ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆದಿ ದ್ರಾವಿಡರಿಗೆ ಮೂಲಸೌಕರ್ಯ ಈಗಲೂ ಮರೀಚಿಕೆ: ರಾಮ್‌ ಕುಮಾರ್‌ ಬೇಸರ

Published 21 ಏಪ್ರಿಲ್ 2024, 6:09 IST
Last Updated 21 ಏಪ್ರಿಲ್ 2024, 6:09 IST
ಅಕ್ಷರ ಗಾತ್ರ

ಮಂಗಳೂರು: ‘ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಆದಿ ದ್ರಾವಿಡ ಸಮುದಾಯದ ಹಲವಾರು ಬಡ ಕುಟುಂಬಗಳು ಈಗಲೂ ಮೂಲಸೌಕರ್ಯಗಳಿಂದ ವಂಚಿತವಾಗಿಯೇ ಉಳಿದಿವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವಕ್ತಾರ ರಾಮ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮೂಲತಃ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರಾದ ನಮ್ಮ ಸಮಾಜದವರು ಕೆಲಸದ ಸಲುವಾಗಿ ವಲಸೆ ಹೋಗಿ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಕಾಸರಗೋಡು ಜಿಲ್ಲೆಗಳಲ್ಲೂ ನೆಲೆಸಿದ್ದಾರೆ. ಅವರಲ್ಲಿ ಹಲವಾರು ಕುಟುಂಬಗಳಿಗೆ ಸುಸಜ್ಜಿತ ಮನೆ, ನಿವೇಶನ, ಶೌಚಾಲಯ, ವಿದ್ಯುತ್, ಕುಡಿಯುವ ನೀರು, ದಾರಿದೀಪ, ರಸ್ತೆ, ಹಕ್ಕುಪತ್ರ ಇತ್ಯಾದಿ ಸೌಕರ್ಯಗಳು ಇನ್ನೂ ದೊರಕಿಲ್ಲ’ ಎಂದರು.

‘ನಮ್ಮವರಿಗೆ ಸಂವಿಧಾನದ ಪ್ರಕಾರವಾಗಿ ಪರಿಶಿಷ್ಟ ಜಾತಿ- ಆದಿದ್ರಾವಿಡ ಉಪಜಾತಿ ಎಂದು ಉಲ್ಲೇಖಿಸಿದ ಪ್ರಮಾಣಪತ್ರ ಸಿಗಬೇಕು. ಆದರೆ ಸಿಗುತ್ತಿಲ್ಲ. ನಗರದ ಕುಂಜತ್ತಬೈಲಿನಲ್ಲಿ ಸರ್ಕಾರವು ಈಗಾಗಲೇ ಮಂಜೂರು ಮಾಡಿರುವ 20 ಸೆಂಟ್ಸ್ ಜಾಗದಲ್ಲಿ  ಸಮುದಾಯ ಭವನ ನಿರ್ಮಾಣಕ್ಕೆ  ಅನುದಾನ ಕೋರಿದ್ದೆವು. ಅದೂ ಮಂಜೂರಾಗಿಲ್ಲ. ನಮ್ಮ ಸಮಾಜದ ಚೈತನ್ಯ ಸಹಕಾರ ಸಂಘಕ್ಕೆ ಸಮಾಜ ಕಲ್ಯಾಣ ಇಲಾಖೆಯ ಆರ್ಥಿಕ ನೆರವು ಯೋಜನೆಯಡಿ ₹ 20 ಲಕ್ಷ ಮಂಜೂರು ಮಾಡುವಂತೆ ಕೋರಿದ್ದೆವು. ನಾಲ್ಕು ವರ್ಷಗಳ ಬಳಿಕವೂ ಹಣ ಮಂಜೂರಾಗಿಲ್ಲ’ ಎಂದು ದೂರಿದರು. 

ಸಮಾಜದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಲೋಕಸಭಾ ಚುನಾವಣೆಯ ಕಣದಲ್ಲಿರುವ ಅಭ್ಯರ್ಥಿಗಳು ಗಮನ ವಹಿಸಬೇಕು ಎಂದು ಅವರು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸಂಜೀವ ಕೋಟ್ಯಾನ್‌, ಗೌರವಾಧ್ಯಕ್ಷ ರಘುನಾಥ ಅತ್ತಾವರ, ಖಜಾಂಚಿ ಈಶ್ವರ್‌ ಹಾಗೂ ಚೈತನ್ಯ ಸಹಕಾರ ಸಂಘದ ಕೃಷ್ಣ ಸೂಟರ್‌ಪೇಟ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT