ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉರ್ವ ಗಣಪತಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆ.11ರಿಂದ

Published 6 ಫೆಬ್ರುವರಿ 2024, 5:26 IST
Last Updated 6 ಫೆಬ್ರುವರಿ 2024, 5:26 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಉರ್ವಸ್ಟೋರ್‌ ಮಹಾಗಣಪತಿ ದೇವಸ್ಥಾನದಲ್ಲಿ ಫೆ.11ರಿಂದ 18ರವರೆಗೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಮಹಾಗಣಪತಿ ಸೇವಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇರೆಬೈಲ್‌ನ ಶಿವಪ್ರಸಾದ್ ತಂತ್ರಿ ನೇತೃತ್ವ, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರತ್ನಾಕರ ಭಟ್ ಸಹಯೋಗದಲ್ಲಿ ನೂತನ ಬ್ರಹ್ಮರಥ ಸಮರ್ಪಣ ಪೂರ್ವಕ-ಪಂಚವಿಂಶತಿ ದ್ರವ್ಯಮಿಳಿತ ಸಹಸ್ರಕಳಶ ಸಹಿತ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಹಾಗೂ ಬ್ರಹ್ಮರಥೋತ್ಸವ ನೆರವೇರಲಿದೆ ಎಂದರು.

ಫೆ.11ರಂದು ಬೆಳಿಗ್ಗೆ 8ರಿಂದ ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಶ್ರೀ ದೇವರ ಉಗ್ರಾಣ ಮುಹೂರ್ತ, ಅನ್ನದಾನದ ಉಗ್ರಾಣ ಮುಹೂರ್ತ, ಪ್ರತಿನಿತ್ಯದ 12 ಕಾಯಿಯ ಅಷ್ಟದ್ರವ್ಯ ಮಹಾಗಣಪತಿ ಯಾಗ, ಅಥರ್ವಶೀರ್ಷ ಮಹಾಗಣಪತಿಯಾಗ ಧಾರಾಂತ ಬಿಂಬ ಪ್ರಕ್ರಿಯೆ ಮತ್ತಿತರ ಧಾರ್ಮಿಕ ಕಾರ್ಯಗಳು ನೆರವೇರಲಿವೆ. 12ರಂದು ಸಂಜೀವಿನಿ ಮಹಾಮೃತ್ಯುಂಜಯ ಯಾಗ, 13ರಂದು ಪೂರ್ಣಮಾನ ನವಗ್ರಹ ಹೋಮ, ಮಧ್ಯಾಹ್ನ 12ಕ್ಕೆ ವಾರ್ಷಿಕ ಜಾತ್ರೆಯ ಧ್ವಜಾರೋಹಣ, ಸಂಜೆ ಶ್ರೀಚಕ್ರ ಪೂಜೆ, 14ರಂದು ದೀಪದ ಬಲಿ, ದರ್ಶನ ಬಲಿ, 49 ಕಳಶ ಪ್ರತಿಷ್ಠೆ, ನಾಗದೇವರ ಸನ್ನಿಧಿಯಲ್ಲಿ ಸಾನ್ನಿಧ್ಯ ಕಲಶಾಭಿಷೇಕ, ಬ್ರಹ್ಮಕಲಶ ಮಂಡಲ ಪೂಜೆ ನಡೆಯಲಿವೆ ಎಂದರು.

ಫೆ.15ರಂದು ಬೆಳಿಗ್ಗೆ 6ಕ್ಕೆ ಬ್ರಹ್ಮಕಲಶಾಭಿಷೇಕ ಪ್ರಾರಂಭ, 9.05ಕ್ಕೆಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ, ದುರ್ಗಾದೇವಿಗೆ ಬ್ರಹ್ಮಕಲಶಾಭಿಷೇಕ, 16ರಂದು ದೇವರಿಗೆ ನೂತನ ಬ್ರಹ್ಮರಥ ಸಮರ್ಪಣೆ, ಮಧ್ಯಾಹ್ನ 12 ಗಂಟೆಗೆ ರಥಾರೋಹಣ, ಹಗಲು ಬ್ರಹ್ಮ ರಥೋತ್ಸವ ನಡೆಯಲಿದೆ. 17ರಂದು ಕವಾಟೋದ್ಘಾಟನೆ, ವಿಶೇಷ ಅಭಿಷಾಕ ಸಹಿತ ಮಹಾಪೂಜೆ, ತುಲಾಭಾರ ಸೇವೆ, ಮಹಾಪೂಜೆ, ಚೂರ್ಣೋತ್ಸವ, ಪಲ್ಲಪೂಜೆ ಬಳಿಕ ಮಹಾ ಅನ್ನಸಂತರ್ಪಣೆ, 18ರಂದು ಸಂಪ್ರೋಕ್ಷಣಾ ಕಳಶ, ಅಧಿವಾಸ ಹೋಮ, 12 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಹೋಮ ಇತ್ಯಾದಿ ಧಾರ್ಮಿಕ ಕಾರ್ಯಗಳು ಸಂಪನ್ನಗೊಳ್ಳಲಿವೆ. ಫೆ.8ರಂದು ಹಸಿರು ಹೊರೆ ಕಾಣಿಕೆ ಮೆರವಣಿಗೆ ಸಮರ್ಪಣೆ ನಡೆಯಲಿದೆ  ಎಂದು ತಿಳಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ಸತೀಶ್ ಆಳ್ವ ಮುಡಾರೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ರಾವ್, ಗೌರವ ಸಂಚಾಲಕ ಗಿರಿಧರ ಶೆಟ್ಟಿ  ಕೋಶಾಧಿಕಾರಿ ಕೆ.ಗೋಪಾಲಕೃಷ್ಣ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT