ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದ.ಕ. ಕ್ಷೇತ್ರಕ್ಕೆ ₹1 ಲಕ್ಷ ಕೋಟಿ ಕಾಮಗಾರಿ: ಸತೀಶ್ ಕುಂಪಲ

ಸಂಸದರ 15 ವರ್ಷಗಳ ಸಾಧನೆಯ ಕೈಪಿಡಿ ಬಿಡುಗಡೆಗೊಳಿಸಿದ ಬಿಜೆಪಿ ಪ್ರಮುಖರು
Published 1 ಮಾರ್ಚ್ 2024, 4:22 IST
Last Updated 1 ಮಾರ್ಚ್ 2024, 4:22 IST
ಅಕ್ಷರ ಗಾತ್ರ

ಮಂಗಳೂರು: ಮೂರು ಅವಧಿಗೆ ಸಂಸದರಾಗಿರುವ ನಳಿನ್‌ ಕುಮಾರ್‌ ಕಟೀಲ್‌, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ₹1 ಲಕ್ಷ ಕೋಟಿ ಅನುದಾನದ ವಿವಿಧ ಕಾಮಗಾರಿಗಳನ್ನು ತಂದಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.

2009ರಿಂದ 2023ರವರೆಗೆ ಸಂಸದರ ಮೂರು ಅವಧಿಯಲ್ಲಿ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನ, ಕ್ಷೇತ್ರಾಭಿವೃದ್ಧಿ ಕುರಿತ ಪಕ್ಷದ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಹಿಂದೆ ಯುಪಿಎ ಸರ್ಕಾರ ಇದ್ದಾಗ ಕ್ಷೇತ್ರಕ್ಕೆ ₹4,500 ಕೋಟಿ ಅನುದಾನ ಬಂದಿದ್ದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ₹1 ಲಕ್ಷ ಕೋಟಿ ಅನುದಾನ ಬಂದಿದ್ದು, ಕೈಬಿಡಿ ಮುದ್ರಣಗೊಂಡ ಮೇಲೆ ಮತ್ತಷ್ಟು ಯೋಜನೆಗಳು ಮಂಜೂರು ಆಗಿವೆ ಎಂದರು.

ರಾಷ್ಟ್ರೀಯ ಹೆದ್ದಾರಿಯ ಪ್ರಗತಿಯಲ್ಲಿರುವ ಕಾಮಗಾರಿಗಳು ಒಟ್ಟು ₹4,711 ಕೋಟಿ, ಬಿಒಟಿ ಆಧಾರದಲ್ಲಿ ಪೂರ್ಣಗೊಂಡ ಕಾಮಗಾರಿಗಳು ₹1,409 ಕೋಟಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳು ₹246 ಕೋಟಿ, ನವ ಮಂಗಳೂರು ಬಂದರಿನಲ್ಲಿ ಪೂರ್ಣಗೊಂಡ ಕಾಮಗಾರಿಗಳು ₹4,277 ಕೋಟಿ, ಪ್ರಗತಿಯಲ್ಲಿರುವ ಕಾಮಗಾರಿಗಳು ₹800 ಕೋಟಿ, ಸಾಗರಮಾಲಾ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳು ₹290 ಕೋಟಿ, ಮಂಜೂರು ಆಗಿರುವ ಕಾಮಗಾರಿಗಳು ₹175 ಕೋಟಿ ಆಗಿವೆ ಎಂದರು.

ರೈಲ್ವೆ ನಿಲ್ದಾಣ ಕಾಮಗಾರಿ, ವಿವಿಧ ರೈಲ್ವೆ ಹಳಿಗಳ ವಿದ್ಯುದೀಕರಣ, ರೈಲ್ವೆ ಕೆಳ ಸೇತುವೆ ನಿರ್ಮಾಣ ಸೇರಿ ಒಟ್ಟು ₹1,455 ಕೋಟಿ, ಮಂಗಳೂರು ರಿಫೈನರಿ ಪೆಟ್ರೊ ಕೆಮಿಕಲ್ಸ್ ಲಿಮಿಟೆಡ್‌ನ (ಎಂಆರ್‌ಪಿಎಲ್) ವಿವಿಧ ಕಾಮಗಾರಿಗಳಿಗೆ ಒಟ್ಟು ₹18,024 ಕೋಟಿ ಅನುದಾನ ದೊರೆತಿದೆ ಎಂದು ತಿಳಿಸಿದರು.

ಅಮೃತ್ ಯೋಜನೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ, ದೀನ್‌ದಯಾಳ್ ವಿದ್ಯುದೀಕರಣ ಯೋಜನೆ, ಜಲ್‌ಜೀವನ್ ಮಿಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಗೇಲ್‌ ಗ್ಯಾಸ್ ವಿತರಣೆ, ಪ್ಲಾಸ್ಟಿಕ್ ಪಾರ್ಕ್ ಯೋಜನೆಗಳು ಜಾರಿಯಲ್ಲಿವೆ. ದೇಶದ ಪ್ರಥಮ ಇಂಡಿಯನ್ ಕೋಸ್ಟ್‌ ಗಾರ್ಡ್ ಅಕಾಡೆಮಿಯು ಮಂಗಳೂರಿನ ಕೆಂಜಾರಿನಲ್ಲಿ ಸುಮಾರು 160 ಎಕರೆಯಲ್ಲಿ ₹1,200 ಕೋಟಿ ವೆಚ್ಚದಲ್ಲಿ ಸ್ಥಾಪನೆಯಾಗಲಿದ್ದು, ಕಾಮಗಾರಿಗಳು ಪ್ರಾರಂಭವಾಗಿವೆ ಎಂದು ಹೇಳಿದರು.

ಸಂಸದ ನಳಿನ್‌ಕುಮಾರ್ ಕಟೀಲ್, ಪಕ್ಷದ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಸುದರ್ಶನ್ ಎಂ, ಕಿಶೋರ್ ಪುತ್ತೂರು, ಯತೀಶ್, ಸೋಂದಾ ಭಾಸ್ಕರ್ ಭಟ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT