ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೊಲೀಸ್ ಇಲಾಖೆ ದ್ವಂದ್ವ ನೀತಿ: ಕುಂಪಲ

Published 1 ಜೂನ್ 2024, 4:28 IST
Last Updated 1 ಜೂನ್ 2024, 4:28 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುತ್ವವಾದಿ ಕಾರ್ಯಕರ್ತರು, ಬಿಜೆಪಿಯವರನ್ನು ದಮನಿಸುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಮೂವರು ಶಾಸಕರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಜನಪ್ರತಿನಿಧಿಗಳನ್ನೂ ಮಟ್ಟ ಹಾಕುವ ಕೆಲಸ ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಂಕನಾಡಿಯ ಮಸೀದಿಯೊಂದರ ಎದುರಿನ ರಸ್ತೆಯಲ್ಲಿ ಮೇ 24ರಂದು ಮಧ್ಯಾಹ್ನ ಕೆಲವರು ನಮಾಜ್ ನಡೆಸಿದ ಬಗ್ಗೆ ಪೊಲೀಸ್ ಇಲಾಖೆ ಸುಮೊಟೊ ಪ್ರಕರಣ ದಾಖಲಿಸಿಕೊಂಡಿತ್ತು. ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದವರು ಮನವಿ ಸಲ್ಲಿಸಿದ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿ ಇಲಾಖೆ ಬಿ ರಿಪೋರ್ಟ್ ಸಲ್ಲಿಸಿದೆ. ಆದರೆ, ಈ ರೀತಿ ರಸ್ತೆ ಮೇಲೆ ನಮಾಜ್ ಮಾಡಿರುವುದು ತಪ್ಪು, ಇದೇ ರೀತಿ ಮುಂದುವರಿದಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿರುವ ಹಿಂದುತ್ವವಾದಿ ಮುಖಂಡ ಶರಣ್ ಪಂಪ್‌ವೆಲ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸ್ ಇಲಾಖೆ ದ್ವಂದ್ವ ನೀತಿ ಅನುಸರಿಸುತ್ತಿದೆ’ ಎಂದರು.

ಘಟನೆ ನಡೆದಿರುವ ಸಂಬಂಧ ಮಸೀದಿಯ ಜಂಟಿ ಕಾರ್ಯದರ್ಶಿಯೇ ಇದು ಸರಿಯಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಪೊಲೀಸ್ ಇಲಾಖೆ ಅವರ ಮೇಲೆ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಿ, ಕಾಂಗ್ರೆಸ್‌ ಅಣತಿಯಂತೆ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡಬೇಕಾಗಿರುವ ಸರ್ಕಾರ, ಪೊಲೀಸ್ ಇಲಾಖೆ ಶಾಂತಿ ಕದಡುವ ಕೆಲಸ ಮಾಡುತ್ತಿವೆ. ಪೊಲೀಸರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು ಜೊತೆಗೆ ಶರಣ್‌ ಪಂಪ್‌ವೆಲ್ ಮೇಲೆ ದಾಖಲಿಸಿರುವ ಪ್ರಕರಣ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯುವ ಜನರನ್ನು ಒಗ್ಗೂಡಿಸಿ, ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಪಕ್ಷದ ಮುಖಂಡರಾದ ನಿತಿನ್ ಕುಮಾರ್, ಜಗದೀಶ್ ಶೇಣವ, ಪ್ರೇಮಾನಂದ ಶೆಟ್ಟಿ, ನಂದನ ಮಲ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT