ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲ ಗರ್ಭಿಣಿ: ಆಯೋಗದಿಂದ ಪುನರ್‌ ಸಮೀಕ್ಷೆ

ಮೂರು ವರ್ಷಗಳ ಅವಧಿಯಲ್ಲಿ 49 ಸಾವಿರ ಪ್ರಕರಣಗಳು ಪತ್ತೆ
Published 16 ಜನವರಿ 2024, 20:32 IST
Last Updated 16 ಜನವರಿ 2024, 20:32 IST
ಅಕ್ಷರ ಗಾತ್ರ

ಮಂಗಳೂರು: ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 18 ವರ್ಷ ತುಂಬುವ ಒಳಗೆ 49ಸಾವಿರಕ್ಕೂ ಹೆಚ್ಚು ಬಾಲಕಿಯರು ಗರ್ಭಿಣಿಯರಾಗಿರುವ ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ಪುನರ್ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಮೂಲಕ ಆಯಾ ಜಿಲ್ಲೆಯ ಮಾಹಿತಿ ಸಂಗ್ರಹಿಸಿದಾಗ ಈ ಆಘಾತಕಾರಿ ಮಾಹಿತಿ ಗೊತ್ತಾಗಿದೆ. ಆಯೋಗದ ವತಿಯಿಂದ ಪುನರ್ ಸಮೀಕ್ಷೆ ಮಾಡಲಾಗುತ್ತಿದ್ದು, ಇಂತಹ ಪ್ರಕರಣ ಪತ್ತೆಯಾಗಿರುವ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆಯಲಾಗುತ್ತಿದೆ. ಆಯೋಗದ ಸದಸ್ಯರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದ್ದು, ಸಂತ್ರಸ್ತ ಬಾಲಕಿಯರನ್ನು ಸದಸ್ಯರೇ ಖುದ್ದು ಭೇಟಿ ಮಾಡಿ, ಸತ್ಯಾಸತ್ಯತೆ ಪರಿಶೀಲಿಸಿ ವರದಿ ಸಿದ್ಧಪಡಿಸಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಸಮೀಕ್ಷೆ ಪೂರ್ಣಗೊಂಡು ಸಮಗ್ರ ವರದಿ ಸಿದ್ಧವಾಗುವ ನಿರೀಕ್ಷೆ ಇದೆ’ ಎಂದರು.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂತಹ ಗರಿಷ್ಠ ಪ್ರಕರಣಗಳು ಇದ್ದು, ಉಡುಪಿ ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಕರಣಗಳು ಇವೆ. ಸಾಕಷ್ಟು ಜಾಗೃತಿ ಮೂಡಿಸಿದರೂ, ಬಾಲ್ಯ ವಿವಾಹ ನಿಯಂತ್ರಣಕ್ಕೆ ಬಂದಿಲ್ಲ. ಕೆಲವು ಜೈಲುಗಳಲ್ಲಿ ಇರುವವರಲ್ಲಿ ಶೇ 60ರಷ್ಟು 25–30 ವರ್ಷ ವಯಸ್ಸಿನ ಪುರುಷರು ಇದ್ದಾರೆ. ಇವರು ಪೊಕ್ಸೊ ಅಥವಾ ಬಾಲ್ಯ ವಿವಾಹದ ಅಡಿಯಲ್ಲಿ ಆರೋಪಿಗಳಾಗಿ ಜೈಲು ಸೇರಿದವರಾಗಿದ್ದಾರೆ. 18 ವರ್ಷಕ್ಕಿಂತ ಕಿರಿಯ ವಯಸ್ಸಿನ ಬಾಲಕಿಯನ್ನು ಮದುವೆಯಾದಲ್ಲಿ ಆ ವ್ಯಕ್ತಿಯ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT