ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಚಿಕುನ್ಗುನ್ಯ: ವೈದ್ಯರ ಕೊರತೆ

ಮಾದಯ್ಯನಹಟ್ಟಿ, ಜಾಗನೂರಹಟ್ಟಿ, ಚನ್ನಬಸಯ್ಯನಹಟ್ಟಿ ಗ್ರಾಮಗಳಲ್ಲಿ ಜ್ವರ
Last Updated 16 ನವೆಂಬರ್ 2015, 9:06 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಸಮೀಪದ ಮಾದಯ್ಯನಹಟ್ಟಿ, ಜಾಗನೂರಹಟ್ಟಿ, ಚನ್ನಬಸಯ್ಯನಹಟ್ಟಿ ಗ್ರಾಮ ಸೇರಿದಂತೆ ಸುಮಾರು 20 ರಿಂದ 25 ದಿನಗಳಿಂದ  ಪ್ರತಿ ಮನೆಯಲ್ಲೂ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ನಿರಂತರವಾಗಿ ಜ್ವರದ ಬಾಧೆಯಿಂದ ನರಳುತ್ತಿರುವ ಘಟನೆ ಕಂಡು ಬಂದಿದೆ.

ನಾಯಕನಹಟ್ಟಿಗೆ ಸುಮಾರು 3 ಕಿ.ಮೀ ದೂರದಲ್ಲಿರುವ ಗ್ರಾಮ ಮಾದಯ್ಯನಹಟ್ಟಿ  ಗ್ರಾಮದಲ್ಲಿ ಸುಮಾರು 80 ಮನೆಗಳಿದ್ದು, ಸುಮಾರು 35 ಮನೆಗಳಲ್ಲಿ ಕಳೆದ 25 ದಿನಗಳಿಂದ ನಿರಂತರವಾಗಿ ಜ್ವರದ ಬಾಧೆಯಿಂದ ಗ್ರಾಮಸ್ಥರು ನಲುಗಿದ್ದಾರೆ. ನಿತ್ಯ ಸಮೀಪದ ನಾಯಕನಹಟ್ಟಿಗೆ ಬಂದು ಆಸ್ಪತ್ರೆಗೆ ತೋರಿಸಿದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ. ಮೈಕೈ ನೋವು, ತಲೆನೋವು, ಕೀಲುನೋವು ಸೇರಿದಂತೆ ದೇಹವೆಲ್ಲಾ ಆಯಾಸದಿಂದ ಕೂಡಿರುತ್ತದೆ. ಯಾವ ಔಷಧಿ ಬಳಸಿದರೂ, ಜ್ವರದ ಪ್ರಮಾಣ ಕಡಿಮೆಯಾಗುತ್ತಿಲ್ಲ ಎಂದು ಮಾದಯ್ಯನಹಟ್ಟಿ ಗ್ರಾಮದ ಜ್ವರ ಪೀಡಿತ ಯಜಮಾನ್ ಓಬಯ್ಯ ಹೇಳುತ್ತಾರೆ.

ನಾಯಕನಹಟ್ಟಿ ಸರ್ಕಾರಿ ಆಸ್ಪತ್ರೆಗೆ ತೋರಿಸಲು ಹೋದರೆ ಸರಿಯಾದ ಸಮಯಕ್ಕೆ ವೈದ್ಯರಿರುವುದಿಲ್ಲ. ಅವರು ಬರುವುದು ಬೆಳಿಗ್ಗೆ10ಗಂಟೆಗೆ. ರಾತ್ರಿ ಯಾವ ವೈದ್ಯರು ಸಿಗುವುದಿಲ್ಲ. ಆಸ್ಪತ್ರೆಯಲ್ಲಿ ಚಿಕುನ್‌ಗುನ್ಯ ಜ್ವರಕ್ಕೆ ಸಂಬಂಧಿಸಿದ ಯಾವ ಔಷಧಗಳು ದಾಸ್ತಾನು ಇಲ್ಲ. ಖಾಸಗಿ ಔಷಧಾಲಯ ಗಳಿಂದ ಔಷಧಿಗಳನ್ನು ತರಿಸುತ್ತಾರೆ. ವೈದ್ಯರಿಲ್ಲದೆ ಪರದಾಡಿ ಖಾಸಗಿ ಕ್ಲಿನಿಕ್‌ಗಳಿಗೆ ಹೋದರೆ ನಮಗೆ ಹಣದ ಕೊರತೆಯಿದೆ ಎಂದು ಗ್ರಾಮದ ಸುಮಾರು 50ವರ್ಷದ ಜ್ವರ ಪೀಡಿತೆ ಪಾಲಮ್ಮ ತಮ್ಮ ಅಳಲು ತೋಡಿಕೊಂದರು.

ವೈದ್ಯರ ಕೊರತೆ: ನಾಯಕನಹಟ್ಟಿ ಹೋಬಳಿಯು ದೊಡ್ಡ ಹೋಬಳಿಯಾಗಿದ್ದು, ಸುಮಾರು 25ರಿಂದ 30ಹಳ್ಳಿಗಳನ್ನು ಹೊಂದಿದೆ. ಈ ಎಲ್ಲಾ ಹಳ್ಳಿಗಳಿಗೂ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರ ಪ್ರಮುಖವಾಗಿದ್ದು, ಯಾವಾಗಲೂ ರೋಗಿಗಳಿಂದ ತುಂಬಿರುತ್ತದೆ. ಆದರೆ, ಇಲ್ಲಿರುವುದು ಕೇವಲ  ಒಬ್ಬರೇ ವೈದ್ಯರು. ರಾತ್ರಿ ಪಾಳಿಯಲ್ಲಿ ವೈದ್ಯರು ಇರುವುದಿಲ್ಲ. ಇದರಿಂದ  ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಗ್ರಾಮದ ಮುಖಂಡರಾದ ಬಸಣ್ಣ ಹೇಳುತ್ತಾರೆ.

ಯಾವ ಅಧಿಕಾರಿಗಳು ಭೇಟಿ ನೀಡಿಲ್ಲ: ನಾಯಕನಹಟ್ಟಿ ಸಮೀಪದ ಚನ್ನಬಸಯ್ಯನಹಟ್ಟಿ, ಜಾಗನೂರಹಟ್ಟಿ, ಮಾದಯ್ಯನಹಟ್ಟಿ, ಗ್ರಾಮಗಳಲ್ಲಿ ನಿರಂತರವಾಗಿ ಚಿಕುನ್‌ಗುನ್ಯ ರೋಗದಿಂದ ನೂರಾರು ಜನರು ನರಳುತ್ತಿದ್ದರೂ, ಇತ್ತ ಕಡೆ ಯಾವ ವೈದ್ಯರಾಗಲಿ, ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ. ಗ್ರಾಮಗಳಲ್ಲಿ ನೈರ್ಮಲ್ಯದ ಕೊರತೆಯಿಂದ ಸೊಳ್ಳೆಗಳು ಜಾಸ್ತಿಯಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದೆ.

ಈ ಗ್ರಾಮಗಳಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನಲ್ಲಿ  ಪ್ಲೋರೈಡ್ ಅಂಶ ಇರುವುದರಿಂದ ಗ್ರಾಮಸ್ಥರು ರೋಗ ಪೀಡಿತರಾಗುತ್ತಿದ್ದಾರೆ. ಆದ್ದರಿಂದ ಶೀಘ್ರವಾಗಿ ಸಂಬಂಧ ಪಟ್ಟ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿ, ಜ್ವರ ಪೀಡಿತರ ರಕ್ತದ ಮಾದರಿಯನ್ನು ಹಾಗೂ ಗ್ರಾಮದ ಕುಡಿಯುವ ನೀರಿನ ಮಾದರಿಯನ್ನು ಸಂಗ್ರಹಿಕೊಂಡು ಪರೀಕ್ಷೆಗೆ ಕಳುಹಿಸಬೇಕು ಎಂದು  ಪಾಲಮ್ಮ, ನಾಗರಾಜ, ಪಾಟೇಲ್ ಮಹಾಂತೇಶ, ಕಲ್ಪನಾ, ಕವನಾ, ಲಕ್ಷ್ಮಮ್ಮ, ಮಲ್ಲಮ್ಮ ಸೇರಿದಂತೆ ಹಲವರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT