ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | 2025ಕ್ಕೆ ಮಲೇರಿಯಾ ಮುಕ್ತ ಜಿಲ್ಲೆಗೆ ಪಣ

ಜಿಲ್ಲೆಯಾದ್ಯಂತ ನಿಗಾ ಹೆಚ್ಚಿಸಿದ ಆರೋಗ್ಯ ಇಲಾಖೆ lಮನೆ ಮನೆ ಸಮೀಕ್ಷೆ
Last Updated 29 ಏಪ್ರಿಲ್ 2022, 16:26 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು 2025ರ ಹೊತ್ತಿಗೆ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಆರೋಗ್ಯ ಇಲಾಖೆ ಪಣ ತೊಟ್ಟಿದ್ದು, ಇದಕ್ಕೆ ಜಿಲ್ಲೆಯಾದ್ಯಂತ ನಿಗಾ ಹೆಚ್ಚಿಸಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಕಡಿಮೆಯಾಗಿವೆ. ಮಾರ್ಚ್‌ ಅಂತ್ಯದವರೆಗೆ ಒಟ್ಟು 33 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 30 ಪ್ರಕರಣಗಳು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿವೆ. 2019ರಲ್ಲಿ ಜಿಲ್ಲೆಯಲ್ಲಿ ಒಟ್ಟು 2,797 ಪ್ರಕರಣಗಳು ವರದಿಯಾಗಿದ್ದು, 2,593 ಪ್ರಕರಣಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದ್ದವು.

‘ಮಲೇರಿಯಾ ಪ್ರಕರಣಗಳು ಹರಡದಂತೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಸೊಳ್ಳೆಗಳ ಲಾರ್ವಾ ಪತ್ತೆಗೆ ಸಮೀಕ್ಷೆ ನಡೆಸಲಾಗುತ್ತಿದೆ. 2021ರಲ್ಲಿ ಒಟ್ಟು 1,61,931 ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದು, ಈ ಪೈಕಿ 689 ಪ್ರಕರಣಗಳು ಪತ್ತೆಯಾಗಿದ್ದವು. ಈ ವರ್ಷ ಮಾರ್ಚ್‌ ಅಂತ್ಯದವರೆಗೆ 1,20,507 ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, 33 ಪ್ರಕರಣಗಳು ಪತ್ತೆಯಾಗಿವೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್‌ ತಿಳಿಸಿದ್ದಾರೆ.

ಈಗಾಗಲೇ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಸಮೀಕ್ಷೆ ನಡೆಸುತ್ತಿದ್ದಾರೆ. ಅವರಿಗೆ ಮಲೇರಿಯಾ ತಪಾಸಣೆಗೆ ರ‍್ಯಾಪಿಡ್ ಕಿಟ್‌ಗಳನ್ನು ಒದಗಿಸಲಾಗಿದ್ದು, 20 ನಿಮಿಷದಲ್ಲಿ ಫಲಿತಾಂಶ ಸಿಗಲಿದೆ. ಕ್ವಾಂಟಿಟಿವ್‌ ಬಫ್ಫಿ ಕೋಟ್ (ಕ್ಯೂಬಿಸಿ) ತಂತ್ರಜ್ಞಾನದ ಸಹಾಯದಿಂದ 10 ನಿಮಿಷದಲ್ಲಿ ವರದಿ ನೀಡಲಾಗುತ್ತಿದೆ. ‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 60 ಎಂಪಿಡಬ್ಲ್ಯು ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡುತ್ತಿದ್ದು, ಜನರ ಆರೋಗ್ಯದ ಮಾಹಿತಿ ಪಡೆಯುವುದರ ಜೊತೆಗೆ ಮನೆಗಳ ಸುತ್ತ ನೀರು ನಿಂತಿರುವ ಸ್ಥಳಗಳು ಇವೆಯೇ ಎಂಬುದನ್ನೂ ಪತ್ತೆ ಮಾಡುತ್ತಿದ್ದಾರೆ. ಇದರ ಜೊತೆಗೆ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆಗೆ ವಿಶೇಷ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ’ ಎಂದು ಡಾ. ನವೀನ್‌ಚಂದ್ರ ಕುಲಾಲ್‌ ತಿಳಿಸಿದ್ದಾರೆ.

ಮಲೇರಿಯಾ ತಪಾಸಣೆಗೆ ಮೊಬೈಲ್‌ ವಾಹನವನ್ನೂ ಸಜ್ಜುಗೊಳಿಸಲಾಗಿದ್ದು, ಮಲೇರಿಯಾ ಲಕ್ಷಣಗಳು ಕಂಡು ಬಂದಲ್ಲಿ ಅಂಥವರ ಮನೆಗೆ ತೆರಳಿ ರಕ್ತದ ಮಾದರಿ ತಪಾಸಣೆ ಮಾಡಲಾಗುತ್ತಿದೆ. ಈ ಸೇವೆ ಪಡೆಯಲು ಮೊ.ಸಂ. 9448556872 ಗೆ ಕರೆ ಮಾಡಬಹುದಾಗಿದೆ.

ಡೆಂಗಿ ಹೆಚ್ಚುವ ಸಾಧ್ಯತೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು, ಮುಂಗಾರಿನಲ್ಲಿ ಡೆಂಗಿ ಹಾವಳಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ವರ್ಷ ಇಲ್ಲಿಯವರೆಗೆ ಒಟ್ಟು 41 ಡೆಂಗಿ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿವೆ. ಈ ಪೈಕಿ ಹೆಚ್ಚಿನ ಪ್ರಕರಣಗಳು ನಗರದ ಕಂಕನಾಡಿ, ವೆಲೆನ್ಸಿಯ, ಕದ್ರಿ ಪ್ರದೇಶಗಳ ಅಪಾರ್ಟ್‌ಮೆಂಟ್‌ಗಳಲ್ಲಿ ಪತ್ತೆಯಾಗಿವೆ. 41 ಪ್ರಕರಣಗಳಲ್ಲಿ 19 ಪ್ರಕರಣಗಳು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿವೆ. ಮಂಗಳೂರು, ಬೆಳ್ತಂಗಡಿ ತಾಲ್ಲೂಕಿನಲ್ಲಿ ತಲಾ 7, ಬಂಟ್ವಾಳ ತಾಲ್ಲೂಕಿನಲ್ಲಿ ನಾಲ್ಕು, ಪುತ್ತೂರು, ಸುಳ್ಯ ತಾಲ್ಲೂಕಿನಲ್ಲಿ ತಲಾ 2 ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸಾಂಕ್ರಾಮಿಕ ರೋಗಗಳು ಹರಡಲು ಜಿಲ್ಲೆಯ ಹವಾಮಾನ ಅನುಕೂಲಕರವಾಗಿದ್ದು, ಬರುವ ದಿನಗಳಲ್ಲಿ ಡೆಂಗಿ ಹೆಚ್ಚಾಗುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ಸುತ್ತ ಹಾಗೂ ಅಪಾರ್ಟ್‌ಮೆಂಟ್‌ಗಳ ತಾರಸಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ’ ಎಂದು ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT