ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈವಾರಾಧನೆ ಅಂಚೆ ಚೀಟಿ ಬಿಡುಗಡೆಗೂ ಕ್ರಮ: ಸಂಸದ ನಳಿನ್ ಭರವಸೆ

Published 26 ಫೆಬ್ರುವರಿ 2024, 4:16 IST
Last Updated 26 ಫೆಬ್ರುವರಿ 2024, 4:16 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯದ ಕರಾವಳಿಯ ಸಂಸ್ಕೃತಿಯ ದ್ಯೋತಕವಾದ ದೈವಾರಾಧನೆಯ ಅಂಚೆ ಚೀಟಿ ಬಿಡುಗಡೆಗೂ ಕ್ರಮವಹಿಸಲಾಗುವುದು’ ಎಂದು ಸಂಸದ ನಳಿನ್ ಕುಮಾರ್‌ ಕಟೀಲ್‌ ತಿಳಿಸಿದರು.

ಅಂಚೆ ಇಲಾಖೆಯು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸಹಯೋಗದಲ್ಲಿ ಹೊರತಂದಿರುವ ಯಕ್ಷಗಾನದ ಅಂಚೆಚೀಟಿ ಬಿಡುಗಡೆ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು. ‘ಉಳ್ಳಾಲದ ರಾಣಿ ಅಬ್ಬಕ್ಕ ಕುರಿತ ಅಂಚೆ ಚೀಟಿ ಈಚೆಗೆ ಬಿಡುಗಡೆಯಾಗಿತ್ತು. ಅದನ್ನು ಹೊರತುಪಡಿಸಿದರೆ ಕರಾವಳಿಯ ಸಂಸ್ಕೃತಿ ಹಾಗೂ ಜನಜೀವನ ಬಿಂಬಿಸುವ ಅಂಚೆ ಚೀಟಿಗಳು ವಿರಳ’ ಎಂದರು.

‘ಯಕ್ಷಗಾನದ ಅಂಚೆ ಚೀಟಿ ಬಿಡುಗಡೆಗೊಳಿಸುವಂತೆ 2019ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. ಇಂತಹ ಪ್ರಸ್ತಾವಗಳನ್ನು ಪರಿಶೀಲಿಸಿ ಮಂಜೂರಾತಿ ಅಂಚೆ ಚೀಟಿ ಸಲಹಾ ಸಮಿತಿ ವರ್ಷಕ್ಕೊಮ್ಮೆ ಸಭೆ ನಡೆಸುತ್ತದೆ. ಐದು ವರ್ಷಗಳ ಪ್ರಯತ್ನದ ಫಲವಾಗಿ ಅಂಚೆ ಚೀಟಿಯಲ್ಲಿ ಯಕ್ಷಗಾನವನ್ನು ಕಾಣುವಂತಾಗಿದೆ. ತೆಂಕು ಹಾಗೂ ಬಡಗು ತಿಟ್ಟುಗಳ ಚಿತ್ರಗಳನ್ನು ಇದರಲ್ಲಿವೆ’ ಎಂದರು.  

ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್‌.ರಾಜೇಂದ್ರ ಕುಮಾರ್, ‘ಪಂಡಿತ್ ರಮಾಬಾಯಿ, ಡಾ.ಟಿ.ಎಂ.ಎ.ಪೈ, ಶಿವರಾಮ ಕಾರಂತ, ಸೇಂಟ್‌ ಅಲೋಷಿಯಸ್‌ ಚಾಪೆಲ್‌, ಕವಿ ಮುದ್ದಣ ಹಾಗೂ ರಾಣಿ ಅಬ್ಬಕ್ಕ ಅವರ ಅಂಚೆ ಚೀಟಿಗಳು ಸೇರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದ 10 ಅಂಚೆ ಚೀಟಿಗಳು ಇದುವರೆಗೆ ಬಿಡುಗಡೆಯಾಗಿವೆ. ಅಂಚೆ ಚೀಟಿಯಲ್ಲಿ ಸ್ಥಾನ ಪಡೆಯಲು ಯೋಗ್ಯರಾದ ಅನೇಕ ಮಹಾನೀಯರು ಈ ಪ್ರದೇಶದಲ್ಲಿದ್ದಾರೆ. ಇಲ್ಲಿನ ಅನೇಕ ವಿಚಾರಗಳು ಅಂಚೆ ಚೀಟಿಯಲ್ಲಿ ಬಿಂಬಿತವಾಗುವ ಅರ್ಹತೆ ಪಡೆದಿವೆ’ ಎಂದರು.

ದಕ್ಷಿಣ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ ಡ್ಯಾಶ್, ‘ಮೊದಲ ದಿನದ ಲಕೋಟೆ ಹಾಗೂ ಬ್ರೋಷರ್‌ ಕೂಡಾ ಈ ಅಂಚೆ ಚೀಟಿಯ ಜೊತೆ ಬಿಡುಗಡೆಯಾಗುತ್ತಿದೆ’ ಎಂದರು. 

ವಿದ್ವಾಂಸ ಪ್ರಭಾಕರ ಜೋಶಿ, ‘ಯಕ್ಷಗಾನ ಕಲೆಯ ಕುರಿತ ಸರಣಿ ಅಂಚೆಚೀಟಿಗಳನ್ನು ಹೊರತರುವ ಅಗತ್ಯವಿದೆ. ದೊಡ್ಡ ಜನಸಮೂಹವನ್ನು ಆಕರ್ಷಿಸುವ ಪ್ರಯತ್ನದಲ್ಲಿ ಯಕ್ಷಗಾನ ಸಾಂಪ್ರದಾಯಿಕ ಸೊಗಡನ್ನು ಕಳೆದುಕೊಳ್ಳಬಾರದು. ಈ ಕಲೆಗೆ ಯುನೆಸ್ಕೊ ಮಾನ್ಯತೆ ದೊರಕಿಸುವತ್ತ ಜನಪ್ರತಿನಿಧಿಗಳು ಶ್ರಮವಹಿಸಬೇಕು’ ಎಂದರು. 

ಶಾಸಕ ವೇದವ್ಯಾಸ ಕಾಮತ್‌, ‘ಅಂಚೆಚೀಟಿಯಲ್ಲಿ ಸ್ಥಾಪ ಪಡೆಯುವ ಮೂಲಕ ಈ ಕಲೆಗೆ ಮತ್ತಷ್ಟು ಉತ್ತೇಜನ ಸಿಕ್ಕಿದೆ. ಈ ಕಲೆಯನ್ನು ಭಾರತದಾದ್ಯಂತ ಪ್ರಚುರಪಡಿಸಲು ಇದು ನೆರವಾಗುತ್ತದೆ’ ಎಂದರು. 

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಎಂಆರ್‌ಪಿಎಲ್‌ ಕಾರ್ಯನಿರ್ವಾಹಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ಪಾಲ್ಗೊಂಡಿದ್ದರು. 

ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ರಚಿಸಿದ ‘ಲೋಕಾಭಿರಾಮ’ ಯಕ್ಷಗಾನವನ್ನು ಪಟ್ಲ ಸತೀಶ ಶೆಟ್ಟಿ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT