ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೀನುಗಾರರಿಂದ ಹಿಂದುತ್ವದ ಭದ್ರಕೋಟೆ ರಕ್ಷಣೆ: ಬೃಜೇಶ್ ಚೌಟ

Published 30 ಮಾರ್ಚ್ 2024, 4:27 IST
Last Updated 30 ಮಾರ್ಚ್ 2024, 4:27 IST
ಅಕ್ಷರ ಗಾತ್ರ

ಮಂಗಳೂರು: ‘‌ಹಿಂದೂಗಳ ಭದ್ರಕೋಟೆ ಉಳಿಯಲು ಮೀನುಗಾರರು ಕಾರಣ. ಮೀನುಗಾರರು ಹಿಂದುತ್ವದ ಸೈನಿಕರು ಕೂಡ.‌ ರಾಷ್ಟ್ರದ ಬಗ್ಗೆ ಅತೀವ ಪ್ರೇಮ ಇಟ್ಟುಕೊಂಡ ಸಮುದಾಯವಿದು. ಬಿಜೆಪಿ ಆಲೋಚನಾ‌ ಪ್ರಕ್ರಿಯೆಯಲ್ಲಿ ಮೀನುಗಾರರ ಸಮುದಾಯವೂ ದೊಡ್ಡ ಅಂಗ.‌ ಪಕ್ಷವನ್ನು ಕಟ್ಟುವಲ್ಲಿ ಅವರ ಕೊಡುಗೆ ಮಹತ್ತರವಾದುದು’ ಎಂದು ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಹೇಳಿದರು.

ಪಕ್ಷದ ಮೀನುಗಾರರ ಪ್ರಕೋಷ್ಠ ವತಿಯಿಂದ ಇಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.‌

‘ಮೀನುಗಾರರದು ಸೈನಿಕನ ಮಾನಸಿಕತೆ. ದೇಶದ ನೌಕಾಪಡೆ ಬಲಗೊಳ್ಳುವ ಮೊದಲೇ ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆಗೆ ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಂಘ ಪರಿವಾರದ ಸಂಘಟನೆಗ ಶಕ್ತಿ ನೀಡಿದ್ದು ಮೀನುಗಾರರು. ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಆರಂಭಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಬಂದ 70 ವರ್ಷದ ಬಳಿಕ ಮೀನುಗಾರ ಸಮಾಜಕ್ಕೆ ನ್ಯಾಯ ಒದಗಿಸಿದ್ದಾರೆ’ ಎಂದರು. 

‘ಸಮುದ್ರವೇ ಕರಾವಳಿಗರ ಆಸ್ತಿ. ಆರ್ಥಿಕ ಪ್ರಯೋಜನಕ್ಕೆ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದು ಇದನ್ನೇ.‌ ಗುಜರಾತಿನ ಐದು ಹೊಸ ಬಂದರುಗಳು  ಮುಂಬೈ ಬಂದರುಗಳನ್ನು ಮೀರಿಸುವಮಟ್ಟಿಗೆ ಬೆಳೆದಿವೆ. ಈ ದಿಸೆಯಲ್ಲಿ ನಾವೂ ಯೋಚಿಸಬೇಕು. ಪಶ್ಚಿಮ ಘಟ್ಟದ ಪರಿಸರಕ್ಕೆ ಹಾನಿ‌ ಆಗದಂತೆ ಎಚ್ಚರವಹಿಸಿ ರಾಜ್ಯದ ಒಳನಾಡಿಗೆ  ರೈಲು ಮತ್ತು ರಸ್ತೆ ಸಂಪರ್ಕವನ್ನು ಅಭಿವೃದ್ಧಿಪಡಿಸಬೇಕು’ ಎಂದು ಕೋರಿದರು.

‘ಸಸಿಹಿತ್ಲು ಕಿನಾರೆಯು ಕಡಲ ಸಾಹಸ ಕ್ರೀಡೆಗೆ ಸೂಕ್ತ ಪ್ರದೇಶ. ಇದನ್ನೂ ಆರ್ಥಿಕವಾಗಿ ಬಳಸಿಕೊಳ್ಳಬೇಕಿದೆ. ಕುಳಾಯಿ ಬಂದರು ನಿರ್ಮಾಣವಾಗುತ್ತಿದೆ. ನವಮಂಗಳೂರು ಬಂದರು ಯೋಜನೆಯಿಂದ ನಿರ್ವಸಿತರಾದವರಿಗೆ ನ್ಯಾಯ ಸಿಗದೇ ಇರುವುದೂ ಗಮನದಲ್ಲಿದೆ’ ಎಂದರು.

ಮುಖಂಡ ರಾಮಚಂದರ್‌ ಬೈಕಂಪಾಡಿ, 'ಜಿಲ್ಲೆಯಲ್ಲಿ 1989ರ ಬಳಿಕ ಮೀನುಗಾರರ ಸಮಾಜಕ್ಕೆ ರಾಜಕೀಯವಾಗಿ ಅವಕಾಶ ಸಿಕ್ಕಿಲ್ಲ. ಆದರೂ ಈ ಸಮುದಾಯ ಪ್ರತಿ ಚುನಾವಣೆಯಲ್ಲೂ ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದಿದೆ. ಮೀನುಗಾರರು ಸಂಘಟಿತರಾಗಿ ಬಿಜೆಪಿ ಅಭ್ಯರ್ಥಿಯನ್ನು 4 ಲಕ್ಷಕ್ಕೂ ಹೆಚ್ಚು ಮತಗಳಿಂದ‌ ಗೆಲ್ಲಿಸಬೇಕು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ‘ಬಿಜೆಪಿಯ ದೊಡ್ಡ ಆಸ್ತಿ ಮೊಗವೀರ‌ ಸಮಾಜ. ಕಡಲ್ಕೊರೆತ ಸಮಸ್ಯೆ ನಿವಾರಿಸಲು ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ₹ 202 ಕೋಟಿ ಅನುದಾನ ಮಂಜೂರಾಗಿದೆ.  ಎಡಿಬಿ ನೆರವಿನ ಈ ಯೋಜನೆಯನ್ನು ಜಿಲ್ಲೆಯ ಶಾಸಕರೊಬ್ಬರು ತಮ್ಮ ಕ್ಷೇತ್ರಕ್ಕೆ ಸೀಮಿತಗೊಳಿಸಿದರು’ ಎಂದು ಆರೋಪಿಸಿದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಕ್ಷದ ಜಿಲ್ಲಾ ಮೀನುಗಾರರ ಪ್ರಕೋಷ್ಠದ ಅಧ್ಯಕ್ಷ ಗಿರೀಶ್ ಕರ್ಕೇರ, ಸಹ ಸಂಚಾಲಕ ಯಶವಂತ ಅಮೀನ್ ಭಾಗವಹಿಸಿದ್ದರು.

‘ರಾಜ್ಯದ ರಾಜಕೀಯದಲ್ಲಿ ಕರಾವಳಿಯ ಕಡೆಗಣನೆ’
‘ರಾಜಕೀಯ ನಿರ್ಣಯಗಳು ಮತಬ್ಯಾಂಕ್‌ ಆಧಾರದಲ್ಲಿ ಹಾಗೂ ಪ್ರಬಲ ಸಮುದಾಯಗಳ ಅಪೇಕ್ಷೆ‌ಗೆ ಅನುಗುಣವಾಗಿಯೇ ಕೈಗೊಳ್ಳಲಾಗುತ್ತಿದೆ. ಕರಾವಳಿ ಕರ್ನಾಟಕ ಅವರ ಕಾರ್ಯಸೂಚಿಗೆ ಹೊಂದಿಕೆ ಆಗುವುದಿಲ್ಲ. ಹಾಗಾಗಿ  ಕರಾವಳಿಯ 19ಕ್ಷೇತ್ರಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಕರಾವಳಿಯವರು ಆರ್ಥಿಕವಾಗಿ ಬಲಾಢ್ಯರಾದರೆ ಮಾತ್ರ ಈ ಮಾನಸಿಕತೆಯನ್ನು ಬದಲಾಯಿಸಬಹುದು. ಇದನ್ನು ಗಟ್ಟಿ ಧ್ವನಿಯಲ್ಲಿ ಹೇಳಲು ಮೀನುಗಾರರ ಸಹಕಾರ ಬೇಕು’ ಎಂದು ಬೃಜೇಶ್ ಚೌಟ ಹೇಳಿದರು. ‌
ಮೀನು ಮಾರಾಟ– ಅನ್ಯರಿಗೆ ಅವಕಾಶ ಬೇಡ: ಮೇಯರ್‌
‘ಮೀನುಗಾರರು ಕಷ್ಟಪಟ್ಟು ತರುವ ಮೀನನ್ನು ಮಾರಾಟ ಮಾಡುವ ಸಮುದಾಯ ಯಾವುದು ಎಂದು ಎಲ್ಲರಿಗೂ ಗೊತ್ತಿದೆ. ನಾವು ಸ್ವಾವಲಂಬಿಯಾಗಬೇಕು. ನಾವೇ ಅದರ ವ್ಯಾಪಾರ ಮಾಡಬೇಕು. ಅನ್ಯರಿಗೆ ಆ ಅವಕಾಶ ನೀಡಬಾರದು. ಅದಕ್ಕೆ ಎಲ್ಲರೂ ಒಗ್ಗಟ್ಟಾಗಿ ವ್ಯಾಪಾರದ ದೃಷ್ಟಿಯಲ್ಲೂ ಯೋಚಿಸಬೇಕು’ ಎಂದು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT