ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷಗಳ ಹಿಂದೆ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆಸಾರಾಂಗೆ ಜೀವಾವಧಿ ಜೈಲು

Last Updated 25 ಏಪ್ರಿಲ್ 2018, 19:11 IST
ಅಕ್ಷರ ಗಾತ್ರ

ಜೋಧಪುರ (ಪಿಟಿಐ): ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪು 5 ವರ್ಷಗಳ ಹಿಂದೆ ತಮ್ಮ ಆಶ್ರಮದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು ಸಾಬೀತಾಗಿದೆ. ಅವರಿಗೆ ಜೋ‌ಧಪುರದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಆಸಾರಾಂ ಅವರು ಜೀವನಪೂರ್ತಿ ಜೈಲಿನಲ್ಲಿ ಇರಬೇಕಾಗುತ್ತದೆ. ಅವರಿಗೆ ₹1 ಲಕ್ಷ ದಂಡವನ್ನೂ ವಿಧಿಸಲಾಗಿದೆ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪೊಕರ್ ರಾಮ್‌ ಬಿಷ್ಣೋಯಿ ಅವರು ತೀರ್ಪು ಪ್ರಕಟವಾದ ಬಳಿಕ ಹೇಳಿದರು.

‘ಆಸಾರಾಂ ಅವರು ಸಂತ ಅಲ್ಲ, ಅಪರಾಧಿ. ಅತ್ಯಾಚಾರ ಎಸಗುವ ಷಡ್ಯಂತ್ರ ರೂಪಿಸಿ ಬಾಲಕಿಯನ್ನು ಅವರು ಹಾಸ್ಟೆಲ್‌ನಿಂದ ರೆಸಿಕೊಂಡಿದ್ದಾರೆ. ಶರದ್‌ ಮತ್ತು ಶಿಲ್ಪಿ ಈ ಷಡ್ಯಂತ್ರದ ಭಾಗಿಗಳು. ಹೀಗಾಗಿ ಈ ಎಲ್ಲರಿಗೂ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ವಾದಿಸಿದ್ದೇವೆ’ ಎಂದು ಬಿಷ್ಣೋಯಿ ತಿಳಿಸಿದ್ದಾರೆ.

ಬಾಲಕಿಯರ ಮೇಲೆ ಇತ್ತೀಚೆಗೆ ನಡೆದ ಅತ್ಯಾಚಾರ ಮತ್ತು ಕೊಲೆಗಳ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಿಗೇ ಆಸಾರಾಂ ವಿರುದ್ಧದ ತೀರ್ಪು ಪ್ರಕಟವಾಗಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಧುಸೂದನ ಶರ್ಮಾ ಅವರು ಜೋಧಪುರ ಕೇಂದ್ರ ಕಾರಾಗೃಹದಲ್ಲಿ ಈ ತೀರ್ಪು ನೀಡಿದರು. 77 ವರ್ಷದ ಆಸಾರಾಂ ಅವರು ನಾಲ್ಕು ವರ್ಷಗಳಿಂದ ಈ ಜೈಲಿನಲ್ಲಿದ್ದಾರೆ.

ಪ್ರಕರಣದ ಇತರ ಆರೋಪಿಗಳಾಗಿದ್ದ ಶಿಲ್ಪಿ ಮತ್ತು ಶರದ್‌ ಅವರೂ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಮಾನಿಸಿದ್ದು ಅವರಿಗೆ ತಲಾ 20 ವರ್ಷ ಶಿಕ್ಷೆ ವಿಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ಪ್ರಕಾಶ್‌ ಮತ್ತು ಶಿವ ಅವರನ್ನು ಖುಲಾಸೆ ಮಾಡಲಾಗಿದೆ.

ತೀರ್ಪು ನೀಡಿಕೆ ಕಾರಣದಿಂದಾಗಿ ಜೋಧಪುರ ಜೈಲು ಮತ್ತು ಸುತ್ತಮುತ್ತಲು ಭಾರಿ ಬಂದೋಬಸ್ತು ಏರ್ಪ‍ಡಿಸಲಾಗಿತ್ತು. ರಾಜಸ್ಥಾನ ಹೈಕೋರ್ಟ್‌ನ ನಿರ್ದೇಶನದ ಅನುಸಾರ ವಿಚಾರಣಾ ನ್ಯಾಯಾಲಯವು ತೀರ್ಪು ನೀಡಿದೆ.

ಸಂತ್ರಸ್ತೆಯ ದೂರಿನ ವಿವರ: ಉತ್ತರ ಪ್ರದೇಶದ ಷಹಜಹಾನ್‌ಪುರದ ಹದಿಹರೆಯದ ಬಾಲಕಿ ಮಧ್ಯಪ್ರದೇಶದ ಛಿಂದ್ವಾರದಲ್ಲಿರುವ ಆಸಾರಾಂ ಆಶ್ರಮದಲ್ಲಿ ಕಲಿಯುತ್ತಿದ್ದಳು. 2013ರ ಆಗಸ್ಟ್‌ 15ರ ರಾತ್ರಿ ತನ್ನನ್ನು ಜೋಧಪುರ ಸಮೀಪದ ಮನಾಯಿ ಆಶ್ರಮಕ್ಕೆ ಕರೆತರಲಾಯಿತು. ಅಲ್ಲಿ ಆಸಾರಾಂ ಬಾಪು ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿ ನೀಡಿದ ದೂರಿನಲ್ಲಿ ಹೇಳಲಾಗಿತ್ತು.

2013ರ ನವೆಂಬರ್‌ 6ರಂದು ಆಸಾರಾಂ ಮತ್ತು ಇತರ ನಾಲ್ವರ ವಿರುದ್ಧ ಪೋಕ್ಸೊ ಕಾಯ್ದೆ, ಬಾಲನ್ಯಾಯ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದರು.

ಮತ್ತೊಂದು ಪ್ರಕರಣ: ಆಸಾರಾಂ ವಿರುದ್ಧ ದಾಖಲಾಗಿರುವ ಮತ್ತೊಂದು ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಯುತ್ತಿದೆ. ತಮ್ಮ ಮೇಲೆಯೂ ಆಸಾರಾಂ ಮತ್ತು ಅವರ ಮಗ ನಾರಾಯಣ ಸಾಯಿ ಅತ್ಯಾಚಾರ ಎಸಗಿದ್ದಾರೆ ಎಂದು ಸೂರತ್‌ನ ಇಬ್ಬರು ಸಹೋದರಿಯರು ಆಸಾರಾಂ ಬಂಧನದ ಬಳಿಕ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT