ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಕೆಳಸೇತುವೆ: ಜನರ ಆಕ್ರೋಶ

ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಮುಂದುವರೆದ ಅಸಮಾಧಾನ
Last Updated 5 ಡಿಸೆಂಬರ್ 2021, 5:45 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಹೊರವಲಯದಿಂದ ನಾಯಕನಹಟ್ಟಿ, ತುರುವನೂರು ಸಂಪರ್ಕಿಸುವ ಮಾರ್ಗದಲ್ಲಿ ನಿರ್ಮಿಸಿರುವ ರೈಲ್ವೆ ಕೆಳಸೇತುವೆಯಲ್ಲಿ ಮಳೆಯಾದಗಲೆಲ್ಲಾ ನೀರು ನಿಲ್ಲುತ್ತಿದ್ದು, ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿ ಕಂಟಕ ಸೃಷ್ಟಿಸುತ್ತಿದೆ ಎಂದು ಜನ ಶನಿವಾರ ಕೂಡ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ರಸ್ತೆಯಲ್ಲಿ ಸಣ್ಣ ಮಳೆಗೂ ಸಂಪರ್ಕ ಕಡಿತಗೊಳ್ಳುತ್ತದೆ. ಮಳೆ ಸುರಿದರೆ ವಾಹನ ಸವಾರರಿಗೆ ಹಳ್ಳಿ ರಸ್ತೆಯೇ ಆಸರೆಯಾಗಿದೆ. ಹತ್ತಾರು ಕಿ.ಮೀ ಸುತ್ತಿ ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ.

ಸೇತುವೆ ಕೆಳಭಾಗದಲ್ಲಿ ಮಳೆ ನೀರು ಹರಿದು ಹೋಗಲು ನಿರ್ಮಿಸಿದ ಚರಂಡಿಯೇ ಕಂಟಕವಾಗಿದೆ. ಮಳೆ ನಿಂತು ಹಲವು ದಿನ ಕಳೆದರೂ ಇಲ್ಲಿರುವ ನೀರು ಮಾತ್ರ ಕರಗುವುದಿಲ್ಲ. ಆ ವೇಳೆ ಈ ಮಾರ್ಗದಲ್ಲಿ ಸಂಚರಿಸುವುದನ್ನೇ ಅನೇಕರು ನಿಲ್ಲಿಸುತ್ತಿದ್ದಾರೆ. ನೂರಾರು ದ್ವಿಚಕ್ರ ವಾಹನ ಸವಾರರು ಬಂದ ದಾರಿಗೆ ಸುಂಕವಿಲ್ಲ ಎಂದುಪರ್ಯಾಯ ಮಾರ್ಗದ ಮೂಲಕ ಊರಿಗೆ ಹೋಗಲು ಮುಂದಾಗುತ್ತಿದ್ದಾರೆ.

ಈ ಮಾರ್ಗದಲ್ಲಿ ನೂರಾರು ಮಂದಿ ದ್ವಿಚಕ್ರ ವಾಹನ ಸವಾರರು ನಿಂತ ನೀರಿನ ಮೇಲೆ ಸಂಚರಿಸಲುಹರಸಾಹಸ ಪಟ್ಟು ಪೆಟ್ಟು ಮಾಡಿಕೊಂಡಿದ್ದಾರೆ. ಶನಿವಾರ ಶಾಲಾ ವಾಹನವೊಂದು ಸಂಚರಿಸುತ್ತಿರುವ ವೇಳೆ ಮಧ್ಯೆ ಸುಮಾರು ಹೊತ್ತು ನಿಲ್ಲಬೇಕಾಯಿತು. ವಾಹನದೊಳಗಿದ್ದ ಮಕ್ಕಳು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.

ತುರುವನೂರು, ನಾಯಕನಹಟ್ಟಿ ಮಾರ್ಗದ ಹತ್ತಾರು ಗ್ರಾಮಗಳಿಗೆ ಈ ಮಾರ್ಗದಿಂದ ತೆರಳಬಹುದಾಗಿದೆ. ಸಾವಿರಾರು ಜನರು, ಹಲವು ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಬರುತ್ತಾರೆ. ಈ ಭಾಗದ ರೈತರು ಹೂವು, ತರಕಾರಿ, ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಈ ರಸ್ತೆ ಅವಲಂಬಿಸಿದ್ದಾರೆ. ಆದರೆ, ಮಳೆ ಸುರಿದಾಗ ಇಲ್ಲಿ ತೊಂದರೆ ಮಾತ್ರ ತಪ್ಪಿದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT