ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತೀಕರಣದಿಂದ ಸಂಸ್ಕೃತಿ ನಾಶ: ಜನಪದ ಗಾಯಕ ಜೋಗಿಲ ಸಿದ್ದರಾಜು

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮುನಿಚೂಡಯ್ಯಗೆ ಅಭಿನಂದನೆ
Last Updated 10 ಜನವರಿ 2019, 13:58 IST
ಅಕ್ಷರ ಗಾತ್ರ

ಕನಕಪುರ: ಜಾಗತೀಕರಣದಿಂದ ಸಂಸ್ಕೃತಿ, ಸಂಸ್ಕಾರ ನಾಶವಾಗುತ್ತಿದೆ. ನಾಡಿನ ಜನರ ಧ್ವನಿಯಾಗಿ, ಭಾವವಾಗಿರುವ ಜನಪದ ಗಾಯನವನ್ನು ಹೊಸ ತಲೆಮಾರಿನ ಜನಕ್ಕೆ ಪರಿಚಯಿಸುವ ಕೆಲಸವಾಗಬೇಕಿದೆ ಎಂದು ಜನಪದ ಗಾಯಕ ಜೋಗಿಲ ಸಿದ್ದರಾಜು ಹೇಳಿದರು.

ಹಾಲಗೊಂಡನಹಳ್ಳಿ (ತಿಗಳರಹೊಸಳ್ಳಿ) ಸರ್ಕಾರಿ ಶಾಲೆ ಆವರಣದಲ್ಲಿ ಸುಗ್ಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮುನಿಚೂಡಯ್ಯ ಅವರನ್ನು ಅಭಿನಂದಿಸಿ ಮಾತನಾಡಿದರು.

ಪಠ್ಯಪುಸ್ತಕ ಹೊರತಾಗಿ ಮಕ್ಕಳು ಬೇರೆಯದನ್ನು ಕಲಿಯಬೇಕು. ಯಾರಿಗೆ ಕಲಿಯಬೇಕೆಂಬ ಆಸಕ್ತಿ ಇರುತ್ತದೋ ಅವರು ಮಾತ್ರ ಜೀವನದಲ್ಲಿ ಸಾಧನೆ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.

ಮುನಿಚೂಡಯ್ಯ ಅವರು ಅಕ್ಷರ ಜ್ಙಾನವೇ ಇಲ್ಲವಾದರೂ ಜನಪದ ವಿಶ್ವವಿದ್ಯಾಲಯವಾಗಿ ಪೂರ್ವಜರಿಂದ ಬಂದ ಕಲೆಗಳನ್ನು ಸಾವಿರಾರು ಮಂದಿಗೆ ಕಲಿಸಿದ್ದಾರೆ ಎಂದು ಶ್ಲಾಘಿಸಿದರು.

ಕಲಾವಿದರಾದವರಿಗೆ ಶಿಸ್ತು ಮತ್ತು ಸಂಯಮ ಮುಖ್ಯ. ರಾಜ್ಯ ಕಲೆಗಳ ಕಣಜವಾಗಿದೆ. ಬೇರೆ ಎಲ್ಲೂ ಇರದಷ್ಟು ಕಲಾ ಪ್ರಕಾರಗಳು, ಕಲಾವಿದರು ರಾಜ್ಯದಲ್ಲಿದ್ದಾರೆ ಎಂದು ತಿಳಿಸಿದರು.

ಧಮ್ಮ ದೀವಿಗೆ ಜಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಯಾವುದೇ ಅಧ್ಯಯನ ಕೇಂದ್ರಗಳ ನೆರವು ಇಲ್ಲದೆ ಜನಪದ ಕಲೆಗಳನ್ನು ಸಾವಿರಾರು ಮಂದಿಗೆ ಕಲಿಸಿರುವ ಅಜ್ಜ ಮುನಿಚೂಡಯ್ಯ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವರು, ಸಂಸದರು ಪಾಲ್ಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಆಕಾಶವಾಣಿ ಕಲಾವಿದ ಚಿಕ್ಕಮರೀಗೌಡ ಮಾತನಾಡಿ, ಜನಪದ ಗಾಯನ, ಜನಪದ ಕಲೆಗಳು ಜಾತಿ ಧರ್ಮ ಮೀರಿದ್ದು. ಯಾವುದೇ ಜಾತಿ ಧರ್ಮದ ಹಂಗಿಲ್ಲದೆ ಗ್ರಾಮೀಣ ಸೊಗಡಿನಿಂದ ಕೂಡಿದೆ ಎಂದರು.

ಜಾನಪದ ಅಕಾಡೆಮಿ ಸದಸ್ಯ ಹಾಗೂ ಸುಗ್ಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ಅಧ್ಯಕ್ಷ ಕಾಳಯ್ಯ, ಜನಪದ ಗಾಯಕ ಶಂಕರ್‌ ಭಾರತೀಪುರ, ಶಾಲೆಯ ಮುಖ್ಯ ಶಿಕ್ಷಕಿ ರೂಪಾದೇವಿ, ಚಿತ್ರಕಲಾ ಶಿಕ್ಷಕ ಡಾ.ಸುಭಾಸ್‌ ಕಮ್ಮಾರ, ಜನಪದ ಗಾಯಕರಾದ ಪೂಜಾ ಕುಣಿತ ಶಿವಮಾದಯ್ಯ, ಹನುಮಂತ ನಾಯ್ಕ್‌, ಕಲ್ಲಹಳ್ಳಿ ರಾಮಣ್ಣ, ಚಿಕ್ಕಚೂಡಯ್ಯ, ರವಿ, ಪ್ರೀತಮ್‌.ಟಿ.ಎಸ್‌, ಮಂಜುಳಾ ಬಾಯಿ, ಜಯಕುಮಾರ್‌, ಮುತ್ತುರಾಜು, ಶಿಕ್ಷಕ ಲಕ್ಕಪ್ಪ ಇದ್ದರು.

ಮೆರವಣಿಗೆ: ಮುನಿಚೂಡಯ್ಯ ಅವರನ್ನು ಅವರ ನಿವಾಸದಿಂದ ಶಾಲೆವರೆಗೂ ಪೂಜಾಕುಣಿತ, ಪಟಕುಣಿತ, ತಮಟೆ ನಗಾರಿ, ಡೊಳ್ಳುಕುಣಿತ, ಕಂಸಾಳೆ, ಮಂಗಳವಾದ್ಯ, ವೀರಗಾಸೆ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT