ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: ರಾಮಕೃಷ್ಣ ಮಠಕ್ಕೆ ‘ಗೌರವಾಭಿವಂದನೆ’ ನಾಳೆ

Last Updated 25 ನವೆಂಬರ್ 2021, 12:32 IST
ಅಕ್ಷರ ಗಾತ್ರ

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರವು ಕೊಡಮಾಡಿದ ವಿಶೇಷ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿರುವ ಇಲ್ಲಿನ ರಾಮಕೃಷ್ಣ ಮಠಕ್ಕೆ ‘ಗೌರವಾಭಿವಂದನೆ’ ಸಲ್ಲಿಸುವ ಕಾರ್ಯಕ್ರಮವನ್ನು ಶನಿವಾರ (ನ. 27) ಹಮ್ಮಿಕೊಳ್ಳಲಾಗಿದೆ ಎಂದು ಗೌರವಾಭಿನಂದನ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ತಿಳಿಸಿದರು.

ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿ ನಿಡಿದ ಅವರು, ‘ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿಯೇ ಮಂಗಳೂರಿನ ರಾಮಕೃಷ್ಣ ಮಠವೂ ಅಮೃತ ಮಹೋತ್ಸವ ಆಚರಿಸುತ್ತಿರುವುದು ಮತ್ತು ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವದ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕಾಕತಾಳೀಯವಾಗಿದೆ. ಹಲವು ದಶಕಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಠವು ಈಚಿನ ಆರೇಳು ವರ್ಷಗಳಲ್ಲಿ ಸ್ವಚ್ಛ ಭಾರತ ಅಭಿಯಾನದ ಜತೆಗೆ ಕೈಜೋಡಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗಮನಾರ್ಹ ಕಾರ್ಯವನ್ನು ಮಾಡಿ ದೇಶದ ಗಮನಸೆಳೆದಿದೆ. ಮಠದ ಕಾರ್ಯವು ಶ್ರಮದಾನಕ್ಕೆ ಸೀಮಿತವಾಗದೆ, 20,000ಕ್ಕೂ ಹೆಚ್ಚು ಮನೆಗಳಿಗೆ ಭೇಟಿನೀಡಿ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವುದು, ಶಾಲಾ ಕಾಲೇಜುಗಳಲ್ಲೂ ಮಕ್ಕಳಿಗೆ ಸ್ವಚ್ಛತೆಯ ಪಾಠ ಕಲಿಸುವುದು, ಎರಡೂ ಜಿಲ್ಲೆಗಳ 200 ಗ್ರಾಮಗಳಲ್ಲಿ ಸ್ವಚ್ಛ ಗ್ರಾಮದ ಕಲ್ಪನೆಯನ್ನು ಬಿತ್ತುವುದೇ ಮುಂತಾದ ಕೆಲಸಗಳನ್ನು ಮಾಡಿದೆ. ಈ ಕಾರಣಕ್ಕಾಗಿಯೇ ಮಠವು ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ’ ಎಂದರು.

27ರಂದು ಸಂಜೆ 6 ಗಂಟೆಗೆ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ ವಹಿಸುವರು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ವಿನಯ ಹೆಗ್ಡೆ ಅವರು ಗೌರವ ಅತಿಥಿಯಾಗಿರುವರು. ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್‌ ಕುಮಾರ್‌ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಸಂಸದ ನಳಿನ್‌ಕುಮಾರ್‌ ಕಟೀಲ್‌, ಶಾಸಕರಾದ ವೇದವ್ಯಾಸ ಕಾಮತ್‌, ಯು.ಟಿ. ಖಾದರ್‌, ಡಾ. ಭರತ್‌ ಶೆಟ್ಟಿ, ಮೇಯರ್‌ ಪ್ರೇಮಾನಂದ ಶೆಟ್ಟಿ, ಮಾಜಿ ಶಾಸಕ ಜೆ.ಆರ್‌. ಲೋಬೊ, ನಗರಾಭಿವೃದ್ಧಿ ಪ್ರಾಧಿಖಾರದ ಅಧ್ಯಕ್ಷ ರವಿಶಂಕರ್ ಮಿಜಾರು ಅತಿಥಿಗಳಾಗಿ ಪಾಲ್ಗೊಳ್ಳುವರು.

ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್‌, ಎಸ್‌.ಸಿ.ಎಸ್‌. ಆಸ್ಪತ್ರೆಯ ಮುಖ್ಯಸ್ಥ ಡಾ. ಜೀವರಾಜ್‌ ಸೊರಕೆ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮಂಜುನಾಥ ಭಂಡಾರಿ ವಿಶೇಷ ಆಹ್ವಾನಿತರಾಗಿರುತ್ತಾರೆ ಎಂದು ಕಾರ್ಣಿಕ್‌ ತಿಳಿಸಿದರು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಂಜೆ 5.15ರಿಂದ 6 ಗಂಟೆಯವರೆಗೆ ಭಜನ್‌ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದೂ ಅವರು ತಿಳಿಸಿದರು.

ಸಮಿತಿಯ ಸದಸ್ಯರಾದ ದಿಲ್‌ರಾಜ್‌ ಆಳ್ವ, ಶುಭೋದಯ ಆಳ್ವ, ಉಮಾನಾಥ ಕೋಟೆಕಾರ್‌ ಹಾಗೂ ಹರೀಶ್‌ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT