ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಜೆಇಇ, ನೀಟ್‌: ಪಿ.ಯು. ವಿದ್ಯಾರ್ಥಿಗಳಿಗೆ ಉಚಿತ ತರಬೇತಿ

Published 26 ಡಿಸೆಂಬರ್ 2023, 15:22 IST
Last Updated 26 ಡಿಸೆಂಬರ್ 2023, 15:22 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪಿ.ಯು. ಕಾಲೇಜು ವಿದ್ಯಾರ್ಥಿಗಳಿಗೆ ಸೆಂಟರ್ ಫಾರ್ ಅಡ್ವಾನ್ಸ್‌ಡ್‌ ಲರ್ನಿಂಗ್ (ಸಿಎಫ್‌ಎಎಲ್) ಸಂಸ್ಥೆಯ ‘ಪ್ರಗತಿ’ ಕಾರ್ಯಕ್ರಮದಡಿ ನೀಡುವ ಜೆಇಇ ಅಥವಾ ನೀಟ್ ಉಚಿತ ತರಬೇತಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು 2024ರ ಜ.14ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.

ಈ ಕುರಿತು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ‘ಜೆಇಇ ಹಾಗೂ ನೀಟ್‌ ತರಬೇತಿಗೆ ಖಾಸಗಿ ಸಂಸ್ಥೆಗಳು ₹ 1 ಲಕ್ಷಕ್ಕೂ ಹೆಚ್ಚು ಶುಲ್ಕ ಪಡೆಯುತ್ತವೆ. ಆದರೆ ಸಿಎಫ್‌ಎಎಲ್‌ನವರು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಅಡಿ ಸರ್ಕಾರಿ ಹಾಗೂ ಅನುದಾನಿತ ಪಿ.ಯು. ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು.

‘ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಪಿ.ಯು.ವಿದ್ಯಾರ್ಥಿಗಳಿಗೆ ಜೆಇಇ, ನೀಟ್‌ ತರಬೇತಿ ನೀಡಲು ಇನ್ನಷ್ಟು ಸಂಸ್ಥೆಗಳು ಮುಂದೆ ಬರಬೇಕು’ ಎಂದರು.

ಸಿಎಫ್‌ಎಎಲ್‌ನ ನಿರ್ದೇಶಕ ವಿಜಯ್ ಮೊರಾಸ್, ‘ಕುಟುಂಬದಲ್ಲಿ ಒಬ್ಬ ವ್ಯಕ್ತಿ ಅಭಿವೃದ್ಧಿ ಇಡೀ ಕುಟುಂಬದ ವಾತಾವರಣವನ್ನೇ ಬದಲಿಸಬಲ್ಲುದು. ಪ್ರತಿಭಾನ್ವಿತ ವಿದ್ಯಾರ್ಥಿಗಳ ಕನಸುಗಳನ್ನು ಪೋಷಿಸುವುದು ನಮ್ಮ ಉದ್ದೇಶ. ಭವಿಷ್ಯದ ನಾಯಕರು, ವಿಜ್ಞಾನಿಗಳು ನಮ್ಮ ಸಂಸ್ಥೆಯಲ್ಲಿ ರೂಪುಗೊಳ್ಳುವುದನ್ನು ಬಯಸುತ್ತೇವೆ’ ಎಂದು ತಿಳಿಸಿದರು. 

ಸಿಎಫ್‌ಎಎಲ್‌ ಉಪಪ್ರಾಂಶುಪಾಲ ಗೌರೀಶ್‌ರಾಜ್‌, ‘2022ರಲ್ಲಿ  32 ವಿದ್ಯಾರ್ಥಿಗಳಿಗೆ ಹಾಗೂ 2023ರಲ್ಲಿ 38 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಿದ್ದೇವೆ. ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗುವ 40 ಮಂದಿಗೆ ಎರಡು ವರ್ಷಗಳಲ್ಲಿ 1,300 ಗಂಟೆಗಳ ತರಬೇತಿ ಸಿಗಲಿದೆ. ನಗರದ ಬೆಸೆಂಟ್‌ ಕಾಲೇಜಿನಲ್ಲಿ ಸಂಜೆ 5.30ರಿಂದ 7 ಗಂಟೆಯವರೆಗೆ ತರಬೇತಿ ಆಯೋಜಿಸಲಾಗುತ್ತದೆ’ ಎಂದರು. 

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಡಿ.ಜಯಣ್ಣ ಸುದ್ದಿಗೋಷ್ಠಿಯಲ್ಲಿದ್ದರು.

‘ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ’

‘ಜಿಲ್ಲೆಯ ಮೆಟ್ರಿಕ್‌ ನಂತರದ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿರುವ  ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸು ಉದ್ದೇಶದಿಂದ ಕೌಶಲ ತರಬೇತಿ ನೀಡಲು ಸಿದ್ಧತೆಗಳು ನಡೆದಿವೆ. ತಿಂಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಕ್ಕೆ ಬರಲಿದೆ’ ಎಂದು ಡಾ.ಆನಂದ ಕೆ.ತಿಳಿಸಿದರು. ‘ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾತನಾಡುವ ಕಲೆ ಹಾಗೂ ವೃತ್ತಿ ಮಾರ್ಗದರ್ಶನದ ತರಬೇತಿಯನ್ನೂ ನೀಡಲಾಗುತ್ತದೆ. ವೀಡಿಯೊ ಕಾನ್ಫರೆನ್ಸ್ ಮೂಲಕ ನೀಡುವ ಈ ತರಬೇತಿ ತುಂಬಾ ಪ್ರಯೊಜನಕಾರಿ. ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಇವುಗಳನ್ನು ವೀಕ್ಷಿಸಬಹುದು’  ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT