ಬುಧವಾರ, ಅಕ್ಟೋಬರ್ 20, 2021
25 °C

ಪಟ್ಟಭದ್ರರ ಕಪಿಮುಷ್ಟಿಯಲ್ಲಿ ರೈತ ಸಂಘ: ಕೋಡಿಹಳ್ಳಿ ವಿರುದ್ಧ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋಡಿಹಳ್ಳಿ ಚಂದ್ರಶೇಖರ್‌ ಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪಟ್ಟಭದ್ರರ ಕಪಿಮುಷ್ಟಿಗೆ ಸಿಲುಕಿದೆ. ವ್ಯಾಪಾಕ ಭ್ರಷ್ಟಾಚಾರ ನಡೆಯುತ್ತಿದ್ದು, ರೈತರಿಗೆ ದೊಡ್ಡ ಮೋಸ ಮಾಡಲಾಗುತ್ತಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಡಿಹಳ್ಳಿ ಚಂದ್ರಶೇಖರ್‌ ಅವರ ನಡೆ ಅನುಮಾನಸ್ಪದ ರೀತಿಯಲ್ಲಿ ಕಾಣುತ್ತಿದೆ. ಸಂಘದ ಪೂರ್ವಾನುಮತಿ ಪಡೆಯದೇ ರಾಜ್ಯ ಸಾರಿಗೆ ನೌರರ ಮುಷ್ಕರಕ್ಕೆ ನಾಯಕತ್ವ ನೀಡಿದ್ದಾರೆ. ಹಸಿರು ಶಾಲು ತೆಗೆದು ಕೆಂಪು ಶಾಲು ಧರಿಸಿದರು. ರೈತ ಸಂಘದ ಕಚೇರಿಯನ್ನು ಸಾರಿಗೆ ನೌಕರರ ಮುಷ್ಕರಕ್ಕೆ ಬಳಕೆ ಮಾಡಿಕೊಂಡು ಸಂಘವನ್ನು ವಂಚಿಸಿದರು. ನಾಲ್ಕು ದಶಕಗಳಿಂದ ರೈತ ಸಂಘ ಕಾಪಾಡಿಕೊಂಡು ಬಂದಿದ್ದ ಗೌರವವನ್ನು ಮಣ್ಣುಪಾಲು ಮಾಡಿದರು’ ಎಂದು ದೂರಿದರು.

‘ರೈತ ಸಂಘವನ್ನು ತಮ್ಮ ಆಸ್ತಿ ಎಂಬಂತೆ ಪರಿಗಣಿಸಿದ್ದಾರೆ. ರೈತರಿಂದ ಹಣ ಸಂಗ್ರಹಿಸಿ ಲೆಕ್ಕಪತ್ರ ಒದಗಿಸದೇ ವಂಚಿಸುವ ಹುನ್ನಾರ ನಡೆಸಿದ್ದಾರೆ. ಸಂಘದ ಗುರುತಿನ ಚೀಟಿ, ಮಾಸಪತ್ರಿಕೆ ಹಾಗೂ ಕ್ಯಾಲೆಂಡರ್‌ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿಲ್ಲ. ತುಮಕೂರು ಜಿಲ್ಲೆಯ ನೀರಾ ಸಹಕಾರ ಸಂಘದ ಸದಸ್ಯತ್ವ ಹಾಗೂ ಷೇರು ಹಣದ ಬಗ್ಗೆ ಅವರು ಕೂಲಂಕಷವಾಗಿ ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದರು.

‘ರೈತ ಸಮುದಾಯಕ್ಕೆ ಒಳಿತು ಮಾಡುವ ಉದ್ದೇಶದಿಂದ ಪ್ರೊ.ಎಂ.ನಂಜುಂಡಸ್ವಾಮಿ ಅವರು ಕಟ್ಟಿದ ಸಂಘದ ಆಶಯಗಳನ್ನು ಮಣ್ಣುಪಾಲು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಸಂಘದ ನೇತೃತ್ವ ವಹಿಸಿದ ಕೋಡಿಹಳ್ಳಿ ಅವರು ರಿಯಲ್‌ ಎಸ್ಟೇಟ್‌ ವ್ಯವಹಾರವನ್ನು ನಡೆಸುತ್ತಿದ್ದಾರೆ. ಕುಟುಂಬದ ಹೆಸರಿನಲ್ಲಿ ಡೆವಲಪರ್‌ ಕಂಪನಿಯೊಂದನ್ನು ತೆರೆದಿದ್ದಾರೆ. ಅವರ ಮೇಲಿನ ಆರೋಪದ ಬಗ್ಗೆ ಸಂಘದ ಗೌರವ ಅಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೋಡಿಹಳ್ಳಿ ಅವರಿಗೆ ರೈತರ ಬಗೆಗೆ ಕಾಳಜಿ ಇಲ್ಲ ಎಂಬುದು ಮನವರಿಕೆಯಾಗಿದೆ. ಸಂಘದಲ್ಲಿ ಭ್ರಷ್ಟಾಚಾರ ಒಪ್ಪಿತ ಆಗಿರುವ ಅನುಮಾನ ಮೂಡುತ್ತಿದೆ. ಇದು ಸಮಾಜಕ್ಕೆ ಮಾಡುವ ದೊಡ್ಡ ದ್ರೋಹವಾಗುತ್ತದೆ. ರೈತರ ಹಿತಾಸಕ್ತಿಯನ್ನು ಬದಿಗಿಟ್ಟ ಸಂಘ ಜನಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಇದನ್ನು ಜನರ ಮುಂದೆ ಇಡಲಾಗಿದೆ. ಸಮಾನ ಮನಸ್ಕರು ಒಂದೇ ವೇದಿಕೆಗೆ ಬಂದು ರೈತ ಸಂಘವನ್ನು ಕಾಪಾಡಬೇಕು’ ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು