ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಫ್ಲೆಕ್ಸ್‌, ಬ್ಯಾನರ್‌ಗಳಿಗೆ ಕಡಿವಾಣ ಎಂದು?

Published 4 ಮಾರ್ಚ್ 2024, 6:38 IST
Last Updated 4 ಮಾರ್ಚ್ 2024, 6:38 IST
ಅಕ್ಷರ ಗಾತ್ರ

ಮಂಗಳೂರು: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಲ್‌ಗಳು, ರಸ್ತೆ ಬದಿಯ ಖಾಲಿ ಜಾಗಗಳು, ವಿದ್ಯುತ್ ಕಂಬಗಳು, ಫುಟ್‌ಪಾತ್‌ಗಳಲ್ಲಿ ರಾತ್ರಿ ಬೆಳಗಾಗುವಷ್ಟರಲ್ಲಿ ಮೇಲೆದ್ದು ಕಣ್ಣಿಗೆ ರಾಚುವ ದೊಡ್ಡ ದೊಡ್ಡ ಫ್ಲೆಕ್ಸ್‌ಗಳು, ಬ್ಯಾನರ್‌ಗಳು, ಬಂಟಿಂಗ್ಸ್‌ಗಳು ಪ್ರಜ್ಞಾವಂತ ಜಿಲ್ಲೆಯ ಜನರನ್ನು ಅಣಕಿಸುವಂತಿವೆ.

ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಕಲಂ (3)ರ ಅಡಿಯಲ್ಲಿ ಫ್ಲೆಕ್ಸ್‌ಗಳು, ಬಂಟಿಂಗ್ಸ್‌ಗಳು, ಕಟೌಟ್‌ಗಳನ್ನು ಅಳವಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇವುಗಳನ್ನು ಹಾಕಲು ಯಾವ ಸ್ಥಳೀಯ ಸಂಸ್ಥೆಗಳೂ ಅನುಮತಿ ನೀಡುವುದಿಲ್ಲ. ಸ್ಥಳೀಯ ಸಂಸ್ಥೆಗಳು ನಿಗದಿತ ಕಾಲಮಿತಿಯ ನಿಬಂಧನೆಗಳೊಂದಿಗೆ ಬಟ್ಟೆ ಬ್ಯಾನರ್‌ಗಳಿಗೆ ಮಾತ್ರ ಅನುಮತಿ ನೀಡಬಹುದಾಗಿದೆ.

ಆದರೂ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಫ್ಲೆಕ್ಸ್‌ಗಳ ಹಾವಳಿ ಹೆಚ್ಚುತ್ತಿದ್ದು, ರಸ್ತೆ ಬದಿಯಲ್ಲಿ ಗೋಡೆ ಕಟ್ಟಿದಂತೆ ಕಾಣುವ ಇವುಗಳಿಂದ ವಾಹನ ಸಂಚಾರ, ಜನರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆದರೆ, ಈ ಅನಧಿಕೃತ ಫ್ಲೆಕ್ಸ್‌ಗಳ ಹಾವಳಿಗೆ ಕಡಿವಾಣ ಹಾಕುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ಮಂಗಳೂರು ನಗರದಲ್ಲಿ ನಂತೂರು ಸರ್ಕಲ್, ಕೆಪಿಟಿ, ಜ್ಯೋತಿ ಸರ್ಕಲ್ ಸುತ್ತಮುತ್ತ, ಬಂಟ್ಸ್ ಹಾಸ್ಟೆಲ್ ಸರ್ಕಲ್, ಕಲೆಕ್ಟರ್ಸ್‌ ಗೇಟ್ ಸರ್ಕಲ್, ಹಂಪನಕಟ್ಟೆ, ಸ್ಟೇಟ್‌ ಬ್ಯಾಂಕ್ ವೃತ್ತ, ಎಂ.ಜಿ. ರಸ್ತೆ, ಲಾಲ್‌ಬಾಗ್, ಬಳ್ಳಾಲ್ ಬಾಗ್ ವೃತ್ತ, ಮಹಾನಗರ ಪಾಲಿಕೆ ಎದುರು, ಉರ್ವ, ಕೊಟ್ಟಾರ ಚೌಕಿ, ಜೆಪ್ಪು, ಪಡೀಲ್ ಮೊದಲಾದ ಕಡೆಗಳಲ್ಲಿ ರಸ್ತೆ ಬದಿಯ ಜಾಗವನ್ನು ಕಬಳಿಸಿ ಸಾಲು ಸಾಲಾಗಿ ಎತ್ತರ ಫ್ಲೆಕ್ಸ್‌ಗಳು ಆಗಾಗ ಪ್ರತ್ಯಕ್ಷವಾಗುತ್ತವೆ. ಇವುಗಳಲ್ಲಿ ರಾಜಕೀಯ ವ್ಯಕ್ತಿಗಳ ಪ್ರಚಾರ, ಕ್ರೀಡೆ, ವಿವಿಧ ಸ್ಪರ್ಧೆ ವಿಜೇತರಿಗೆ ಅಭಿನಂದನೆ, ಶ್ರದ್ಧಾಂಜಲಿ, ಧಾರ್ಮಿಕ ಕಾರ್ಯಕ್ರಮಗಳ ಫ್ಲೆಕ್ಸ್‌ಗಳೇ ಅಧಿಕ.

‘ಬಟ್ಟೆ ಬ್ಯಾನರ್‌ಗಳನ್ನು ಅಳವಡಿಸಲು ಮಾತ್ರ ಮಹಾನಗರ ಪಾಲಿಕೆ ಅನುಮತಿ ನೀಡುತ್ತದೆ. ನಿಯಮದ ಪ್ರಕಾರ ಫ್ಲೆಕ್ಸ್‌ಗಳು, ಬಂಟಿಂಗ್ಸ್‌, ಕಟೌಟ್‌ಗಳನ್ನು ಅಳವಡಿಸುವಂತಿಲ್ಲ. ಪಾಲಿಕೆಯ ಸಿಬ್ಬಂದಿ ಆಗಾಗ ಕಾರ್ಯಾಚರಣೆ ನಡೆಸಿ, ನಗರದಲ್ಲಿರುವ ಅನಧಿಕೃತ ಫ್ಲೆಕ್ಸ್‌ಗಳನ್ನು ತೆರವುಗೊಳಿಸುತ್ತಾರೆ. ಒಮ್ಮೆ ಕಾರ್ಯಾಚರಣೆ ನಡೆಸಿದರೆ, ಟ್ರ್ಯಾಕ್ಟರ್ ಭರ್ತಿಯಾಗುತ್ತದೆ. ಇದನ್ನು ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಾಕಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಪಾಲಿಕೆ ಅಧೀನದ ಸರ್ಕಾರಿ ಮತ್ತು ಖಾಸಗಿ ಸ್ಥಳಗಳಲ್ಲಿ 1,084 ಸ್ಥಳಗಳಲ್ಲಿ ಅಧಿಕೃತ ಜಾಹೀರಾತು ಫಲಕಗಳು ಇವೆ. ಇವುಗಳಿಂದ ವಾರ್ಷಿಕ ಸುಮಾರು ₹3.5 ಕೋಟಿ ಆದಾಯ ದೊರೆಯುತ್ತದೆ. ಇದನ್ನು ಹೊರತುಪಡಿಸಿ, ನಿಯಮದಂತೆ 6X3 ಅಳತೆಯ ಬಟ್ಟೆ ಬ್ಯಾನರ್‌ಗಳಿಗೆ ಮಾತ್ರ ಪಾಲಿಕೆ ಅನುಮತಿ ನೀಡುತ್ತದೆ. ಬ್ಯಾನರ್ ಹಾಕಲು ಬಯಸುವವರು ಪಾಲಿಕೆಗೆ ಅರ್ಜಿ ನೀಡಿ, ಶುಲ್ಕ ಪಾವತಿಸಬೇಕು. ನಂತರ ಸಿದ್ಧವಾದ ಬ್ಯಾನರ್ ಮೇಲೆ ಪಾಲಿಕೆಯ ಸೀಲ್ ಹಾಕಿಸಬೇಕಾಗುತ್ತದೆ. ಇದು ಚಾಲ್ತಿಯಲ್ಲಿರುವ ನಿಯಮ. ಆದರೆ, ಇದರ ಕಠಿಣ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ರಾಜಕೀಯ ನಾಯಕರ ಒತ್ತಡಗಳೂ ಬರುತ್ತವೆ, ಧಾರ್ಮಿಕ ಕಾರ್ಯಕ್ರಮಗಳದ್ದಾಗಿದ್ದರೆ ಭಾವನಾತ್ಮಕ ವಿಚಾರಗಳೂ ಇರುತ್ತವೆ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಮಂಗಳೂರು ನಗರದಲ್ಲಿ ತೆರವುಗೊಳಿಸುವ ಫ್ಲೆಕ್ಸ್‌ಗಳು, ಬಂಟಿಂಗ್ಸ್, ಬ್ಯಾನರ್‌ಗಳ ವಿಲೇವಾರಿಗೆ ಯಾವುದೇ ನಿರ್ದಿಷ್ಟ ಕ್ರಮಗಳಿಲ್ಲ. ಎಲ್ಲವನ್ನೂ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಕೇಂದ್ರದಲ್ಲಿ ರಾಶಿ ಹಾಕಲಾಗುತ್ತದೆ. ಇದರಿಂದ ಆಗುವ ಪರಿಸರ ಹಾನಿಯನ್ನು ಯಾರೂ ಯೋಚಿಸುತ್ತಿಲ್ಲ ಎಂಬುದು ಪರಿಸರವಾದಿಗಳ ಕಳಕಳಿ. ನಗರದ ತುಂಬೆಲ್ಲ ಫ್ಲೆಕ್ಸ್‌, ಬ್ಯಾನರ್‌ಗಳ ಹಾರಾಟವೇ ಹೆಚ್ಚಿದ್ದರೂ, ಇವುಗಳಿಂದ ಪಾಲಿಕೆಗೆ ಸೇರುವ ಆದಾಯ ಪುಡಿಗಾಸು ಮಾತ್ರ. ಯಾಕೆಂದರೆ ಶೇಕಡ 90ರಷ್ಟು ಅನಧಿಕೃತವೇ ಆಗಿವೆ.

ಜನರಿಗೆ ರೇಜಿಗೆ: ಉಳ್ಳಾಲ ಭಾಗದಲ್ಲಿ ರಸ್ತೆಯ ವಿಭಜಕಗಳ ನಡುವೆ ನಿಲ್ಲಿಸಿರುವ ಫೆಕ್ಸ್‌ಗಳು ನಗರ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗಿವೆ. ತೊಕ್ಕೊಟ್ಟು ಜಂಕ್ಷನ್‌, ಕುಂಪಲ, ಕೊಲ್ಯದಲ್ಲಿ ರಸ್ತೆ, ಅಂಗಡಿಗಳನ್ನೇ ಮರೆಮಾಡುವಷ್ಟು ಮೇಲೆದ್ದಿರುವ ಫ್ಲೆಕ್ಸ್‌ಗಳು, ಬ್ಯಾನರ್‌ಗಳು ಜನರಿಗೆ ರೇಜಿಗೆ ಹುಟ್ಟಿಸುತ್ತಿವೆ. ಬಿ.ಸಿ. ರೋಡ್‌ ಕೂಡ ಇದಕ್ಕೆ ಹೊರತಾಗಿಲ್ಲ. ಮೂಡುಬಿದಿರೆ ಸುತ್ತಮುತ್ತ, ಬಂಟ್ವಾಳ, ಬೆಳ್ತಂಗಡಿ ಪರಿಸರದಲ್ಲೂ ಇತ್ತೀಚಿನ ದಿನಗಳಲ್ಲಿ ಫ್ಲೆಕ್ಸ್‌ಗಳ ಕಾಟ ಜೋರಾಗಿದೆ.

‘ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ ವ್ಯಕ್ತಿಗಳ ಫ್ಲೆಕ್ಸ್‌ಗಳನ್ನು ರಸ್ತೆ ಬದಿಯಲ್ಲಿ ಹಾಕುತ್ತಾರೆ. ಬೇರೆ ಆರ್ಡರ್‌ಗಳಿದ್ದರೆ ಮೊದಲು ಹಾಕಿರುವ ಫ್ಲೆಕ್ಸ್ ಬದಲಾಗುತ್ತದೆ. ಇಲ್ಲದಿದ್ದರೆ ತಿಂಗಳವರೆಗೂ ಹಾಗೆಯೇ ಇರುತ್ತದೆ. ಕೆಲವೊಮ್ಮೆ ಪುರಸಭೆ ತೆರವುಗೊಳಿಸುತ್ತದೆ. ಹೆಚ್ಚಿನ ವೇಳೆ ಅದು ದೂಳು ತಿನ್ನುತ್ತ ಮಾಸಲಾಗಿ ಹಾಗೆಯೇ ಇರುತ್ತಾರೆ’ ಎನ್ನುತ್ತಾರೆ ಬಂಟ್ವಾಳದ ವ್ಯಕ್ತಿಯೊಬ್ಬರು.

ಸುರತ್ಕಲ್‌ನಲ್ಲಿ ಫ್ಲೆಕ್ಸ್‌ಗಳ ಅಬ್ಬರಕ್ಕೆ ಪೇಟೆಯೇ ಕಳೆದು ಹೋದಂತೆ ಭಾಸವಾಗುತ್ತದೆ. ಈಗೀಗ ಮೇಲ್ಸೇತುವೆಗೂ ಮೊಳೆ ಹೊಡೆದು ಫ್ಲೆಕ್ಸ್‌ ಕಟ್ಟುತ್ತಾರೆ. ಆಡಳಿತ ಇದನ್ನು ಕಂಡೂ ಕುರುಡಾದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಸುರತ್ಕಲ್‌ನ ಪ್ರಕಾಶ್.

ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ ಮುಖ್ಯ

ಒಂದು ದಿನಕ್ಕೆ ಬ್ಯಾನರ್ ಹಾಕಲು ಕೂಡ ಪಾಲಿಕೆ ವೆಬ್‌ಸೈಟ್‌ನಲ್ಲಿ ನಿಗದಿತ ಸ್ಥಳದ ವಿವರದೊಂದಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಒಂದು ದಿನದ ಅನುಮತಿಗೆ ಮೂರು ದಿನಗಳ ಬಾಡಿಗೆ ಮೊತ್ತ ಪಡೆಯಲಾಗುತ್ತದೆ. ನಿಗದಿತ ಅವಧಿಯಲ್ಲಿ ತೆರವುಗೊಳಿಸಿದರೆ ಹಣವನ್ನು ಮರಳಿಸಲಾಗುತ್ತದೆ. ತಪ್ಪಿದ್ದಲ್ಲಿ ಠೇವಣಿ ಹಣ ಕಡಿತ ಮಾಡಲಾಗುತ್ತದೆ. ಇಂತಹುದೊಂದು ಯೋಜನೆ ಅನುಷ್ಠಾನಗೊಳಿಸಲು ಯೋಚಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್ ‘ಪ್ರಜಾವಾಣಿ’ಗೆ ತಿಳಿಸಿದರು. ಬುದ್ಧಿವಂತರ ನಗರವಾಗಿರುವ ಇಲ್ಲಿನ ಜನರಲ್ಲಿ ಪರಿಸರ ಕಾಳಜಿಯ ಪ್ರಜ್ಞೆ ಮೂಡಬೇಕು. ಪಾಲಿಕೆ ನಿರಂತರ ಕಾರ್ಯಾಚರಣೆ ನಡೆಸಿದರೂ ಮತ್ತೆ ಮರುದಿನ ಬೆಳಗಾಗುವಷ್ಟರಲ್ಲಿ ಹೊಸ ಫ್ಲೆಕ್ಸ್ ತಲೆ ಎತ್ತುತ್ತದೆ ಎಂದು ಅವರು ಬೇಸರಿಸಿದರು.

‘ಕಟ್ಟುನಿಟ್ಟಿನ ಕ್ರಮ ಜಾರಿಯಾಗಲಿ’

ಕಾರ್ಯಕ್ರಮಗಳು ಇದ್ದಾಗ ಫ್ಲೆಕ್ಸ್ ಬಂಟಿಂಗ್ಸ್‌ಗಳನ್ನು ಹಾಕುವುದು ತಪ್ಪಲ್ಲ. ಆದರೆ ಕಾರ್ಯಕ್ರಮ ಮುಗಿದ ಮೇಲೆ ಹಾಕಿದವರಿಂದಲೇ ಅದನ್ನು ತೆರವುಗೊಳಿಸುವ ಬಗ್ಗೆ ಗಂಭೀರ ಕ್ರಮ ಆಗಬೇಕು. ರಸ್ತೆಯ ಮೇಲ್ಭಾಗದಲ್ಲಿ ಕಟ್ಟುವ ಬಂಟಿಂಗ್ಸ್‌ಗಳು ಹರಿದು ಬಿದ್ದು ಡಿವೈಡರ್ ಬದಿಯಿಂದ ಸಾಗುವ ದ್ವಿಚಕ್ರ ವಾಹನಗಳಿಗೆ ಸುತ್ತಿಕೊಳ್ಳುವ ಅಪಾಯ ಇರುತ್ತದೆ. ಹೋರ್ಡಿಂಗ್ಸ್‌ಗಳ ನಿಯಂತ್ರಣವು ರಸ್ತೆ ಸುರಕ್ಷತೆಯಷ್ಟೇ ಮುಖ್ಯ. 2023ರ ಏಪ್ರಿಲ್ 17ರಂದು ಪುಣೆ– ಮುಂಬೈ ಹೆದ್ದಾರಿಯಲ್ಲಿ ಹೋರ್ಡಿಂಗ್ಸ್ ಬಿದ್ದು ಐವರು ಮೃತಪಟ್ಟಿರುವ ಘಟನೆ ನಡೆದಿದೆ. ಇಂತಹ ಘಟನೆಗಳು ನಮ್ಮ ಊರಿನಲ್ಲಿ ನಡೆಯಲು ಅವಕಾಶ ಕೊಡಬಾರದು. ಸ್ಥಳೀಯ ಪ್ರಜ್ಞಾವಂತರು ಕೆಲವೊಮ್ಮೆ ಇವನ್ನು ತೆರವುಗೊಳಿಸಿದರೂ ಕೋಮು ಸೂಕ್ಷ್ಮ ರೂಪ ತಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಆಡಳಿತವೇ ಇದಕ್ಕೆ ನಿಯಮ ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು – ಜಯಕೃಷ್ಣನ್ ಕೊಟ್ಟಾರಚೌಕಿ ನಿವೃತ್ತ ಅಧಿಕಾರಿ

'ಬ್ಯಾನರ್ ಹಾವಳಿ: ಮರಕ್ಕೆ ಹಾನಿ’

‘ಅನಧಿಕೃತವಾಗಿ ಫ್ಲೆಕ್ಸ್‌ಗಳನ್ನು ಹಾಕಿದರೆ ಪ್ರಕರಣ ದಾಖಲಿಸಬೇಕು ಎಂದು ಹೈಕೋರ್ಟ್ ಹೇಳಿದೆ. ಪ್ಲಾಸ್ಟಿಕ್‌ ಅನ್ನು ಬಳಸುವಂತೆಯೇ ಇಲ್ಲ. ಹಲವಾರು ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ನಿಯಮ ರೂಪಿಸಿವೆ. ಆದರೆ ಜನರಿಗೆ ಫ್ಲೆಕ್ಸ್‌ಗಳು ಕಟೌಟ್‌ಗಳ ಹುಚ್ಚು ಹೆಚ್ಚಾಗಿದೆ. ಮಂಗಳೂರು ನಗರದ ಹಲವಾರು ಕಡೆಗಳಲ್ಲಿ ಮರಗಳನ್ನು ಬಳಸಿ ಕಬ್ಬಿಣ ಅಥವಾ ನೈಲಾನ್ ವಾಯರ್‌ನಿಂದ ಬ್ಯಾನರ್ ಕಟ್ಟುತ್ತಾರೆ. ಗಾಳಿಗೆ ತೂರಾಡುವ ಬ್ಯಾನರ್‌ಗಳು ಕೆಳಗೆ ಬಿದ್ದು ದಾರ ಬಿಗಿಯಾಗಿ ಮರದ ಟೊಂಗೆ ಮುರಿದು ಬೀಳುತ್ತದೆ. ಪರಿಸರ ಕಾರ್ಯಕರ್ತರು ಸಾರ್ವಜನಿಕ ಸ್ಥಳಗಳಲ್ಲಿ ಬೆಳೆಸಿರುವ ಎಷ್ಟೊ ಮರಗಳಿಗೆ ಇದೇ ರೀತಿ ಆಗಿದ್ದು ಪಾಲಿಕೆಗೆ ಹಲವಾರು ಬಾರಿ ದೂರು ನೀಡಲಾಗಿದೆ. ಕಾನೂನುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿವೆ –ಶಶಿಧರ್ ಶೆಟ್ಟಿ ಎನ್‌ಇಸಿಎಫ್ ಸಂಘಟನೆಯ ಕಾರ್ಯದರ್ಶಿ

'ಸಂಘಟಕರಿಂದಲೇ ತೆರವುಗೊಳಿಸಲಿ’

ಉತ್ಸವ ಜಾತ್ರೆಗಳು ಇದ್ದಾಗ ಫ್ಲೆಕ್ಸ್ ಬ್ಯಾನರ್ಸ್‌ ಹಾಕುವುದು ತಪ್ಪಲ್ಲ. ಇದರಿಂದ ಉತ್ಸವ ಕಳೆಗಟ್ಟುತ್ತದೆ. ಆದರೆ ಇವು ಮುಗಿದ ಎರಡು ದಿನಗಳಲ್ಲಿ ಸಂಘಟಕರಿಂದ ಅವುಗಳನ್ನು ತೆರವುಗೊಳಿಸಬೇಕು. ಅನಧಿಕೃತ ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದೆ. ಬ್ಯಾನರ್ ಕಂಬ ಹಾಕಲು ರಾತ್ರಿ ಹೊತ್ತಿನಲ್ಲಿ ಹೊಂಡ ತೆಗೆಯುವುದು ಇದರಿಂದ ನೀರಿನ ಪೈಪ್‌ಗಳು ಕೇಬಲ್‌ಗಳಿಗೆ ಹಾನಿಯಾಗುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕುವುದು ಆಡಳಿತದ ಜವಾಬ್ದಾರಿ– ಪಿ.ಕೆ. ಥಾಮಸ್ ಮೂಡುಬಿದಿರೆ ಸಾಮಾಜಿಕ ಕಾರ್ಯಕರ್ತ

'ಅನೇಕರಿಗೆ ಬದುಕುಕೊಟ್ಟ ಉದ್ಯಮ’

ರಸ್ತೆ ಬದಿಯಲ್ಲಿ ಫ್ಲೆಕ್ಸ್ ಬಂಟಿಂಗ್ಸ್ ಹಾವಳಿ ಮಿತಿ ಮೀರಿದೆ. ಮೊದಲೆಲ್ಲ ಸ್ಥಳೀಯ ಸಂಸ್ಥೆಗಳು ಇವುಗಳ ತೆರವಿಗೆ ಸಮಯ ನಿಗದಿಪಡಿಸುತ್ತಿದ್ದವು ಈಗ ಕೇಳುವವರಿಲ್ಲದಾಗಿವೆ. ಇವುಗಳನ್ನು ಹಾಕುವುದಕ್ಕೆ ನಮ್ಮ ವಿರೋಧ ಇಲ್ಲ. ಈ ಉದ್ಯಮವು ಅನೇಕರಿಗೆ ಬದುಕು ಕೊಟ್ಟಿದೆ. ಆದರೆ ಪರಿಸರದ ಸೌಂದರ್ಯಕ್ಕೆ ಇವು ಮಾರಕ ಆಗಬಾರದು. ಬಿ.ಸಿ. ರೋಡ್‌ ಅನ್ನು ಕ್ಲೀನ್ ಸಿಟಿ ಮಾಡುವ ಉದ್ದೇಶಕ್ಕೆ ಹೆಚ್ಚುತ್ತಿರುವ ಫ್ಲೆಕ್ಸ್‌ಗಳ ಕಾಟ ಧಕ್ಕೆ ತರಬಾರದು- ಲಕ್ಷ್ಮಣ ಕುಲಾಲ್ ಅಗ್ರಬೈಲ್ ಸಾಮಾಜಿಕ ಕಾರ್ಯಕರ್ತ

‘ಡಿಜಿಟಲ್ ಡಿಸ್ಪ್ಲೆಗೆ ಒತ್ತು’

ಬ್ಯಾನರ್ ಅಳವಡಿಸುವಾಗ ಅನುಮತಿ ಪಡೆಯಬೇಕು ಅದನ್ನು ಹಾಕಿದವರೇ ನಿಗದಿತ ಅವಧಿಯೊಳಗೆ ತೆರವುಗೊಳಿಸಬೇಕು ಎನ್ನುವ ನಿಯಮ ಇದೆ. ಅನುಮತಿ ಪಡೆಯುವ ವ್ಯಕ್ತಿಗಳಿಂದ ಠೇವಣಿ ಪಡೆಯಲಾಗುತ್ತದೆ. ಅವರು ತೆರವುಗೊಳಿಸದಿದ್ದರೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ತೆರವುಗೊಳಿಸುತ್ತದೆ. ಇದು ನಿರಂತರ ಪ್ರಕ್ರಿಯೆ. ಬರುವ ದಿನಗಳಲ್ಲಿ ನಿರ್ದಿಷ್ಟ ಸ್ಥಳ ಗುರುತಿಸಿ ಡಿಜಿಟಲ್ ಡಿಸ್ಪ್ಲೆ ಅಳವಡಿಸುವ ಬಗ್ಗೆ ಯೋಚಿಸಲಾಗಿದೆ - ಉದಯ್ ಶೆಟ್ಟಿ, ಡಿಯುಡಿಸಿ ಯೋಜನಾ ನಿರ್ದೇಶಕ 

ಪೂರಕ ಮಾಹಿತಿ: ಮೋಹನ್ ಶ್ರೀಯಾನ್, ಪ್ರಸನ್ನ ಹೆಗ್ಡೆ, ಮೋಹನ್ ಕುತ್ತಾರ್

ಕುತ್ತಾರು ಸಮೀಪ ಅಳವಡಿಸಿರುವ ಬಂಟಿಂಗ್ಸ್‌ಗಳು
ಕುತ್ತಾರು ಸಮೀಪ ಅಳವಡಿಸಿರುವ ಬಂಟಿಂಗ್ಸ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT