ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗು ಬೆನ್ನು ಬಾಲಕಿಗೆ ಬದುಕು ನೀಡಿದ ಕೋಟೆ ಫೌಂಡೇಷನ್

ಕೋಟೆ ಫೌಂಡೇಷನ್ ನೆರವು, ಡಾ. ಈಶ್ವರ ಕೀರ್ತಿ: ಡಾ. ಗಣಪತಿ ಸ್ಪಂದನೆ
Last Updated 20 ಆಗಸ್ಟ್ 2019, 16:28 IST
ಅಕ್ಷರ ಗಾತ್ರ

ಸುಳ್ಯ: ಥೊರಾಸಿಕ್ ಸ್ಕೋಲಿಯೋಸಿಸ್ ರೋಗದಿಂದ 89 ಡಿಗ್ರಿಯಷ್ಟು ಬೆನ್ನು ಬಾಗಿದ್ದ ಸುಳ್ಯ ತಾಲ್ಲೂಕು ದೇವಚಳ್ಳ ಗ್ರಾಮದ ತಳೂರು ಮೆತ್ತಡ್ಕದ ಬಡ ಕುಟುಂಬದ 10 ವರ್ಷದ ಬಾಲಕಿ ಅಮೃತಾ, ಯಶಸ್ವಿ ಚಿಕಿತ್ಸೆಯ ಬಳಿಕ ಇದೇ ಬುಧವಾರ (ಆ.21) ಆಸ್ಪತ್ರೆಯಿಂದ ಮನೆಗೆ ಹೆಜ್ಜೆ ಇರಿಸಲಿದ್ದಾಳೆ.

ಊಟಕ್ಕೂ ಪರದಾಡಬೇಕಾದ ಸ್ಥಿತಿಯಲ್ಲಿದ್ದ ಕುಟುಂಬದ ಬಾಲಕಿಯ ಬದುಕಿನಲ್ಲಿ ಕೋಟೆ ಫೌಂಡೇಷನ್‌ ಬೆಳಕು ಮೂಡಿಸಿದ್ದರೆ, ಬೆನ್ನುಹುರಿ ಮೂಳೆ ತಜ್ಞ ಡಾ.ಈಶ್ವರ್ ಕೀರ್ತಿ ಹಾಗೂ ಮಂಗಳಾ ನರ್ಸಿಂಗ್ ಹೋಮ್‌ನ ಡಾ.ಗಣಪತಿ ಶುಲ್ಕ ರಹಿತವಾಗಿ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ. ಆಕೆಯ ಸ್ಥಿತಿಯ ಬಗ್ಗೆ ‘ಪ್ರಜಾವಾಣಿ’ ಮಾನವೀಯ ವರದಿ ಮಾಡಿದ್ದು, ಅಮೃತಾ ಮತ್ತು ಕುಟುಂಬದವರ ಮುಖದಲ್ಲಿ ಈಗ ಮಂದಹಾಸ ಮೂಡಿದೆ.

‘ಥೊರಾಸಿಕ್ ಸ್ಕೋಲಿಯೋಸಿಸ್’ ಎಂದರೆ ಶಕ್ತಿ ಇಲ್ಲದೇ ಬೆನ್ನು ಬಾಗುವ ರೋಗ. ಮೆತ್ತಡ್ಕದ ಸತೀಶ್ ನಾಯ್ಕ ಮತ್ತು ಗಾಯತ್ರಿ ನಾಯ್ಕ ದಂಪತಿ ಮಗಳಾದ ಅಮೃತಾಗೆ ಕೆಲವು ಸಮಯದ ಹಿಂದೆ ರೋಗ ಕಾಡಿತ್ತು. ಬೆನ್ನು ನೋವು ಆರಂಭವಾಗಿ ಕ್ರಮೇಣ ಬಾಗಿತ್ತು. ಈ ಚಿಕಿತ್ಸೆಗೆ ಸುಮಾರು ₹ 6 ಲಕ್ಷಕ್ಕೂ ಹೆಚ್ಚಿನ ಖರ್ಚನ್ನು ಹಲವು ಆಸ್ಪತ್ರೆಗಳು ಅಂದಾಜಿಸಿದ್ದವು.

ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ:ಆಗ ಊರಿನ ಯುವಕರು ಮತ್ತು ಕೋಟೆ ಫೌಂಡೇಷನ್‌ನವರು ಅಮೃತಾಗೆ ಚಿಕಿತ್ಸೆ ಕೊಡಿಸಲು ಮುಂದೆ ಬಂದಿದ್ದಾರೆ. ಮಂಗಳೂರಿನ ಬೆನ್ನುಹುರಿ ಮೂಳೆ ತಜ್ಞ ಡಾ.ಈಶ್ವರ್ ಕೀರ್ತಿ ಚಿಕಿತ್ಸೆ ನೀಡಲು ಸಮ್ಮತಿಸಿದ್ದಾರೆ. ಮಂಗಳಾ ನರ್ಸಿಂಗ್ ಹೋಮ್‌ನ ವೈದ್ಯಕೀಯ ನಿರ್ದೇಶಕ ಹಾಗೂ ಅರಿವಳಿಕೆ ತಜ್ಞ ಡಾ.ಗಣಪತಿ ತಮ್ಮ ಆಸ್ಪತ್ರೆಯಲ್ಲಿ, ಔಷಧಿ ಹೊರತುಪಡಿಸಿ ಇತರ ಖರ್ಚು ಕಡಿತಗೊಳಿಸಿದ್ದಾರೆ.

ಇದೇ 6ರಂದು ಬರೋಬ್ಬರಿ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮೂಲಕ ಬೆನ್ನುಹುರಿ ಸರಿಪಡಿಸಲಾಗಿದೆ. ಬೆನ್ನು ಹುರಿಯ ಬಳಿ ಇರಿಸಬೇಕಿದ್ದ ‘ಡೆಪ್ಯು ಇಂಪ್ಲಾಂಟ್‌’ ಅನ್ನು ಆಮದು ಮಾಡಲಾಗಿದ್ದು, ₹1.5 ಲಕ್ಷ ತಗುಲಿದೆ. ಡಾ.ಈಶ್ವರ್ ಕೀರ್ತಿ ಮನವಿಯಂತೆ, ತಯಾರಕ ಕಂಪನಿಯೂ ದರ ಕಡಿತಗೊಳಿಸಿದೆ. ಒಟ್ಟಾರೆ ₹ 3 ಲಕ್ಷದಲ್ಲಿ ಚಿಕಿತ್ಸೆಯಾಗಿದೆ. ಇಬ್ಬರು ವೈದ್ಯರೂ ಉಚಿತ ಸೇವೆ ನೀಡಿದ್ದಾರೆ.

‘ಅಮೃತಾ ಚಿಕಿತ್ಸೆ ಯಶಸ್ವಿಯಾಗಿದೆ. ಬೆಳವಣಿಗೆ ಕಾರಣ ಮುಂದಿನ ದಿನಗಳಲ್ಲಿ ವ್ಯತ್ಯಾಸಗಳು ಬರುವುದು ಸಹಜ. ಆಗ ಸುಲಭದಲ್ಲಿ ಚಿಕಿತ್ಸೆ ಮುಂದುವರಿಸಿ, ಪರಿಹಾರ ಮಾಡಿಕೊಳ್ಳಬಹುದು’ ಎಂದು ವೈದ್ಯರು ತಿಳಿಸಿರುವುದಾಗಿ ಕೋಟೆ ಫೌಂಡೇಷನ್‌ನ ರಘುರಾಮ ಕೋಟೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT