ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆಗೆ ಕರಾವಳಿಯಲ್ಲಿ ಕಾಂಗ್ರೆಸ್ ಕಹಳೆ

ಪಕ್ಷಕ್ಕೆ ಬಲವಿಲ್ಲದ ನೆಲದಲ್ಲೇ ಚುನಾವಣಾ ಸವಾಲು ಸ್ವೀಕಾರ. ಉಪಕಾರ ಸ್ಮರಣೆ ಮಹತ್ವ– ಎಐಸಿಸಿ ಅಧ್ಯಕ್ಷರಿಂದ ಪಾಠ
Published 18 ಫೆಬ್ರುವರಿ 2024, 5:55 IST
Last Updated 18 ಫೆಬ್ರುವರಿ 2024, 5:55 IST
ಅಕ್ಷರ ಗಾತ್ರ

ಮಂಗಳೂರು: ಮೂರು ದಶಕಗಳಿಂದ ಒಮ್ಮೆಯೂ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ‌ ಮುಖ ನೋಡದ ದಕ್ಷಿಣ ಕನ್ನಡ‌ ಜಿಲ್ಲೆಯಲ್ಲಿ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಮುಂಬರುವ ಚುನಾವಣೆಯ ಸವಾಲನ್ನು ದಿಟ್ಟವಾಗಿ ಸ್ವೀಕರಿಸಿರುವ ಸಂದೇಶವನ್ನು ಕಾಂಗ್ರೆಸ್ ರವಾನಿಸಿದೆ‌.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿರುವ ಕಾಂಗ್ರೆಸ್‌, ಪಕ್ಷವು ಅಷ್ಟೊಂದು ಬಲ ಇಲ್ಲದಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮತದಾರರ ‌ಆಶೀರ್ವಾದ ಪಡೆಯಲು ಶತಾಯ ಗತಾಯ ಪ್ರಯತ್ನ ಮಾಡುವ ಸುಳಿವನ್ನು ನೀಡಿದೆ. 

 ಅಡ್ಯಾರಿನ ಸಹ್ಯಾದ್ರಿ ಕಾಲೇಝು ಮೈದಾನದಲ್ಲಿ ಶನಿವರ ಏರ್ಪಡಿಸಿದ್ದ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಸ್ಪೃಶ್ಯರ, ಶೋಷಿತರ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಇಲ್ಲಿನ ಕುದ್ಮುಲ್‌ ರಂಗರಾಯ ಕೊಡುಗೆಗಳನ್ನೇ ಜನರು ಮರೆತಿರುವ ವಿಚಾರವನ್ನು ಮುಂದಿಟ್ಟುಕೊಂಡು ‘ಉಪಕಾರ ಸ್ಮರಣೆ’ಯ ಪಾಠ ಮಾಡಿದರು. ಭೂ ಸುಧಾರಣೆ ಕಾಯ್ದೆಯಿಂದ ಭೂಮಾಲೀಕರಾದವರು ಪಕ್ಷದ ಋಣದಲ್ಲಿದ್ದಾರೆ ಎಂದು ನೆನಪಿಸಿದರು. ಪಕ್ಷವು ನಾಡಿನ ಹಾಗೂ ದೇಶದ ಅಭಿವೃದ್ಧಿ ನೀಡಿರುವ ಕೊಡುಗೆಗಳನ್ನು ಎಳೆ ಎಳೆಯಾಗಿ ವಿವರಿಸುವ ಮೂಲಕ, ಭಾರಿ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರರನ್ನು ಹುರಿದುಂಬಿಸಿದರು. ಉಳ್ಳಾಲ ಶ್ರೀನಿವಾಸ ಮಲ್ಯ ಅವರು ಸಂಸದರಾಗಿದ್ದಾಗ ಆಗಿರುವ ನವಮಂಗಳೂರು ಬಂದರು, ಸುರತ್ಕಲ್‌ನ ಎನ್‌ಐಟಿಕೆ, ಬಜಪೆಯ ಅಂತರರಾಷ್ಟ್ರೀಯ ವಿಮಾನನಿಲ್ದಾಣ, ಕರಾವಳಿಯುದ್ದಕ್ಕೂ ಇರುವ ಸೇತುವೆಗಳೆಲ್ಲವೂ ಕಾಂಗ್ರೆಸ್‌ ಕೊಡುಗೆಗಳು ಎಂದು ಒತ್ತಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಆರಂಭಿಸುತ್ತಿದ್ದಂತೆಯೇ ಕಾರ್ಯಕರ್ತರ ಜೈಕಾರ– ಕೇಕೆಯ ಸದ್ದು ಮುಗಿಲುಮುಟ್ಟಿತು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಉತ್ಸಾಹವನ್ನು ಕಂಡು ಪುಳಕಿತರಾದ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಲೋಕಸಭಾ ಚುನಾವಣೆಗೆ ಮುನ್ನ ಪಕ್ಷವು ರಾಜ್ಯದಲ್ಲಿ ಏರ್ಪಡಿಸಿರುವ ಮೊದಲ ಸಮಾವೇಶವಿದು. ಕರಾವಳಿಯ ಜನರು ರಾಜಕೀಯವಾಗಿಯೂ ಬುದ್ದಿವಂತರು.‌ ದೇಶದ ರಾಜಕಾರಣವನ್ನು ಅರ್ಥಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ. ಆ ಕಾರಣಕ್ಕಾಗಿಯೇ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದೇವೆ’ ಎಂದರು.

ವಿಧಾನಸಭೆಯಲ್ಲಿ ಕಳೆದುಕೊಂಡಿದ್ದನ್ನು ಲೋಕಸಭಾ ಚುನಾವಣೆಯಲ್ಲಿ ಪಡೆಯಲು ಕಾರ್ಯಕರ್ತರನ್ನು ಬಡಿದೆಬ್ಬಿಸುವ ಪ್ರಯತ್ನವನ್ನು ಅವರು ಮಾಡಿದರು. 

ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಾದ್ಯಂತ ಜಯಭೇರಿ ಬಾರಿಸಿರುವ ಕಾಂಗ್ರೆಸ್‌, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 13 ಕ್ಷೇತ್ರಗಳ ಪೈಕಿ ಎರಡರಲ್ಲಿ ಮಾತ್ರ ಗೆದ್ದಿದೆ. ಈ ಸೋಲಿನಿಂದ ಕುಗ್ಗಿಹೋಗಿರುವ ಕಾರ್ಯಕರ್ತರನ್ನು ಹುರಿದುಂಬಿಸುವ ಪ್ರಯತ್ನ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ‘ಸೋಲಿನಿಂದ ಧೃತಿಗೆಡದೇ ಪ್ರಯತ್ನಪಟ್ಟರೆ ಕರಾವಳಿ ಜಿಲ್ಲೆಗಳಲ್ಲೂ ಪಕ್ಷಕ್ಕೆ ಗೆಲುವು ಕಷ್ಟವಲ್ಲ. ಕಾಂಗ್ರೆಸ್‌ ಸರ್ಕಾರ ಆರಂಭಿಸಿದ ಗ್ಯಾರಂಟಿ ಯೋಜನೆಗಳ ದೀಪ ಕರಾವಳಿಯ ಮನೆಗಳನ್ನೂ ಬೆಳಗಿದೆ.‌ ಈ ಯೋಜನೆಗಳಿಂದ ಇಲ್ಲಿನ ಕುಟುಂಬಗಳಿಗೂ ತಿಂಗಳಿಗೆ ₹ 5 ಸಾವಿರಕ್ಕೂ ಹೆಚ್ಚು ಮೊತ್ತದ ಪ್ರಯೋಜನಗಳು ಸಿಗುತ್ತಿವೆ. ಇದನ್ನೇ ಶಕ್ತಿಯಾಗಿ ಬಳಸಬೇಕು. ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಆದರೆ, ಅವಕಾಶಗಳನ್ನು ನೀಡುತ್ತಾನೆ. ಅದನ್ನು ಬಳಸಿಕೊಳ್ಳಬೇಕು’ ಎಂದರು.

ಮುಂದಿನ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಎಂಬ ಸುಳಿವನ್ನು ಎಲ್ಲೂ ಬಿಟ್ಟುಕೊಡಲಿಲ್ಲ. 

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ,  ಮೈಸೂರು ವಿಭಾಗದ ಉಸ್ತುವಾರಿ ರೋಜಿ ಎಂ.ಜಾನ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ಬಿ.ಸಿ.ಚಂದ್ರಪ್ಪ, ಸಚಿವರಾದ ಜಿ.ಪರಮೇಶ್ವರ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಮಧು ಬಂಗಾರಪ್ಪ, ಮಾಂಕಾಳ ವೈದ್ಯ, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಎಚ್.ಮುನಿಯಪ್ಪ, ಡಿ.ಸುಧಾಕರ್, ಭೈರತಿ ಸುರೇಶ್, ನಾಗೇಂದ್ರ, ವೆಂಕಟೇಶ್, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್,ವಿಧಾನಸಭೆಯ ಸಚೇತಕ ಅಶೋಕ್‌ ಪಟ್ಟಣ ಶೆಟ್ಟಿ, ರಾಜ್ಯಸಭಾ ಸದಸ್ಯರಾದ ನಾಸಿರ್ ಹುಸೇನ್, ಜಿ.ಸಿ.ಚಂದ್ರಶೇಖರ, ತೆರಿಗೆ ಸುಧಾರಣಾ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೆಪಿಸಿಸಿ ಮಹಿಳಾ‌ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹರೀಶ್ ಕುಮಾರ್, ಶಾಸಕ ಅಶೋಕ್ ಕುಮಾರ್ ರೈ, ನಯನಾ, ಭೀಮಣ್ಣ ನಾಯ್ಕ್‌,  ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಮಂಜುನಾಥ ಭಂಡಾರಿ, ಮುಖಂಡರಾದ ಎಂ.ವೀರಪ್ಪ ಮೊಯಿಲಿ, ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮೋಟಮ್ಮ, ವಿ.ಎಸ್‌.ಉಗ್ರಪ್ಪ, ಮಹಮ್ಮದ್ ಗಪೂರ್, ಮಮತಾ ಗಟ್ಟಿ, ಮಿಥುನ್‌ ರೈ, ಐವನ್‌ ಡಿಸೋಜ, ಜೆ.ಆರ್.ಲೋಬೊ ಮತ್ತಿತರರು ಭಾಗವಹಿಸಿದ್ದರು.

ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಎಲ್ಲ ಕ್ಷೇತ್ರಗಳ ಹಳ್ಳಿ ಹಳ್ಳಿಯಿಂದಲೂ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ನಿರೀಕ್ಷೆಗೂ ಮೀರಿ ಜನ ಬಂದಿದ್ದರು. ಕಾರ್ಯಕರ್ತರ ಉತ್ಸಾಹ ಹೆಚ್ಚಿದೆ.

-ಕೆ.ಹರೀಶ್‌ ಕುಮಾರ್‌ ದಕ್ಷಿಣ ಕನ್ನಡ  ಜಿಲ್ಲಾ ಸಮಿತಿ ಅಧ್ಯಕ್ಷ 

ಬಿರುಬಿಸಿಲಿನಲ್ಲೇ ನಡೆದು ಬಂದರು

ಕಾಂಗ್ರೆಸ್‌ ರಾಜ್ಯಮಟ್ಟದ ಸಮಾವೇಶದ ಸಲುವಾಗಿ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದ ಪಕ್ಕದಲ್ಲಿ ಸಾಗುವ ರಾಷ್ಟ್ರಿಯ ಹೆದ್ದಾರಿ 73ರಲ್ಲಿ ಭಾರಿ ವಾಹನಗಳ ಜೊತೆಗೆ ಬಸ್‌ ಸಂಚಾರ ನಿಷೇಧಿಸಲಾಗಿತ್ತು. ಆಸುಪಾಸಿನ ಗ್ರಾಮಗಳ ಸ್ವಂತ ವಾಹನವಿಲ್ಲದ ಕಾರ್ಯಕರ್ತರು ಇದರಿಂದ ಸಮಸ್ಯೆ ಎದುರಿಸಿದರು. ಸಮಾವೇಶದ ಸ್ಥಳವನ್ನು ತಲುಪಲು ಕೆಲವು ಕಾರ್ಯಕರ್ತರು ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಕಿ.ಮೀ. ಗಟ್ಟಲೆ ನಡೆದುಬಂದರು.  

ಟಿಕೆಟ್‌ ಆಕಾಂಕ್ಷಿಗಳಿಂದ ಸಾಲು ಸಾಲು ಬ್ಯಾನರ್‌

ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಸಮಾವೇಶದಲ್ಲಿ ಭಾಗವಹಿಸಲು ಬಂದ ಪಕ್ಷದ ವರಿಷ್ಠರಿಗೆ ಸ್ವಾಗತ ಕೋರಿ ರಸ್ತೆಗಳ ಉದ್ದಕ್ಕೂ ಸಾಲು ಸಾಲು ಬ್ಯಾನರ್‌ಗಳನ್ನು ಅಳವಡಿಸಿದ್ದರು. ಬಿ.ರಮಾನಾಥ ರೈ ಆರ್.ಪದ್ಮರಾಜ್‌ ಇನಾಯತ್‌ ಅಲಿ ವಿನಯ್‌ ಕುಮಾರ್ ಸೊರಕೆ ವಿವೇಕ್‌ರಾಜ್‌ ಪೂಜಾರಿ ಅವರ ಭಾವಚಿತ್ರವಿದ್ದ ಬ್ಯಾನರ್‌ಗಳು ರಸ್ತೆಗಳ ಇಕ್ಕೆಲಗಳಲ್ಲಿ ಕಂಡುಬಂದವು.  

ಕೋಟಿ–ಚೆನ್ನಯರಿಗೆ ಸಿದ್ದು– ಡಿ.ಕೆ.ಶಿಯನ್ನು ಹೋಲಿಸಿದ ಮೊಯಿಲಿ

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಜೋಡಿಯನ್ನು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಕರಾವಳಿಯ ಅವಳಿ ವೀರರಾದ ಕೋಟಿ ಚೆನ್ನಯರಿಗೆ ಹೋಲಿಸಿದರು.  ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ ಬಗ್ಗೆ ಮೊಯಿಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ಸೂಚನೆ ಮೇರೆಗೆ  ಕಾರ್ಯಕರ್ತರು ಎದ್ದು ನಿಂತು ಚಪ್ಪಾಳೆ ಬಡಿಯುವ ಮೂಲಕ ಬಜೆಟ್‌ಗೆ ಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT