ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಿಂದ ಭೋವಿ ಸಮಾಜಕ್ಕೆ ಅನ್ಯಾಯ: ಮಾಜಿ ಸಚಿವ ವೆಂಕಟರಮಣಪ್ಪ

Published 2 ಏಪ್ರಿಲ್ 2024, 20:45 IST
Last Updated 2 ಏಪ್ರಿಲ್ 2024, 20:45 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಂದು ಕ್ಷೇತ್ರದಲ್ಲಿಯೂ ಟಿಕೆಟ್‌ ನೀಡದೇ ಕಾಂಗ್ರೆಸ್‌ ಪಕ್ಷವು ಭೋವಿ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಬೆಂಗಳೂರಿನಲ್ಲಿ ಶೀಘ್ರ ಸಮಾಜದ ಸಭೆ ಕರೆದು ಮುಂದಿನ ನಡೆಯ ಬಗ್ಗೆ  ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮಾಜಿ ಸಚಿವ, ಕಾಂಗ್ರೆಸ್‌ನ ವೆಂಕಟರಮಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ 1984ರಿಂದ ಸಮುದಾಯದ ಒಬ್ಬರಿಗೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಕಾಂಗ್ರೆಸ್‌ ಅಪಚಾರ ಮಾಡುತ್ತಿದೆ. ರಾಜಕೀಯವಾಗಿ ಕಡೆಗಣಿಸುತ್ತಿರುವ ಬಗ್ಗೆ ಸಮುದಾಯದಲ್ಲಿ ಅಸಮಾಧಾನ ಹೆಚ್ಚಾಗಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಭೋವಿ ಸಮುದಾಯವು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಎಡಗೈ ಹಾಗೂ ಬಲಗೈ ಸಮುದಾಯ ಪರಿಗಣಿಸಿ ಭೋವಿ ಸಮಾಜವನ್ನು ನಿರ್ಲಕ್ಷಿಸಲಾಗುತ್ತಿದೆ. ನಿಗಮ, ಮಂಡಳಿ ನೇಮಕ, ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ ಚುನಾವಣೆ ಸಂದರ್ಭದಲ್ಲಿಯೂ ಸಮಾಜದ ಪ್ರಮುಖರನ್ನು ಪರಿಗಣಿಸುತ್ತಿಲ್ಲ. ಇದರ ವಿರುದ್ಧ ಸಮುದಾಯವನ್ನು ಒಗ್ಗೂಡಿಸಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ’ ಎಂದರು.

‘ರಾಜ್ಯದ ಒಂದು ಕ್ಷೇತ್ರದಲ್ಲಾದರೂ ಸಮುದಾಯಕ್ಕೆ ಟಿಕೆಟ್‌ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಲಾಗಿತ್ತು. ಬಿಜೆಪಿ– ಜೆಡಿಎಸ್‌ ಮೈತ್ರಿ ಪಕ್ಷಗಳು ಕೋಲಾರದಲ್ಲಿ ಅವಕಾಶ ಮಾಡಿಕೊಟ್ಟಿವೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಟಿಕೆಟ್‌ ನೀಡದೇ ನಿರಾಸೆ ಮೂಡಿಸಿದೆ. ಕಾಂಗ್ರೆಸ್‌ ವರಿಷ್ಠರ ನಡೆಯಿಂದ ಸಮಾಜಕ್ಕೆ ಬೇಸರ ಮೂಡಿದೆ. ಭೋವಿ ಸಮಾಜದ ಅಸ್ತಿತ್ವಕ್ಕಾಗಿ ಪಕ್ಷದ ನಿರ್ಧಾರವನ್ನು ಪ್ರಶ್ನಿಸುತ್ತಿದ್ದೇವೆ’ ಎಂದರು.

ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆಗೆ ಇನ್ನೂ ಕಾಲಮಿಂಚಿಲ್ಲ. ವರಿಷ್ಠರು ಮನಸು ಮಾಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರಲಗುಂಟೆ ಎಂ.ರಾಮಪ್ಪ ತಿಳಿಸಿದರು.

ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ತಿಪ್ಪೇಸ್ವಾಮಿ, ಸಮುದಾಯದ ಮುಖಂಡರಾದ ಪ್ರಕಾಶ್, ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT