ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪಚ್ಚನಾಡಿಯಲ್ಲಿ ಸುತ್ತಮುತ್ತ ನೀರು ಕಲುಷಿತ

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹೈಕೋರ್ಟ್‌ಗೆ ವರದಿ
Last Updated 31 ಆಗಸ್ಟ್ 2021, 16:31 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರಿನ ಪಚ್ಚನಾಡಿಯಲ್ಲಿರುವ ಘನತ್ಯಾಜ್ಯ ಭೂಭರ್ತಿ ಘಟಕದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರು ಅತಿಯಾಗಿ ಕಲುಷಿತಗೊಂಡಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.

ಆ ಪ್ರದೇಶದಲ್ಲಿ ಕುಡಿಯುವ ನೀರಿನಲ್ಲಿರುವ ವಿವಿಧ ಅಂಶಗಳು ಮಿತಿಗಿಂತ ಜಾಸ್ತಿ ಇರುವುದನ್ನು ಗಮನಿಸಿದ ನ್ಯಾಯಾಲಯ, ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿದೆ.

ಪಚ್ಚನಾಡಿಯಲ್ಲಿನ ಸಮಸ್ಯೆ ಕುರಿತು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠದಲ್ಲಿ ಮಂಗಳವಾರ ನಡೆಯಿತು. ‘ಮಂಗಳೂರು ನಗರದ ಜನತೆಗೆ ಕಲುಷಿತ ನೀರು ಪೂರೈಸುತ್ತಿರುವುದು ಗಂಭೀರ ವಿಷಯ. ಆದರೆ, ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಪೀಠ ಹೇಳಿತು.

‘ಮಂಡಳಿಯ ವರದಿ ಪ್ರಕಾರ, ಪಚ್ಚನಾಡಿ ಸುತ್ತಮುತ್ತ ನೀರಿನಲ್ಲಿ ಅಮೋನಿಯಾ ಮತ್ತು ಕಬ್ಬಿಣದ ಅಂಶ ಅತಿಯಾಗಿರುವುದು ಕಂಡುಬಂದಿದೆ. ಘನತ್ಯಾಜ್ಯ ಭೂಭರ್ತಿ ಘಟಕಗಳು, ಕೊಳಚೆ ನೀರಿನಲ್ಲಿ ಕಂಡುಬರುವ ವಿಷಕಾರಿ ರಾಸಾಯನಿಕ ಅಂಶಗಳೂ ಪತ್ತೆಯಾಗಿವೆ. ಅಲ್ಲಿನ ನೀರು ಅತಿಯಾಗಿ ಕಲುಷಿತಗೊಂಡಿರುವುದನ್ನು ವರದಿ ದೃಢಪಡಿಸಿದೆ’ ಎಂದು ನ್ಯಾಯಪೀಠ ವಿಚಾರಣೆ ವೇಳೆ ಹೇಳಿತು.

ಮಾಲಿನ್ಯ ನಿಯಂತ್ರಣ ಮಂಡಳಿ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆ ವಕೀಲರು ಕೋರಿದರು. ಸೆಪ್ಟೆಂಬರ್‌ 13ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ, ಸಮಸ್ಯೆ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರತಿವಾದಿಗಳು ಸೂಚಿಸಿತು.

ಆ ಪ್ರದೇಶದ ನೀರಿನ ಗುಣಮಟ್ಟ ಕುರಿತು ಮಂಗಳೂರು ಮಹಾನಗರ ಪಾಲಿಕೆ ಸಲ್ಲಿಸಿದ್ದ ಎಲ್ಲ ವರದಿಗಳನ್ನೂ ಪರಿಶೀಲಿಸಿ, ಅಭಿಪ್ರಾಯ ನೀಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್‌ ಸೂಚಿಸಿತ್ತು. ಸಮಸ್ಯೆ ಪರಿಹಾರಕ್ಕೆ ಪಾಲಿಕೆ ಸೂಚಿಸಿದ್ದ ಕ್ರಮಗಳ ಕುರಿತೂ ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT