ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ರೋಗ ನಿಯಂತ್ರಣಕ್ಕೆ ಆಗ್ರಹ

ಸತ್ತ ಕುರಿ ತಂದು ಪ್ರತಿಭಟನೆ ನಡೆಸಿದ ಕುರಿಗಾಹಿಗಳು
Last Updated 12 ನವೆಂಬರ್ 2019, 16:51 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ನೀಲಿ ನಾಲಿಗೆ ರೋಗ’ಕ್ಕೆ ಕುರಿಗಳು ಬಲಿಯಾಗುತ್ತಿರುವುದನ್ನು ತಡೆಯುವಂತೆ ಆಗ್ರಹಿಸಿ ಸತ್ತ ಕುರಿಗಳನ್ನು ಜಿಲ್ಲಾಧಿಕಾರಿ ಕಚೇರಿ ಎದುರು ಹಾಕಿ ಕುರಿಗಾಹಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಕುರಿಗಾಹಿಗಳು ಸತ್ತ ಕುರಿಗಳನ್ನು ಆವರಣದಲ್ಲಿ ಹಾಕಿದರು. ರೋಗ ನಿಯಂತ್ರಣಕ್ಕೆ ಶ್ರಮಿಸುತ್ತಿಲ್ಲ ಎಂದು ಪಶುವೈದ್ಯಕೀಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಹುಣಸೆಕಟ್ಟೆ, ಕೂನಬೇವು ಸೇರಿ ಹಲವು ಗ್ರಾಮಗಳಿಂದ ಕುರಿಗಾಹಿಗಳು ಬಂದಿದ್ದರು. ರೋಗ ನಿವಾರಣೆಗೆ ಹಾಕಿದ ಶ್ರಮ ಫಲಕಾರಿಯಾಗದಿರುವ ಬಗ್ಗೆ ಅವರಲ್ಲಿ ಆತಂಕವಿತ್ತು.

ಕುರಿ ಸಾಕಾಣಿಕೆಯನ್ನು ಪ್ರಮುಖ ಕಸುಬು ಮಾಡಿಕೊಂಡು ಹಲವಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಪ್ರತಿ ಮನೆಯಲ್ಲಿ 10ರಿಂದ 200 ಕುರಿಗಳನ್ನು ಸಾಕಿಕೊಂಡಿದ್ದೇವೆ. ಒಂದು ತಿಂಗಳಿಂದ ಅಂಟಿಕೊಂಡ ರೋಗಕ್ಕೆ ನೂರಾರು ಕುರಿ ಬಲಿಯಾಗಿವೆ. ಕುರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗದೇ ಹೆಣಗಾಡುತ್ತಿದ್ದೇವೆ ಎಂದು ಹೇಳಿದರು.

‘ಈ ಹಿಂದೆ ಕಾಲುಬಾಯಿ ಜ್ವರ ಮಾತ್ರ ಬರುತ್ತಿತ್ತು. ಕೆಲವೇ ದಿನಗಳಲ್ಲಿ ಈ ಕಾಯಿಲೆ ನಿಯಂತ್ರಣಕ್ಕೆ ಬರುತ್ತಿತ್ತು. ಈ ಹೊಸ ರೋಗದಿಂದ ತತ್ತರಿಸಿ ಹೋಗಿದ್ದೇವೆ. ಜೊಲ್ಲು ಸುರಿಸಲು ಆರಂಭಿಸಿದ ಕುರಿಗೆ ಭೇದಿ ಕಾಣಿಸಿಕೊಳ್ಳುತ್ತದೆ. ಕೆಲವೇ ದಿನಗಳಲ್ಲಿ ಇದು ಮೃತಪಡುತ್ತಿದೆ’ ಎಂದು ಹುಣುಸೆಕಟ್ಟೆ ಚಂದ್ರಣ್ಣ ಕಳವಳ ವ್ಯಕ್ತಪಡಿಸಿದರು.

ಕೂನುಬೇವು ಗ್ರಾಮದಲ್ಲಿ ಪಶುವೈದ್ಯಕೀಯ ಆಸ್ಪತ್ರೆ ಇದೆ. ಆದರೆ, ಎರಡು ವರ್ಷಗಳಿಂದ ಪಶುವೈದ್ಯರು ಇಲ್ಲ. ದೂರದ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದೇವೆ. ದುಬಾರಿ ಬೆಲೆ ಕೊಟ್ಟು ಔಷಧ ತಂದು ನೀಡಿದ್ದೇವೆ. ಪಶುವೈದ್ಯಕೀಯ ಇಲಾಖೆ ಉಚಿತವಾಗಿ ನೀಡುವ ಔಷಧವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಉಚಿತವಾಗಿ ಲಭ್ಯವಿರುವ ಔಷಧ ಕುರಿಗಾಹಿಗಳನ್ನು ನೇರವಾಗಿ ತಲುಪುತ್ತಿಲ್ಲ. ಕುರಿ ಕಳೆದುಕೊಳ್ಳುವ ನೋವಿನಲ್ಲಿ ಔಷಧಕ್ಕೆ ದುಬಾರಿ ಬೆಲೆ ತೆತ್ತುವ ಅನಿವಾರ್ಯತೆ ಎದುರಾಗಿದೆ ಎಂದು ಬಿಲ್‌ ಹಾಗೂ ಅಂಗಡಿಯ ಹೆಸರು ಸಹಿತ ಜಿಲ್ಲಾಧಿಕಾರಿಗೆ ದೂರು ನೀಡಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಜಿ.ಸುರೇಶ್ ಬಾಬು, ಧನಂಜಯ, ಬಿ.ವೆಂಕಟೇಶ್‌, ಕೆ.ಪಿ.ತಿಪ್ಪೇಸ್ವಾಮಿ ಸೇರಿ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT