ಟಿಕ್‌ ನಾಶಪಡಿಸಲಾಗುತ್ತಿದೆ.

ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಿ ರಾಜ್ಯ ಸರ್ಕಾರ 2016ರಲ್ಲಿ ಕಾನೂನು ರೂಪಿಸಿದೆ. ಅದಕ್ಕೂ ಮೊದಲು 40 ಮೈಕ್ರಾನ್‌ಗಿಂತ ಕಡಿಮೆ ತೂಕದ ಪ್ಲಾಸ್ಟಿಕ್‌ ಮಾತ್ರ ನಿಷೇಧವಿತ್ತು. ಎಲ್ಲ ವಿಧದ ಪ್ಲಾಸ್ಟಿಕ್‌ ಬಳಕೆಗೆ ಸರ್ಕಾರ ನಿರ್ಬಂಧ ವಿಧಿಸಿದ ಬಳಿಕ ಚಿತ್ರದುರ್ಗ ನಗರಸಭೆ ಚುರುಕಾಯಿತು. ಅಂಗಡಿ, ಗೋದಾಮು, ಬೀದಿ ಬದಿ ವ್ಯಾಪಾರಿಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ ವಶಕ್ಕೆ ಪಡೆಯಿತು.

ನಗರಸಭೆ ಈವರೆಗೆ ವಶಕ್ಕೆ ಪಡೆದಿರುವ ಸುಮಾರು 15 ಟನ್‌ ಪ್ಲಾಸ್ಟಿಕ್‌ ನಗರದ ಹೊರವಲಯದ ‘ಲ್ಯಾಂಡ್‌ ಫಿಲ್‌ ಸೈಟ್‌’ನಲ್ಲಿ ದಾಸ್ತಾನು ಮಾಡಲಾಗಿದೆ. ಕಸ ವಿಲೇವಾರಿ ಘಟಕದ ಕಟ್ಟಡವೊಂದರಲ್ಲಿ ತುಂಬಿಡಲಾಗಿದೆ. ಇದರಲ್ಲಿ ಪ್ಲಾಸ್ಟಿಕ್‌ ಕವರ್‌, ಥರ್ಮಾಕೋಲ್‌ ಕಪ್‌, ಲೋಟ, ಬೌಲ್‌, ಚಮಚ, ಟೇಬಲ್‌ ಕವರ್‌, ಕೈಚೀಲಗಳು ಇವೆ. ಪ್ಲಾಸ್ಟಿಕ್‌ ಬ್ಯಾನರ್‌ ಹಾಗೂ ಬಂಟಿಂಗ್ಸ್‌ ಕೂಡ
ಸೇರಿವೆ.

‘ನಿಷೇಧಿತ ಪ್ಲಾಸ್ಟಿಕ್‌ ವಿಲೇವಾರಿಗೆ ನಿಯಮಗಳನ್ನು ರೂಪಿಸಲಾಗಿದೆ. ಮಾರ್ಗದರ್ಶಿ ಸೂಚನೆಗಳ ಆಧಾರದ ಮೇರೆಗೆ ವಿಲೇವಾರಿ ಮಾಡಬೇಕಿದೆ. ಬಳಕೆಯ ಉದ್ದೇಶವನ್ನು ಆಧರಿಸಿ ನಾಶಪಡಿಸಲಾಗುತ್ತದೆ. ಸಣ್ಣ ತುಂಡುಗಳಾಗಿ ಕತ್ತರಿಸಿ ಪುಡಿ ಮಾಡಲಾಗುತ್ತದೆ. ಬಳಿಕ ಅದನ್ನು ಮರುಬಳಕೆ ಮಾಡಿಕೊಳ್ಳಲು ನೀಡಲಾಗುತ್ತದೆ. ಈ ಪ್ರಕ್ರಿಯೆ ಇದೇ ಮೊದಲ ಬಾರಿಗೆ ನಡೆಯುತ್ತಿದೆ’ ಎಂದು ಪರಿಸರ ಎಂಜಿನಿಯರ್‌ ಜೆ.ಜಾಫರ್‌ ಮಾಹಿತಿ ನೀಡಿದರು.

ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡುವ ಹಾಗೂ ಮಾರಾಟ ಮಾಡುವವರ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆಯುತ್ತಾರೆ. ಆದರೆ, ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವ ಅಧಿಕಾರ ಪರಿಸರ ಎಂಜಿನಿಯರ್‌ಗಳಿಗೆ ಇಲ್ಲ. ಉಪವಿಭಾಗಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾತ್ರ ಪ್ಲಾಸ್ಟಿಕ್‌ ಮಾರಾಟಗಾರರ ವಿರುದ್ಧ ದೂರು ದಾಖಲಿಸುವ ಅಧಿಕಾರವಿದೆ. ಕೆಲಸದ ಒತ್ತಡ ಹಾಗೂ ಸಮನ್ವಯತೆಯ ಕೊರತೆಯಿಂದ ಪ್ಲಾಸ್ಟಿಕ್‌ ಮಾರಾಟಗಾರರ ಮೇಲೆ ಈವರೆಗೆ ಪ್ರಕರಣ ದಾಖಲಿಸಲು ಸಾಧ್ಯವಾಗಿಲ್ಲ.

‘ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿ ಮೂಡಬೇಕಿದೆ. ಜಾಥಾ, ಕರಪತ್ರ ವಿತರಣೆ ಮೂಲಕ ಅರಿವು ಮೂಡಿಸುವ ಪ್ರಯತ್ನ ನಡೆದಿದೆ. ಬೀದಿ ಬದಿ ವ್ಯಾಪಾರಿಗಳು ಪ್ಲಾಸ್ಟಿಕ್‌ ಚೀಲಗಳನ್ನು ಬಳಕೆ ಮಾಡದಂತೆ ತಾಕೀತು ಮಾಡಲಾಗಿದೆ. ಪ್ಲಾಸ್ಟಿಕ್‌ ದಾಸ್ತಾನು ಮಳಿಗೆಗಳ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ’ ಎನ್ನುತ್ತಾರೆ ಪೌರಾಯುಕ್ತ ಸಿ.ಚಂದ್ರಪ್ಪ.

ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧವಿದ್ದರೂ ಹೊರರಾಜ್ಯದಲ್ಲಿ ಕಾನೂನು ರಕ್ಷಣೆ ಇದೆ. ನಿಷೇಧಿತ ಪ್ಲಾಸ್ಟಿಕ್‌ ತಮಿಳುನಾಡು, ಗುಜರಾತ್‌, ಮಹಾರಾಷ್ಟ್ರ ಹಾಗೂ ಪಕ್ಕದ ಆಂಧ್ರಪ್ರದೇಶದಿಂದ ಚಿತ್ರದುರ್ಗಕ್ಕೆ ಬರುತ್ತಿದೆ. ಪಕ್ಕದ ಜಿಲ್ಲೆಗಳಲ್ಲಿಯೂ ಪ್ಲಾಸ್ಟಿಕ್‌ ನಿಷೇಧ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಹೀಗಾಗಿ, ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕುವುದು ನಗರಸಭೆಗೂ ಕಷ್ಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT