ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಮಾಡುವ ಹುರುಪೇ ಆರೋಗ್ಯ: ಡಾ. ಬಿ.ಎಂ. ಹೆಗ್ಡೆ

ನಿವೃತ್ತಿಯ ನಂತರದ ಜೀವನ’ ವಿಚಾರ ಸಂಕಿರಣ ಉದ್ಘಾಟನೆ
Last Updated 24 ಜನವರಿ 2019, 15:03 IST
ಅಕ್ಷರ ಗಾತ್ರ

ಮಂಗಳೂರು: ‘ಆರೋಗ್ಯವೆಂದರೆ ಕಾಯಿಲೆ ಇಲ್ಲದಿರುವುದಲ್ಲ, ಮನುಷ್ಯನಲ್ಲಿರುವ ಕೆಲಸ ಮಾಡುವ ಹುರುಪು ನಿಜವಾದ ಆರೋಗ್ಯ’ ಎಂದು ಮಣಿಪಾಲ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಬಿ.ಎಂ. ಹೆಗ್ಡೆ ಅಭಿಪ್ರಾಯಪಟ್ಟರು.

ನವಚೇತನ ಸಂಸ್ಥೆಯ ವತಿಯಿಂದ ಗುರುವಾರ ನಗರದ ಓಷನ್‌ ಪರ್ಲ್‌ನಲ್ಲಿ ನಡೆದ ‘ನಿವೃತ್ತಿಯ ನಂತರ ಜೀವನ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ಯಾವುದೇ ರೋಗವಿಲ್ಲದೆ ಆಸ್ಪತ್ರೆಗೆ ಹೋಗದಿರುವುದೇ ಆರೋಗ್ಯವಂತ ಜೀವನ ಎಂದು ತಿಳಿದುಕೊಂಡಿದ್ದಾರೆ. ಆದರೆ ಆರೋಗ್ಯವಂತನಾಗಿದ್ದು, ಅವನಲ್ಲಿ ಕೆಲಸ ಮಾಡುವ ಹುರು‍ಪಿಲ್ಲದೆ ಆಲಸ್ಯನಾಗಿದ್ದರೆ ಅದಕ್ಕಿಂತ ದೊಡ್ಡ ರೋಗ ಬೇರೊಂದಿಲ್ಲ. ಕಾಯಿಲೆ ಇದ್ದರೂ ದಿನವಿಡೀ ಉತ್ಸಾಹದಿಂದ ದಿನವಿಡೀ ದುಡಿದು ಆರೋಗ್ಯವಂತರಾಗಿರುತ್ತಾರೆ. ನಮ್ಮ ದೇಹವೇ ಮನಸ್ಸು. ಆ ಮನಸ್ಸಿನಲ್ಲಿ ಆರೋಗ್ಯ ಇರಬೇಕು. ಆಗ ನಿವೃತ್ತಿಯೂ ನಮ್ಮನ್ನು ಇನ್ನಷ್ಟು ಸಂತೋಷವಾಗಿಡುತ್ತದೆ’ ಎಂದರು.

‘ನಮ್ಮ ಹುದ್ದೆಗೆ ನಿವೃತ್ತಿಯಾದರೂ ನಮ್ಮ ಕೆಲಸಕ್ಕೆ ನಿವೃತ್ತಿಯನ್ನು ನೀಡಬಾರದು. ಕೆಲಸ ಸ್ಥಗಿತಗೊಂಡಾಗ ಮನಸ್ಸು ತುಕ್ಕು ಹಿಡಿದು ಅಶಾಂತಿಯಿಂದ ಚಡಪಡಿಸುತ್ತದೆ. ನಿರಂತರ ಕೆಲಸವೇ ನಮ್ಮ ಆರೋಗ್ಯದ ಗುಟ್ಟು. ನಾನು ನಿವೃತ್ತಿಯಾದ ಬಳಿಕ ಮೊದಲಿಗಿಂತಲೂ ಅಧಿಕ ಕೆಲಸ ಮಾಡುತ್ತಿದ್ದೇನೆ. ನನ್ನ ವೆಬ್‌ಸೈಟ್‌ ಪುಟದಲ್ಲಿ ದಿನಕ್ಕೆ 50,000 ಹಿಟ್‌ಗಳಿರುತ್ತವೆ. ನಾನು ಹೇಳುವ ಮಾತುಗಳನ್ನು ಕೇಳುವವರಿದ್ದಾರೆ, ಅನುಸರಿಸುವವರಿದ್ದಾರೆ ಎನ್ನುವುದೇ ನನ್ನ ನಿವೃತ್ತಿ ಜೀವನಕ್ಕೆ ಹುರುಪು’ ಎಂದು ಹೇಳಿದರು.

ಸೀನಿಯರ್‌ ಲಿವಿಂಗ್‌ ಆಶಿಯಾನ ಡೆಲ್ಲಿಯ ಡಿಜಿಎಂ ಡಾ. ಮುರಳೀಧರ ಅವರು ಮಾತನಾಡಿ, ‘ಜೀವನದ ಪ್ರತಿಯೊಂದು ಹಂತದಲ್ಲೂ ನಮ್ಮ ಪಾತ್ರಗಳನ್ನು ಬದಲಾಯಿಸಿಕೊಳ್ಳುವ ಅನಿವಾರ್ಯವಿದೆ. ಆದರೆ ಆ ಅನಿವಾರ್ಯತೆಗೆ ತೆರೆದುಕೊಳ್ಳದವರು ತಮ್ಮ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ವಯಸ್ಸಾಯ್ತು ತಾನು ಯಾವುದಕ್ಕೂ ಪ್ರಯೋಜನವಿಲ್ಲ ಎಂಬ ಧೋರಣೆಯನ್ನೇ ಗಟ್ಟಿಯಾಗಿ ನಂಬಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ನಮ್ಮ ಜೀವನವೊಂದು ಕ್ಯಾಂಡಲ್‌ನಂತೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕ್ಯಾಂಡಲ್‌ ಕರಗಿದಂತೆ ತುದಿಯಿಂದ ಅಂತ್ಯದವರೆಗೂ ಹೇಗೆ ಒಂದೇ ತೆರನಾದ ಬೆಳಕನ್ನು ನೀಡುತ್ತದೆಯೋ ಅದೇ ರೀತಿ ನಾವು ಜೀವನದುದ್ದಕ್ಕೂ ಏಕರೀತಿಯ ಶಕ್ತಿಯನ್ನು ಹೊಂದಿರುತ್ತೇವೆ’ ಎಂದರು.

ವಯಸ್ಸಾದಂತೆ ಸಮಸ್ಯೆ ಹೆಚ್ಚಾಗುತ್ತದೆ. ಆಗ ಭಿನ್ನಾಭಿಪ್ರಾಯ ಬರುವ ಸಂದರ್ಭಗಳೂ ಹೆಚ್ಚುತ್ತವೆ. ಈ ಸಮಸ್ಯೆಯಿಂದ ದೂರವಿರಲು ನಿವೃತ್ತಿಯ ನಂತರವೂ ನಮ್ಮನ್ನು ನಾವು ಇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಸಾಮಾಜಿಕವಾಗಿ ತೆರೆದುಕೊಳ್ಳುವುದು. ಬಾಲ್ಯದಲ್ಲಿ ಕಲಿಯಬೇಕೆಂದಿದ್ದ ಚಿತ್ರಕಲೆ, ಸಂಗೀತ, ನೃತ್ಯ ಇತ್ಯಾದಿಗಳನ್ನು ಕಲಿಯಲು ಪ್ರಾರಂಭಿಸಬಹುದು. ಅಥವಾ ಅರ್ಧದಲ್ಲೇ ನಿಲ್ಲಿಸಿದ್ದ ಹವ್ಯಾಸವನ್ನು ಮತ್ತೆ ಪ್ರಾರಂಭಿಸಬಹುದು. ಆದಷ್ಟು ಸಮಸ್ಯೆಗಳಿಂದ ದೂರವಿರುವುದನ್ನು ರೂಢಿಸಿಕೊಂಡು, ಬದಲಾದ ಜೀವನದ ಪಾತ್ರಗಳಿಗೆ ನಮ್ಮನ್ನು ನಾವು ಮುಕ್ತ ಮನಸ್ಸಿನಿಂದ ತೆರೆದುಕೊಂಡಾಗ, ಮಾನಸಿಕ ಖಿನ್ನತೆಗೆ ಅವಕಾಶ ಇರುವುದಿಲ್ಲ’ ಎಂದು ಮಾರ್ಗದರ್ಶನ ನೀಡಿದರು.

‘ಹಿರಿಯರ ಸ್ವಾಭಿಮಾನದ ಬದುಕು’ ಕುರಿತು ಚರ್ಚಾ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ದೈಗೋಳಿ ಶ್ರೀ ಸಾಯಿ ಸೇವಾ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ. ಉದಯ ಕುಮಾರ್‌, ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್‌, ಹೊಸದಿಗಂತ ಪತ್ರಿಕೆಯ ಸ್ಥಾನಿಕ ಸಂಪಾದಕ ಪ್ರಕಾಶ್‌ ಇಳಂತಿಲ, ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಡಾ. ವಸಂತ ಕುಮಾರ ಪೆರ್ಲ ಭಾಗವಹಿಸಿದ್ದರು. ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ.ಶ್ರೀಧರ್ ಭಟ್‌ ಸಮನ್ವಯಕಾರರಾಗಿದ್ದರು.

ಕಾರ್ಯಕ್ರಮದಲ್ಲಿ ಎ.ಜೆ. ವೈದ್ಯಕೀಯ ವಿಜ್ಞಾನ ಕೇಂದ್ರದ ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಧೀರ್‌ ಹೆಗ್ಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ನಿರ್ದೇಶಕ ಕೆ.ವಿ. ಭಟ್‌, ಸಂಸ್ಥೆಯ ಅಧ್ಯಕ್ಷ ಡಾ. ಶಾಮ ಭಟ್‌, ನಿರ್ದೇಶಕರಾದ ಸುಶೀಲಾ ಭಟ್‌, ಪವನ್‌ ಕುಮಾರ್‌ ಉಪಸ್ಥಿತರಿದ್ದರು.

ಸೂರ್ಯಾಸ್ತವನ್ನೂ ಸಂಭ್ರಮಿಸೋಣ’

‘ನಮ್ಮ ಹಿತ್ತಲಿನ ಗಿಡದಲ್ಲೇ ಆರೋಗ್ಯವಿದೆ. ಆದರೆ ನಾವು ವಿನಾಕಾರಣ ಮಾತ್ರೆಗಳನ್ನು ನುಂಗುತ್ತಿದ್ದೇವೆ. 10 ವರ್ಷಗಳ ಹಿಂದೆ ಥೈರಾಯ್ಡ್‌ ಎಂಬ ಕಾಯಿಲೆ ಇರಲಿಲ್ಲ. ಆದರೆ ಇತ್ತೀಚೆಗೆ ಅವುಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಕೃತಕ ಸೌಂದರ್ಯದಿಂದ ನಮ್ಮ ಶಕ್ತಿಯನ್ನು ಪ್ರದರ್ಶಿಸುವುದು ಬೇಡ. ಆ ಕೃತಕ ಸೌಂದರ್ಯ ಪದಾರ್ಥಗಳು ಆರೋಗ್ಯಕ್ಕೆ ಹಾನಿ ಎಂದು ಹಿರಿಯರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಕಾಡುವ ಹಾಗೂ ಹಣ ಬೇಡುವ ಕಾಯಿಲೆ ಗಳಿಂದ ದೂರವಿರಬೇಕಾದರೆ ಆಯುರ್ವೇದ, ವ್ಯಾಯಾಮ, ಯೋಗವೇ ಪರಿಹಾರ. ಯಾವುದೇ ಭಯವಿಲ್ಲದೆ, ಸೂರ್ಯ ಅಸ್ತಮಿಸುವ ಕಾಲವನ್ನೂ ಆನಂದಿಸೋಣ, ಆಗಲೇ ಭೂಮಿಯು ಹೆಚ್ಚು ಸೌಂದರ್ಯವಾಗಿ ಕಾಣುವುದು’ ಎಂದು ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್‌ ಪ್ರೋತ್ಸಾಹದ ಮಾತುಗಳನ್ನಾಡಿದರು.

‘ಪಾಶ್ಚಾತ್ಯರ ಕ್ರಮ ನಮಗೆ ಬೇಡ’

ದಿನಗಳು ಉರುಳಿದಂತೆ ನಾವು ಪಾಶ್ಚಾತ್ಯರಾಗುತ್ತಿದ್ದೇವೆ. ಆಶ್ರಮಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಲ್ಲಿ ವರ್ಷದಲ್ಲಿ ಎರಡು, ಮೂರು ಬಾರಿ ಮಕ್ಕಳು ಮನೆಗೆ ಬಂದು ಹೋಗುತ್ತಾರೆ. ಆದರೆ ನಾವು ಹಾಗಲ್ಲ. ಮಕ್ಕಳ ಜತೆಗೆ ತಂದೆ ತಾಯಿ, ತಂದೆ ತಾಯಿಗೆ ಆಸರೆಯಾಗಿ ಮಕ್ಕಳು ಜತೆಗಿರುತ್ತಾರೆ. ನೋವಿಗೆ, ನಲಿವಿಗೆ ಸ್ಪಂದಿಸುವ ಅವರೊಂದಿಗೆ ಸೇರಿ ಖುಷಿ ಪಡುವ ಭಾವನಾತ್ಮಕ ಬಂಧನಗಳಲ್ಲಿ ನಮ್ಮ ಸಂಬಂಧಗಳು ನಿಂತಿವೆ. ನನ್ನ ಮರಿ ಮೊಮ್ಮಗಳು ನನ್ನೊಂದಿಗೆ ಆಟವಾಡುತ್ತಾಳೆ, ಸತಾಯಿಸುತ್ತಾಳೆ. ಮುಪ್ಪಿನಲ್ಲಿ ಪುಟ್ಟ ಮಕ್ಕಳ ಆಟವನ್ನು ಸವಿಯುವುದೇ ಚಂದ’ ಎಂದು ಹೇಳುತ್ತಾ ಬಿ.ಎಂ. ಹೆಗ್ಡೆ ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT