ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಶಾಲಾ ಅಂಗಳದಲ್ಲಿ ಮಕ್ಕಳ ಕಲರವ

ಶೈಕ್ಷಣಿಕ ವರ್ಷಕ್ಕೆ ವೈಭವದ ಸ್ವಾಗತ; ನಗರದಲ್ಲಿ ಕಳೆಗುಂದಿದ ಉತ್ಸಾಹ
Published 31 ಮೇ 2024, 13:55 IST
Last Updated 31 ಮೇ 2024, 13:55 IST
ಅಕ್ಷರ ಗಾತ್ರ

ಚಿತ್ರದುರ್ಗ: ತಳಿರು ತೋರಣದಿಂದ ಸಿಂಗಾರಗೊಂಡಿದ್ದ ಶಾಲೆಗಳಲ್ಲಿ ಚಿಣ್ಣರ ಕಲರವ ಮನೆ ಮಾಡಿತ್ತು. ನಗುತ್ತಾ ಶಾಲಾ ಅಂಗಳಕ್ಕೆ ಕಾಲಿಟ್ಟ ಮಕ್ಕಳಿಗೆ ಗುಲಾಬಿ ಹೂವು ನೀಡುತ್ತಾ ಶಿಕ್ಷಕರು 2024–25ನೇ ಶೈಕ್ಷಣಿಕ ವರ್ಷವನ್ನು ಶುಕ್ರವಾರ ಅದ್ದೂರಿಯಾಗಿ ಸ್ವಾಗತಿಸಿದರು. ಈ ಮೂಲಕ ‘ಶಾಲಾ ಪ್ರಾರಂಭೋತ್ಸವ‌’ವನ್ನು ಜಿಲ್ಲೆಯಾದ್ಯಂತ ಹಬ್ಬದಂತೆ ಆಚರಿಸಲಾಯಿತು.

ಜಿಲ್ಲೆಯಲ್ಲಿ 2,026 ಪ್ರಾಥಮಿಕ ಹಾಗೂ 493 ಪ್ರೌಢಶಾಲೆ ಸೇರಿ 2,519 ಶಾಲೆಗಳಿವೆ. ಸುಮಾರು 1.6 ಲಕ್ಷ ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. ಈ ಎಲ್ಲ ಮಕ್ಕಳು ಪಠ್ಯಪುಸ್ತಕ, ಹೊಸ ಸಮವಸ್ತ್ರ ಹಿಡಿದು ಶೈಕ್ಷಣಿಕ ವರ್ಷಕ್ಕೆ ಕಾಲಿಟ್ಟರು.

ಬೇಸಿಗೆ ರಜೆಯನ್ನು ಪೂರ್ಣಗೊಳಿಸಿದ ಮಕ್ಕಳನ್ನು ಪಾಲಕರು ಉತ್ಸಾಹದಿಂದ ಶಾಲಾ ಆವರಣಕ್ಕೆ ಕರೆ ತಂದರು. ಶಾಲಾ ಶಿಕ್ಷಣ ಇಲಾಖೆ ಸೂಚನೆಯಂತೆ ಗುರುವಾರವೇ ತಳಿರು ತೋರಣ, ಹೂವಿನ ಹಾರಗಳನ್ನು ಹಾಕಿ ಶಾಲೆ ಮುಖ್ಯದ್ವಾರಗಳನ್ನು ಸಿಂಗರಿಸಲಾಗಿತ್ತು. ಬೆಳಿಗ್ಗೆ 9ಕ್ಕೆ ಬಂದ ಶಾಲಾ ಸಿಬ್ಬಂದಿ ಕೊನೆ ಕ್ಷಣದ ಸಿದ್ಧತೆ ಮಾಡಿಕೊಂಡರು.

ನಗರ ಸೇರಿದಂತೆ ಅನುದಾನರಹಿತ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವದ ಸಂಭ್ರಮ ಕಂಡುಬರಲಿಲ್ಲ. ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಸಂಭ್ರಮವಿದ್ದರೂ ಮಕ್ಕಳ ಸಂಖ್ಯೆ ಮಾತ್ರ ವಿರಳವಾಗಿತ್ತು. ಗ್ರಾಮೀಣ ಭಾಗದಲ್ಲಿ ಎತ್ತಿನಗಾಡಿ ಮೆರವಣಿಗೆ, ಕುಂಭಮೇಳ ಸ್ವಾಗತ ವಿಶೇಷವಾಗಿತ್ತು.

ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ, ಇಂಗಳದಾಳ್‌, ಕವಾಡಿಗರಹಟ್ಟಿ, ಜೆ.ಎನ್.ಕೋಟೆ, ಕಲ್ಲಹಳ್ಳಿ, ಜೋಡಿಚಿಕ್ಕೇನಹಳ್ಳಿ, ಗೊಲ್ಲರಹಟ್ಟಿ, ಸಜ್ಜನಕೆರೆ, ಪಲ್ಲವಗೆರೆ ಸೇರಿದಂತೆ ವಿವಿಧ ಹಳ್ಳಿಗಳಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರು, ಸಿಬ್ಬಂದಿ ಉತ್ಸಾಹ ಜೋರಾಗಿತ್ತು.

ಬಾರ್‌ಲೈನ್‌ ಶಾಲೆ, ಐಯುಡಿಪಿ ಬಡಾವಣೆ, ಎಂಕೆ ಹಟ್ಟಿ, ಮಲ್ಲಾಪುರ, ಮೆದೇಹಳ್ಳಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸೇರಿ ವಿವಿಧೆಡೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಲಾಯಿತು.

ನಗರದ ವಿ.ಪಿ.ಬಡಾವಣೆಯ ಪ್ರಾಥಮಿಕ ಶಾಲೆ ಆವರಣದಲ್ಲಿ ಚಿತ್ರದುರ್ಗ ಉತ್ತರ ಕ್ಲಸ್ಟರ್‌ನ ಸಿಆರ್‌ಪಿ ಎಚ್‌.ಟಿ.ರವಿಶಂಕರ್‌ ಮಕ್ಕಳಿಗೆ ಗುಲಾಬಿ ಹೂವು ನೀಡಿ ಹಸ್ತಲಾಘವ ಮಾಡಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಹೊಸ ಬಟ್ಟೆ ತೊಟ್ಟು ಶಾಲೆಗೆ ಬಂದಿದ್ದು ವಿಶೇಷವಾಗಿತ್ತು.

ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಹಾಲು ನೀಡಿ ತರಗತಿಗೆ ಕಳುಹಿಸಲಾಯಿತು. ಬಳಿಕ ಮಧ್ಯಾಹ್ನದ ಬಿಸಿಯೂಟಕ್ಕೆ ಸಿಹಿ ಅಡುಗೆ ಮಾಡಿಸಲಾಗಿತ್ತು. ಗೋಧಿ ಪಾಯಸ, ಕೇಸರಿ ಬಾತ್‌, ಕೀರು, ಹೋಳಿಗೆ, ಚಿತ್ರಾನ್ನ, ಅನ್ನ ಸಂಬಾರ್‌, ಮೆಣಸಿನಕಾಯಿ ಬಜ್ಜಿ ಸೇರಿ ಸಿಹಿ ತಿನಿಸು ಸಿದ್ಧಪಡಿಸಿ ಮಕ್ಕಳಿಗೆ ಬಡಿಸಲಾಯಿತು.

ವಿದ್ಯಾವಿಕಾಸ ಯೋಜನೆಯ ಕಾರ್ಯಕ್ರಮದಡಿ ಈ ಬಾರಿ ಎರಡೂ ಜೊತೆ ಸಮವಸ್ತ್ರವನ್ನು ಮೊದಲ ದಿನವೇ ವಿತರಿಸಲಾಯಿತು. ಶಿಕ್ಷಕರು ಶಾಲಾ ಪ್ರಾರಂಭ ಹಾಗೂ ದಾಖಲಾತಿ ಆಂದೋಲನ ಜಾಥಾ ನಡೆಸಿದರು. ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಣ ಆಸಕ್ತರು, ಎಸ್‌ಡಿಎಂಸಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಶಾಲೆಗಳಲ್ಲಿ ನಡೆದ ಸಂಭ್ರಮಕ್ಕೆ ಸಾಕ್ಷಿಯಾದರು.

ಚಿತ್ರದುರ್ಗದ ಹೊರವಲಯದ ಕವಾಡಿಗರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಂಭಮೇಳ ಹೊತ್ತ ವಿದ್ಯಾರ್ಥಿನಿಯರು
ಚಿತ್ರದುರ್ಗದ ಹೊರವಲಯದ ಕವಾಡಿಗರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಂಭಮೇಳ ಹೊತ್ತ ವಿದ್ಯಾರ್ಥಿನಿಯರು

ಜಿಲ್ಲೆಯಾದ್ಯಂತ ಶಾಲಾ ಪ್ರಾರಂಭೋತ್ಸವ‌ ವಿಶೇಷವಾಗಿ ನೆರವೇರಿದೆ. ಪ್ರತಿ ವಿದ್ಯಾರ್ಥಿಗೆ ಎರಡು ಜೊತೆ ಸಮವಸ್ತ್ರ ಪಠ್ಯಪುಸ್ತಕಗಳನ್ನು ಮೊದಲ ದಿನವೇ ವಿತರಿಸಲಾಗಿದೆ. ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ.

-ಎಂ.ನಾಸೀರುದ್ದೀನ್‌ ಡಿಡಿಪಿಐ

ಸರ್ಕಾರಿ ಶಾಲೆಗೆ ಬರುವುದು ಸಂತಸ ತಂದಿದೆ. ಮೊದಲ ದಿನ ಗುಲಾಬಿ ಹೂವು ನೀಡಿ ಶಿಕ್ಷಕರು ಸ್ವಾಗತಿಸಿದರು. ಶಾರದ ಪೂಜೆ ಮಾಡಿ ಪಾಠ ಪ್ರಾರಂಭಿಸಿದರು. ನಮ್ಮ ಶಾಲೆ ಬಗ್ಗೆ ನನಗೆ ಹೆಮ್ಮೆಯಿದೆ.

-ಕೆ.ಸಿ.ದೀಕ್ಷಿತಾ ವಿದ್ಯಾರ್ಥಿನಿ ಸರ್ಕಾರಿ ಪ್ರಾಥಮಿಕ ಶಾಲೆ ಕೋಟೆ ರಸ್ತೆ

ಕುಂಭಮೇಳದ ಸ್ವಾಗತ

ನಗರದ ಹೊರವಲಯದ ಕವಾಡಿಗರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಕುಂಭಮೇಳದ ಮೂಲಕ ಸ್ವಾಗತಿಸಲಾಯಿತು. ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಬಣ್ಣ ಬಣ್ಣದ ಟೋಪಿಗಳನ್ನು ಇಟ್ಟು ಸಮವಸ್ತ್ರ ಪುಸ್ತಕ ಪೆನ್ಸಿಲ್‌ಗಳನ್ನು ನೀಡಿ ತರಗತಿಗೆ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಂ.ನಾಸೀರುದ್ದೀನ್‌ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌. ನಾಗಭೂಷಣ್‌ ಸಂಭ್ರಮಕ್ಕೆ ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT