ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮರುತ್ತಿದೆ ಕ್ರೀಡಾ ಸಾಧನೆಯ ಕನಸು

ಧರ್ಮಪುರಕ್ಕೆ ಸಿಗದ ಕ್ರೀಡಾಂಗಣ ಭಾಗ್ಯ
Last Updated 7 ಜುಲೈ 2022, 4:35 IST
ಅಕ್ಷರ ಗಾತ್ರ

ಧರ್ಮಪುರ: ಹಿರಿಯೂರು ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರ, ಆಂಧ್ರ ಗಡಿಯಲ್ಲಿರುವ ಧರ್ಮಪುರದಲ್ಲಿ ಕ್ರೀಡಾಂಗಣ ಸೌಲಭ್ಯವಿಲ್ಲ. ಇದರಿಂದ ಅದೆಷ್ಟೋ ಕ್ರೀಡಾಪಟುಗಳ ಭವಿಷ್ಯ ಕಮರಿಹೋಗಿದೆ.

ಅಭಿವೃದ್ಧಿ ವಿಷಯದಲ್ಲಿ ಸದಾ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಹೋಬಳಿಯಲ್ಲಿ ಕ್ರೀಡಾ ಚಟುವಟಿಕೆಗೆ ಪೂರಕ ವಾತಾವರಣ ಇಲ್ಲ ಎಂಬುದು ಕ್ರೀಡಾಪಟುಗಳ ಕೊರಗು.

ಖಂಡೇನಹಳ್ಳಿ, ಬೇತೂರು ಪಾಳ್ಯ, ದೇವರಕೊಟ್ಟ, ವೇಣುಕಲ್ಲುಗುಡ್ಡ, ಹೂವಿನಹೊಳೆ, ಕೋಡಿಹಳ್ಳಿ, ರಂಗೇನಹಳ್ಳಿ, ದೇವರಕೊಟ್ಟ ಮೊರಾರ್ಜಿ ವಸತಿಶಾಲೆ, ಬ್ಯಾಡರಹಳ್ಳಿ, ಇಕ್ಕನೂರು,ಅಂಬಲಗೆರೆಯಲ್ಲಿರುವ ಪ್ರೌಢಶಾಲೆಗಳು ಸೇರಿ ಹರಿಯಬ್ಬೆ, ದೇವರಕೊಟ್ಟ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಆಟದ ಮೈದಾನವಿದೆ. ಆದರೆ, ಹೋಬಳಿಯಲ್ಲಿ ಸುಸಜ್ಜಿತ ಕ್ರೀಡಾಂಗಣ ಇಲ್ಲದ ಕಾರಣ ಶಾಲಾ ಮೈದಾನದಲ್ಲಿ ಕೊಕ್ಕೊ, ಕಬಡ್ಡಿಆಟ ಆಡುವುದನ್ನು ಮಾತ್ರ ಕಾಣಬಹುದು.

ಧರ್ಮಪುರದಲ್ಲಿ ಪ್ರಾಥಮಿಕ ಹಂತದಿಂದ ಪದವಿವರೆಗೂ ಶೈಕ್ಷಣಿಕ ಸೌಲಭ್ಯವಿದೆ. ಇಲ್ಲಿ ಸುಮಾರು 10,000ಕ್ಕೂ ಹೆಚ್ಚು ಜನಸಂಖ್ಯೆ ಇದೆಯಾದರೂ ಕ್ರೀಡಾಪಟುಗಳಿಗೆ ಅನುಕೂಲಕರವಾದ ಕ್ರೀಡಾಂಗಣ ಸೌಲಭ್ಯ ಇಲ್ಲ. ಇನ್ನು ತರಬೇತುದಾರರಂತೂ ಕನಸಿನ ಮಾತು.

40 ವರ್ಷಗಳಿಂದಲೂ ಈ ಭಾಗದ ಅನೇಕ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಿದ್ದಾರೆ. ಆದರೆ, ಸರಿಯಾದ ಕ್ರೀಡಾಂಗಣ ಮತ್ತು ತರಬೇತುದಾರರಿಲ್ಲದೆ ತಮ್ಮ ಕ್ರೀಡಾ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೂರದ ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರಗಳಿಗೆ ಹೋಗಿ ಅಭ್ಯಾಸ ಮಾಡಲುಆರ್ಥಿಕ ತೊಂದರೆ ಅವರನ್ನು ಕಾಡುತ್ತಿದೆ. ಕ್ರಿಕೆಟ್ ಮತ್ತಿತರ ಗುಂಪು ಆಟ ಆಡುವಾಗ ಗ್ರಾಮದ ಸುತ್ತಲಿನ ರೈತರ ಜಮೀನುಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ.

ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಈ ಕುರಿತ ಬೇಡಿಕೆ ಇಡುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ. ಇಲ್ಲಿ ಕ್ರೀಡಾಂಗಣ ನಿರ್ಮಿಸಲು ಬೇಕಾದಷ್ಟು ಗ್ರಾಮಠಾಣಾ ಜಾಗ ಇಲ್ಲದ್ದರಿಂದ ಬರೀ ಸಬೂಬು ಹೇಳಿಕೊಂಡು ಬರುತ್ತಿದ್ದಾರೆ.ಪರಿಶಿಷ್ಟ ಜಾತಿ, ವರ್ಗ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಡತನವೂ ಇದೆ. ಇದರಿಂದಾಗಿ ಉದಯೋನ್ಮುಖ ಪ್ರತಿಭೆಗಳು ದೂರದ ನಗರಗಳಿಗೆ ಹೋಗಿ ತರಬೇತಿ ಪಡೆಯಲು ಸಾಧ್ಯವಾಗದೆ ತಮ್ಮ ಕ್ರೀಡಾಬದುಕನ್ನು ಕೊನೆಗೊಳಿಸಿಕೊಳ್ಳುತ್ತಿದ್ದಾರೆ ಎಂದು ಬೇಸರಿಸುತ್ತಾರೆಕ್ರೀಡಾಪಟು ನಾಗರಾಜ.

ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಧರ್ಮಪುರದಲ್ಲಿ ಸುಸಜ್ಜಿತ ಕ್ರೀಡಾಂಗಣ ಮತ್ತು ತರಬೇತುದಾರರ ವ್ಯವಸ್ಥೆ ಮಾಡಿದಲ್ಲಿ ಮತ್ತಷ್ಟು ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ ಎನ್ನುತ್ತಾರೆರಾಷ್ಟ್ರೀಯ ರಿಂಗ್ ಬಾಲ್ ಆಟಗಾರಪಿ.ವಿ.ನವನೀತಗೌಡ.

----

ರನ್ನಿಂಗ್ ರೇಸ್, ಬ್ಯಾಸ್ಕೆಟ್ ಬಾಲ್, ರಿಂಗ್ ಬಾಲ್ ಆಟಗಳಿಗೆ ಉತ್ತಮ ಅಂಕಣದ ಅವಶ್ಯಕತೆ ಇದೆ. ಒಳಾಂಗಣ ಕ್ರೀಡೆಗಳಿಗೆ ಅನುಕೂಲವಾಗುವಂತಹ ಕ್ರೀಡಾಂಗಣದ ವ್ಯವಸ್ಥೆಯನ್ನು ಜನಪ್ರತಿನಿಧಿಗಳು ಕಲ್ಪಿಸಿಕೊಟ್ಟರೆ ಅನುಕೂಲವಾಗಲಿದೆ.
–ನಾಗರಾಜ, ಕ್ರೀಡಾಪಟು

---

ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದಾರೆ. ಅವರಿಗೆ ಕ್ರೀಡಾಂಗಣ ಸೌಲಭ್ಯ ಮತ್ತು ತರಬೇತುದಾರರು ಇಲ್ಲದೆ ತೊಂದರೆಯಾಗುತ್ತಿದೆ.
–ಪಿ.ವಿ. ನವನೀತಗೌಡ, ರಾಷ್ಟ್ರೀಯ ರಿಂಗ್ ಬಾಲ್ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT