ಮಂಗಳವಾರ, ಏಪ್ರಿಲ್ 20, 2021
31 °C
ಸಾಮಾಜಿಕ ಸಂಘರ್ಷ ಸಮಿತಿ

ಮೀಸಲಾತಿ ವಂಚಿತರು ದನಿ ಎತ್ತುತ್ತಿಲ್ಲ: ಪ್ರೊ.ಸಿ.ಕೆ. ಮಹೇಶ್ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಬಲಾಢ್ಯ ಸಮುದಾಯಗಳು ಮೀಸಲಾತಿಗಾಗಿ ಹೋರಾಟ, ಪಾದಯಾತ್ರೆ ನಡೆಸಿ ಸರ್ಕಾರಕ್ಕೆ ಬೆದರಿಕೆ ಹಾಕುತ್ತಿವೆ. ನಿಜವಾಗಿಯೂ ಮೀಸಲಾತಿಯಿಂದ ವಂಚಿತರಾದವರು ದನಿ ಎತ್ತದೆ ಮೌನವಹಿಸಿರುವುದು ನೋವಿನ ಸಂಗತಿ’ ಎಂದು ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಪ್ರೊ.ಸಿ.ಕೆ. ಮಹೇಶ್ ಬೇಸರ ವ್ಯಕ್ತಪಡಿಸಿದರು.

ಪತ್ರಿಕಾ ಭವನದಲ್ಲಿ ಸಾಮಾಜಿಕ ಸಂಘರ್ಷ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ‘ಮೀಸಲಾತಿ ಸಾಂವಿಧಾನಿಕ ತಾತ್ವಿಕ ನಿಲುವುಗಳು ಮತ್ತು ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ದೇಶದ ಪ್ರಜೆಗಳಿಗೆ ಸರಿಸಮನಾಗಿ ಭೂಮಿ, ಉದ್ದಿಮೆ, ಶಿಕ್ಷಣ, ಸಂಪತ್ತು, ಉದ್ಯೋಗ ಎಲ್ಲವೂ ಆಯಾ ಜನಸಂಖ್ಯೆಗೆ ಅನುಗುಣವಾಗಿ ಸಿಕ್ಕಾಗ ಯಾರೂ ಮೀಸಲಾತಿ ಕೇಳುವ ಪ್ರಶ್ನೆ ಎದುರಾಗದು. ಇದು ಈಡೇರಬೇಕಾದರೆ ಡಾ.ಬಿ.ಆರ್‌. ಅಂಬೇಡ್ಕರ್‌ ಆಶಯಕ್ಕೆ ಬದ್ಧರಾಗಿ ಎಲ್ಲರೂ ನಡೆದುಕೊಳ್ಳಬೇಕು’ ಎಂದರು.

‘ಚುನಾವಣೆ ವೇಳೆ ಆಸೆ, ಆಮಿಷಗಳಿಗೆ ಬಲಿಯಾದರೆ ದೇಶದ ಪ್ರಗತಿಗೆ ಹಿನ್ನಡೆಯಾಗಲಿದೆ. ಆದ್ದರಿಂದ ಪವಿತ್ರವಾದ ಮತವನ್ನು ಯಾರೂ ಮಾರಿಕೊಳ್ಳಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಈ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ. ಶಫಿವುಲ್ಲಾ, ‘ಮೀಸಲಾತಿಯನ್ನೇ ಕೇಳದ ಮೇಲ್ವರ್ಗಕ್ಕೆ ಶೇ 10ರಷ್ಟು ಮೀಸಲಾತಿ ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ತಳಸಮುದಾಯಗಳು ಪ್ರಶ್ನಿಸುತ್ತಿಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದವರಿಗೆ ಆಯಾ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕಿದೆ. ಆದರೆ, ಎಲ್ಲರೂ ಮೀಸಲಾತಿಗಾಗಿ ಹೋರಾಟ ನಡೆಸಿದರೆ ದೊಡ್ಡ ಸಮಸ್ಯೆ ಎದುರಾಗಲಿದೆ’ ಎಂದು ಎಚ್ಚರಿಸಿದರು.

ಮಡಿವಾಳರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ರಾಮಪ್ಪ, ದಲಿತ ಮುಖಂಡ ರಾಜಪ್ಪ, ನಗರಸಭೆ ಸದಸ್ಯ ನಸರುಲ್ಲಾ, ಪ್ರಾಧ್ಯಾಪಕ ಡಾ. ಸಂಜೀವಕುಮಾರ್ ಪೋತೆ, ಕಸವನಹಳ್ಳಿ ಶಿವಣ್ಣ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.