ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಆಳ್ವಾಸ್‌ ಪ್ರಗತಿ’ ಉದ್ಯೋಗ ಮೇಳ: 13,238 ಅಭ್ಯರ್ಥಿಗಳು, 258 ಕಂಪನಿಗಳು ಭಾಗಿ

Published 7 ಜೂನ್ 2024, 23:58 IST
Last Updated 7 ಜೂನ್ 2024, 23:58 IST
ಅಕ್ಷರ ಗಾತ್ರ

ಮೂಡುಬಿದಿರೆ (ದಕ್ಷಿಣ ಕನ್ನಡ): ಯುವಜನರಲ್ಲಿ ಉದ್ಯೋಗದ ನಿರೀಕ್ಷೆ, ಎಲ್ಲರ ಕಂಗಳಲ್ಲೂ ಭರವಸೆಯ ಬೆಳಕು. ಕಂಪನಿಗಳಿಂದ ನೇಮಕಾತಿ ಪತ್ರ ಪಡೆದು ಹೊರಗೆ ಬಂದವರ ಮುಖದಲ್ಲಿ ಮಂದಹಾಸ, ಬದುಕು ಕಟ್ಟಿಕೊಳ್ಳುವ ಕನಸು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇಲ್ಲಿನ ವಿದ್ಯಾಗಿರಿಯಲ್ಲಿ ಆಯೋಜಿಸಿರುವ ‘ಆಳ್ವಾಸ್‌ ಪ್ರಗತಿ’ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ರಾಜ್ಯ–ನೆರೆರಾಜ್ಯಗಳ ಅಸಂಖ್ಯ ಉದ್ಯೋಗಾರ್ಥಿಗಳ ಪೈಕಿ ಹಲವರು ಮೊದಲ ದಿನವೇ ಉದ್ಯೋಗ ಗಳಿಸಿದ ಖುಷಿಯೊಂದಿಗೆ ಮರಳಿದ್ದಾರೆ. 

ಶುಕ್ರವಾರ ಬೆಳಿಗ್ಗೆ ಮೇಳದ ಉದ್ಘಾಟನೆಗೆ ವೇದಿಕೆ ಸಜ್ಜಾಗುತ್ತಿದ್ದಂತೆ ಮಳೆ ಆರಂಭವಾಯಿತು. ಕೆಲವರು ಛತ್ರಿ ಹಿಡಿದು, ಹೆಚ್ಚಿನವರು ನೆನೆಯುತ್ತಲೇ ವಿದ್ಯಾಗಿರಿಯತ್ತ ಧಾವಿಸಿದರು. ಮೇಳಕ್ಕೆ 17,325 ಮಂದಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದು 1,573 ಮಂದಿ ಶುಕ್ರವಾರ ಸ್ಥಳದಲ್ಲೇ ನೋಂದಣಿ ಮಾಡಿಕೊಂಡಿದ್ದರು. 258 ಕಂಪನಿಗಳು ಪಾಲ್ಗೊಂಡಿವೆ. ಮೊದಲ ದಿನ ಒಟ್ಟಾರೆ 13,238 ಉದ್ಯೋಗಾರ್ಥಿಗಳು ಪಾಲ್ಗೊಂಡಿದ್ದರು.

ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದಿರುವ 1,633 ಮಂದಿಗೆ ಆಳ್ವಾಸ್ ಕ್ಯಾಂಪಸ್‌ನಲ್ಲಿ ಉಚಿತ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಅರಸಿ ಬಂದವರಿಗೆ ಊಟ, ತಿಂಡಿ, ಚಹಾ ಸೌಲಭ್ಯ ಕಲ್ಪಿಸಲಾಗಿದೆ. 

ಏಳು ಬಣ್ಣಗಳಲ್ಲಿ ವರ್ಗೀಕರಣ

ನೋಂದಣಿ ಮಾಡಿಸಿಕೊಂಡವರನ್ನು ಶೈಕ್ಷಣಿಕ ಅರ್ಹತೆ ಆಧರಿಸಿ ಏಳು ಬಣ್ಣಗಳಿಂದ ವರ್ಗೀಕರಿಸಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಆದವರನ್ನು ಕೆಂಪು ಬಣ್ಣದಿಂದ, ಐಟಿಐ ಮಾಡಿದವರನ್ನು ಕಿತ್ತಳೆ ಬಣ್ಣದಿಂದ, ಡಿಪ್ಲೊಮಾ ಆದವರನ್ನು ಗುಲಾಬಿ ಬಣ್ಣದಿಂದ, ಪದವಿ ಪೂರೈಸಿದವರನ್ನು ಹಸಿರು ಬಣ್ಣದಿಂದ, ಬಿಟೆಕ್ ಮತ್ತು ಬಿಇ ಮಾಡಿದವರನ್ನು ನೀಲಿ ಬಣ್ಣದಿಂದ, ನರ್ಸಿಂಗ್‌, ವೈದ್ಯಕೀಯ ಮತ್ತು ‍ಪ್ಯಾರಾ ಮೆಡಿಕಲ್ ಓದಿದವರನ್ನು ಬಿಳಿ ಬಣ್ಣದಿಂದ, ಸ್ನಾತಕೋತ್ತರ ಪದವೀಧರರನ್ನು ಹಳದಿ ಬಣ್ಣದಿಂದ ಗುರುತಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಕಂಪನಿಗಳನ್ನು ವಲಯಗಳ ಆಧಾರದಲ್ಲಿ ವಿಂಗಡಿಸಲಾಗಿತ್ತು.

ಯಾವ ಕಂಪನಿಯಲ್ಲಿ, ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಸೇರಿದಂತೆ ಉದ್ಯೋಗಾಂಕ್ಷಿಗಳಿಗೆ ಎಲ್ಲ ಮಾಹಿತಿಯನ್ನು ಆಗಾಗ ಉದ್ಘೋಷದ ಮೂಲಕ ತಿಳಿಸಲಾಗುತ್ತಿತ್ತು. ಕೇರಳ, ಗೋವಾ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಿಂದಲೂ ಅಭ್ಯರ್ಥಿಗಳು ಪಾಲ್ಗೊಂಡಿದ್ದಾರೆ. ಜೂನ್‌ 8ರಂದೂ ಮೇಳ ನಡೆಯಲಿದೆ.

ಭಾರಿ ಮಳೆಯ ನಡುವೆ ‘ಆಳ್ವಾಸ್‌ ಪ್ರಗತಿ’ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಬಂದ ಉದ್ಯೋಗಾಕಾಂಕ್ಷಿಗಳು -ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಭಾರಿ ಮಳೆಯ ನಡುವೆ ‘ಆಳ್ವಾಸ್‌ ಪ್ರಗತಿ’ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಬಂದ ಉದ್ಯೋಗಾಕಾಂಕ್ಷಿಗಳು -ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಉದ್ಯೋಗ ಮೇಳಕ್ಕೆ ಹೋಗುವುದನ್ನು ಯುವಜನರು ಫ್ಯಾಷನ್ ಮಾಡಿಕೊಳ್ಳಬಾರದು. ಅದು ಅವರಿಗೆ ಪ್ಯಾಷನ್‌ ಆಗಬೇಕು. ಉದ್ಯೋಗದ ಮೂಲಕ ಭವಿಷ್ಯವನ್ನು ಕಂಡುಕೊಂಡು ಜವಾಬ್ದಾರಿಯನ್ನು ನಿಭಾಯಿಸುವುದನ್ನು ಅರಿತುಕೊಳ್ಳಬೇಕು.
ಮೋಹನ ಆಳ್ವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT