ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯಗಳೇ ಇಲ್ಲದ ಸೂರನಹಳ್ಳಿಗೆ ಬೇಕು ಕಾಯಕಲ್ಪ

ಗ್ರಾಮಾಂತರಂಗ
Last Updated 13 ಜೂನ್ 2013, 11:27 IST
ಅಕ್ಷರ ಗಾತ್ರ

ಸದಾ ಬರಗಾಲ ಪೀಡಿತ, ರಾಜ್ಯದಲ್ಲೇ ಅತಿ ಹೆಚ್ಚು ಕಡಿಮೆ ಮಳೆ ಬೀಳುವ ಪ್ರದೇಶ, ಹಿಂದುಳಿದ ತಾಲ್ಲೂಕು ಎಂಬ ಎನಿಸಿಕೊಂಡ ಚಳ್ಳಕೆರೆ ತಾಲ್ಲೂಕಿಗೆ ತನ್ನದೇ ಆದ ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ಕಾಡುಗೊಲ್ಲ ಹಾಗೂ ಮ್ಯಾಸಬೇಡರ ವಿಶಿಷ್ಟ ಸಾಂಸ್ಕೃತಿಕ ಆಚರಣೆಗಳು ಇಲ್ಲಿ ಇಂದಿಗೂ ಅಸ್ತಿತ್ವದಲ್ಲಿವೆ. ಇಂತಹ ತಾಲ್ಲೂಕಿನಲ್ಲಿ ಒಂದೊಂದು ಹಳ್ಳಿಗಳಲ್ಲೂ ಕೂಡ ಪರಂಪರೆಯಿಂದಲೂ ಜನಪದರು ಕಟ್ಟಿಕೊಟ್ಟ ವಿಭಿನ್ನ ಸಂಸ್ಕೃತಿ, ವಿಶಿಷ್ಟ ಆಚರಣೆಗಳಿವೆ. ಇಂತಹ ಸಂಗತಿಗಳಿಗೆ ಹೊಸ ಬೆಳಕು ಚೆಲ್ಲುವ ಚಳ್ಳಕೆರೆಗೆ 22 ಕಿ.ಮೀ. ದೂರದಲ್ಲಿ ಇರುವ ಗ್ರಾಮವೇ ಸೂರನಹಳ್ಳಿ. 

ಗ್ರಾಮದ ಇತಿಹಾಸ: ಚಿತ್ರದುರ್ಗದ ಕೋಟೆಗೆ ಹೈದರಾಲಿ ದಾಳಿಯ ನಂತರ ಕೋಟೆಯಿಂದ ಪಲಾಯನ ಮಾಡಿದ ನಾಯಕರು ಅಲ್ಲಲ್ಲಿ ಬರುವ ಗ್ರಾಮಗಳಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಆರಂಭಿಸಿದರು. ಅಲ್ಲಿಯೇ ಚಿಕ್ಕ ಪುಟ್ಟ ಸಾಮ್ರಾಜ್ಯ ಸ್ಧಾಪನೆ ಮಾಡಿಕೊಂಡು ಆಳ್ವಿಕೆ ಮುಂದುವರಿಸಿದರು.

ಈ ಭಾಗದಲ್ಲಿ `ಚೂಲನಾಯಕ' ಎಂಬ ವ್ಯಕ್ತಿ ಆಳ್ವಿಕೆ ಮಾಡುತ್ತಿದ್ದ ಎಂಬ ಬಗ್ಗೆ ಇಲ್ಲಿನ ಹಿರಿಯ ತಲೆಮಾರಿನ ಯಜಮಾನರು ಕೆಲವು ದೃಷ್ಟಾಂತಗಳ ಮೂಲಕ ವಿವರಿಸುತ್ತಾರೆ. ದಕ್ಷ ಆಡಳಿತ ನೀಡಿದ ಚೂಲನಾಯಕ ವಿಜಯೋತ್ಸವ ಪ್ರತಿಬಿಂಬಿಸಲು ವೀರಗಲ್ಲು ಸ್ಥಾಪಿಸಿ ಅವುಗಳನ್ನು ಆರಾಧಿಸುತ್ತಿದ್ದ. ಈ ಮಾತಿಗೆ ಪುಷ್ಟೀಕರಿಸಲು ವಿರೂಪಾಕ್ಷಪ್ಪ ಎಂಬುವವರ ಜಮೀನಿನಲ್ಲಿ ವೀರಗಲ್ಲುಗಳು ಇರುವ ಕುರುಹು ಕಾಣಬಹುದಾಗಿದೆ ಎನ್ನುತ್ತಾರೆ ಬಿ.ವಿ.ಮಹೇಶ್ವರಯ್ಯ. 

ಚೂಲನಾಯಕನ ಕಾಲಾನಂತರದಲ್ಲಿ `ಚೂಲನಹಳ್ಳಿ' ಎಂಬುದಾಗಿ ಕರೆಯಲಾಗುತ್ತಿದ್ದ ಈ ಗ್ರಾಮವನ್ನು ಕಾಲಕ್ರಮೇಣ ಜನಪದರು `ಸೂರನಹಳ್ಳಿ' ಎಂಬ ಹೆಸರಿನಿಂದ ಕರೆಯತೊಡಗಿದರು ಎಂಬ ಪ್ರತೀತಿ ಇದೆ. ಇದಕ್ಕೆ  ದಾಖಲೆಗಳು ಇಲ್ಲವಾದರೂ, ಸೂರನಹಳ್ಳಿ ಮತ್ತು ಆಸುಪಾಸಿನ ಗ್ರಾಮಗಳಲ್ಲಿ ಕಂಡುಬರುವ ಚಿತ್ರಗಳ ಕೆತ್ತನೆ ಹಾಗೂ ಬರಹಗಳು ಇರುವ ವೀರಗಲ್ಲು ಹೋಲುವ ಪ್ರಾಚೀನ ಕಲ್ಲುಗಳು ಇಂದಿಗೂ ಕಾಣಸಿಗುತ್ತವೆ ಎನ್ನುತ್ತಾರೆ ಗ್ರಾಮದ ಹಿರಿಯರು. ಇತಿಹಾಸಕಾರರು ಹಾಗೂ ಸಂಶೋಧಕರು ಈ ಕುರಿತು ಹೆಚ್ಚಿನ ಅಧ್ಯಯನ ನಡೆಸಿದಲ್ಲಿ ಮತ್ತಷ್ಟು ಕುರುಹು ಸಿಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಆರಾಧ್ಯ ದೈವಗಳು: ಗ್ರಾಮದಲ್ಲಿ ಯಲ್ಲಮ್ಮ, ವೆಂಕಟೇಶ್ವರ, ಈಶ್ವರ, ಆಂಜನೇಯ, ಮಾರಮ್ಮ ದೇವರು ಆಯಾ ಸಮುದಾಯಗಳ ಆರಾಧ್ಯ ದೈವಗಳಾಗಿ ಜನಮನ್ನಣೆ ಪಡೆದಿದ್ದಾರೆ. ಪ್ರತೀ ವರ್ಷ ಮಾರಮ್ಮ ಜಾತ್ರೆ ಹಾಗೂ ಡಿಸೆಂಬರ್‌ನಲ್ಲಿ ಆಂಜನೇಯ ಸ್ವಾಮಿಯ ಕಾರ್ತೀಕೋತ್ಸವವನ್ನು ಎಲ್ಲಾ ಸಮುದಾಯದ ಜನರು ಸೇರಿ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ.

93 ವರ್ಷದ ಶಾಲೆ: 1920ರಲ್ಲಿ ಆರಂಭಗೊಂಡಿರುವ ಇಲ್ಲಿನ ಪ್ರಾಥಮಿಕ ಶಾಲೆಗೆ ಇದೀಗ 93 ವರ್ಷದ ಹರೆಯ. ಆದರೂಈ ಶಾಲೆಗೆ ಸುಸಜ್ಜಿತ ಕಟ್ಟಡ ಇಲ್ಲದಂತಾಗಿದೆ. ಮಾಜಿ ಸಚಿವ ದಿ.ಬಿ.ಎಲ್. ಗೌಡ ವಿದ್ಯಾಭ್ಯಾಸ ಮಾಡಿದ ಶಾಲೆ ಇದು. ಈ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಬೇಕು. ಆ ಮೂಲಕ ಇಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಗಣಿಗಾರಿಕೆಗೆ ನಲುಗಿದ ಗ್ರಾಮ:  ವೇದಾವತಿ ನದಿ ಕೂಗಳತೆ ದೂರದಲ್ಲಿ ಹರಿಯುತ್ತಿದ್ದರೂ ಕುಡಿಯುವ ನೀರಿಗೆ ಇಲ್ಲಿನ ಜನತೆ ಪರದಾಡುವ ಸ್ಥಿತಿ ಗ್ರಾಮದಲ್ಲಿದೆ. ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಈ ಭಾಗದ ವೇದಾವತಿ ನದಿ ನಲುಗಿ ಹೋಗಿದೆ. ಆದ್ದರಿಂದಲೇ, ಆಸುಪಾಸಿನ ರೈತರ ನೀರಾವರಿ ಜಮೀನುಗಳಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿರುವ ಉದಾಹರಣೆಗಳೂ ಕಂಡುಬಂದಿವೆ. ಎರಡು ವರ್ಷಗಳ ಹಿಂದೆ ಇಲ್ಲಿನ ಮರಳು ಗಣಿಗಾರಿಕೆ ಬೆಂಗಳೂರಿನವರೆಗೂ ತನ್ನ ಸಂಪರ್ಕ ಸಾಧಿಸಿತ್ತು. ಹಗಲು ರಾತ್ರಿ ಎನ್ನದೇ ಮರಳು ಗಣಿಗಾರಿಕೆ ಅವ್ಯಾಹತವಾಗಿ ಮುಂದುವರಿದಿತ್ತು. ಒಂದು ವರ್ಷದಿಂದ ಕಂದಾಯ, ಪೊಲೀಸ್, ಗಣಿ ಇಲಾಖೆ ಅಧಿಕಾರಿಗಳ ನಿರಂತರ ದಾಳಿ ಹಾಗೂ ಗ್ರಾಮಸ್ಥರ ಒಗ್ಗಟ್ಟಿನಿಂದ  ಮರಳುಗಾರಿಕೆ ಇಲ್ಲಿ ಸದ್ಯ ಸ್ಥಗಿತಗೊಂಡಿದೆ.  

ವ್ಯವಸಾಯ ಹಾಗೂ ಕೂಲಿಯನ್ನೇ ನಂಬಿಕೊಂಡು ಜೀವನ ಸಾಗಿಸುವ ಇಲ್ಲಿನ ಜನತೆಗೆ ಸರ್ಕಾರದಿಂದ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ. ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎ.ನಾರಾಯಣಸ್ವಾಮಿ ಅವರು ಇಲಾಖೆಯಿಂದ ್ಙ  80 ಲಕ್ಷ ಅನುದಾನ ಬಿಡುಗಡೆಗೊಳಿಸಿ ಪರಿಶಿಷ್ಟರ ಕಾಲೊನಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ, ಶೌಚಾಲಯ ಹಾಗೂ ಸಮುದಾಯ ಭವನ ನಿರ್ಮಾಣ ಮಾಡಿಸಿದ್ದರು. ಆದರೆ, ನಿರ್ಮಾಣ ಮಾಡಿರುವ ಚರಂಡಿಯ ಸ್ವಚ್ಛತೆ ಮಾಡುತ್ತಿಲ್ಲ. ಜಾನುವಾರು ಕುಡಿಯುವ ನೀರಿನ ತೊಟ್ಟಿಯಲ್ಲಿಯೂ ಕಸ ತುಂಬಿದೆ. ಸ್ವಚ್ಛತೆ ಇಲ್ಲದೇ ಈಚೆಗೆ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣ ಬೆಳಕಿಗೆ ಬಂದಿತ್ತು. ಗ್ರಾಮ ಪಂಚಾಯ್ತಿ ಇಲ್ಲಿನ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂಬುದು ಯುವ ಮುಖಂಡ ಶ್ರೀನಿವಾಸ್ ಅಭಿಪ್ರಾಯ. 

ಗ್ರಾಮದಲ್ಲಿ ಮೃತಪಟ್ಟವರಿಗೆ ಸಂಪ್ರದಾಯದ ಪ್ರಕಾರ ಹೂಳಲು ಜಾಗದ ಕೊರತೆ ಇದೆ. ಕಂದಾಯ ಇಲಾಖೆ 3 ಎಕರೆ ಭೂಮಿ ಮೀಸಲಿರಿಸಲಾಗಿದೆ ಎಂದು ಹೇಳುತ್ತಿದೆ. ಆದರೆ, ಇದುವರೆಗೂ ಸ್ಮಶಾನ ಜಮೀನು ಗುರುತಿಸುವ ಕೆಲಸ ಮಾಡಿಲ್ಲ. ಸತ್ತವರನ್ನು ವೇದಾವತಿ ನದಿಯ ದಡದಲ್ಲಿ ಮಣ್ಣು ಮಾಡಲಾಗುತ್ತಿದೆ. ಅದ್ದರಿಂದ, ಸಂಬಂಧಿಸಿದವರು ಸ್ಮಶಾನಕ್ಕೆ ಜಾಗ ಗುರುತಿಸಬೇಕು ಎನ್ನುತ್ತಾರೆ ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಂ. ಶಿವಕುಮಾರಸ್ವಾಮಿ.

ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸುತ್ತಾರೆ ಗ್ರಾಮದ ಹಿರಿಯ ಬಿ.ವಿ. ಮಹೇಶ್ವರಯ್ಯ.
ಇಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶುವೈದ್ಯ ಆಸ್ಪತ್ರೆ, `ಸಿ' ಆಂಗನವಾಡಿ ಕೇಂದ್ರಕ್ಕೆ ಕಟ್ಟಡ, ಪ್ರೌಢಶಾಲೆ, ಹಾಸ್ಟೆಲ್ ಸೌಲಭ್ಯ, ರಂಗಮಂದಿರ, ಸರ್ಕಾರಿ ಶಾಲೆಗೆ ಮೇಲ್ಛಾವಣಿ ನಿರ್ಮಾಣ, ಬಸ್ ಸೌಲಭ್ಯ, ವೃದ್ಧರು ಹಾಗೂ ನಿರುದ್ಯೋಗಿ ಯುವಕರಿಗೆ ಅನುಕೂಲ ಆಗುವಂತೆ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಬೇಕು. ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ಜನತೆಯ ಒತ್ತಾಯ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT