ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಂಗಡಿ ‌| ನೀರು ಕೇಳುವ ನೆಪದಲ್ಲಿ ಚಿನ್ನಾಭರಣ ದೋಚಿದ ಕಳ್ಳರು

Published 12 ಮೇ 2024, 13:44 IST
Last Updated 12 ಮೇ 2024, 13:44 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ತಂಗಡಿ ತಾಲ್ಲೂಕು ಕರಾಯ ಗ್ರಾಮದ ಬದ್ಯಾರು ಎಂಬಲ್ಲಿ ಮಹಿಳೆಯೊಬ್ಬರೇ ಇದ್ದ ಮನೆಗೆ ನೀರು ಕೇಳಿಕೊಂಡು ಬಂದ ಅಪರಿಚಿತ ಪುರುಷ, ಮಹಿಳೆ ಮನೆಯೊಳಗೆ ಪ್ರವೇಶಿಸಿ ಆಭರಣಕ್ಕೆ ಜಾಲಾಡಿದ, ಮಗುವನ್ನು ಕೊಲ್ಲುವ ಬೆದರಿಕೆ ಹಾಕಿ ಮಹಿಳೆ ಮೈ ಮೇಲಿದ್ದ ಸುಮಾರು ₹ 1ಲಕ್ಷ ಮೌಲ್ಯದ ಚಿನ್ನಾಭರಣ ಕಸಿದು ಪರಾರಿಯಾದ ಘಟನೆ ಶನಿವಾರ ನಡೆದಿದೆ.

ಜಕಾರಿಯಾ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರ ಪತ್ನಿ ಸುಹೈಬಾ ಬೆಳಿಗ್ಗೆ 10.30ರ ಹೊತ್ತಿಗೆ ಮನೆಯ ಮುಂಭಾಗ ಕಸ ಗುಡಿಸುತ್ತಿರುವಾಗ ಮನೆಯ ಅಂಗಳಕ್ಕೆ ಬಂದ ಇಬ್ಬರು ಸುಹೈಬಾ ಅವರಿಗೆ ಕರಪತ್ರ ತೋರಿಸಿ ಸಹಾಯ ಕೇಳುವ ನೆಪದಲ್ಲಿ ಈ ಕೃತ್ಯ ಎಸಗಿದ್ದಾರೆ.

‘ಅಂಗಳಕ್ಕೆ ಬಂದು ನೀರು ಕೇಳಿ, ಈ ಮನೆಯಲ್ಲಿ ಯಾರೆಲ್ಲ ಇದ್ದೀರಿ ಎಂದು ಕೇಳಿದ್ದಾರೆ. ನಾನು ಮನೆಯ ಹೊರಗಿರುವ ನಳ್ಳಿಯಿಂದ ನೀರು ತರಲೆಂದು ಬಾಟಲಿ ಹುಡುಕುತ್ತಿರುವಾಗ ಅವರು ಮನೆಯ ಒಳಗೆ ಹೋಗಿದ್ದಾರೆ. ಇದನ್ನು ಕಂಡು ಬೊಬ್ಬೆ ಹಾಕಿ ಒಳ ಹೋದಾಗ ಅವರಿಬ್ಬರು ಬೆಡ್ ರೂಮಿನಲ್ಲಿರುವ ಕಪಾಟಿನ ಬಾಗಿಲು ತೆರೆದು ಹುಡುಕುತ್ತಿರುವುದು ಕಂಡು ಬಂತು. ನಾನು ಇನ್ನೊಂದು ಕೋಣೆಯಲ್ಲಿರುವ ಮಗುವನ್ನು ಎತ್ತಿಕೊಂಡು ಕೋಣೆಯಲ್ಲಿ ಮಗವನ್ನು ಕೂಡಿಸಿ ಬಾಗಿಲು ಹಾಕಿ ಹೊರ ಬಂದು ಗಂಡನಿಗೆ ಕರೆ ಮಾಡುತ್ತಿರುವಾಗ ಅವರು ನನ್ನ ಬಳಿ ಬಂದು ಕೈಯಲ್ಲಿದ್ದ ಮೊಬೈಲ್ ಫೋನನ್ನು ಎಸೆದು ಹಲ್ಲೆ ಮಾಡಿದ್ದಾರೆ. ನನ್ನ ಜುಟ್ಟನ್ನು ಹಿಡಿದು ಇನ್ನೊಂದು ಕೈಯಲ್ಲಿ ಚೂರಿ ತೋರಿಸಿದ ವ್ಯಕ್ತಿ ನಿನ್ನಲ್ಲಿರುವ ಚಿನ್ನ ಕೊಡು. ಇಲ್ಲದಿದ್ದರೆ ನಿನ್ನ ಮಗುವನ್ನು ಕೊಂದು ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ಕೈಯಲ್ಲಿದ್ದ ಎರಡು ಚಿನ್ನದ ಉಂಗುರ ತೆಗೆದು ಕೊಟ್ಟಾಗ ಚಿನ್ನದ ಕರಿಮಣಿ ಸರ ಕಸಿದಿದ್ದಾನೆ. ಈ ವೇಳೆ ಕುತ್ತಿಗೆಗೂ ಗಾಯ ಆಗಿದೆ. ಜೋರಾಗಿ ಕಿರುಚಿದಾಗ ಅವರಿಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ’ ಎಂದು ಸುಹೈಬಾ ಅವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ನನ್ನ ಬೊಬ್ಬೆ ಕೇಳಿ ನೆರೆಮನೆಯ ಅಸ್ಮಾ ಮನೆ ಕಡೆ ಬರುತ್ತಿರುವಾಗ ರಸ್ತೆಯಲ್ಲಿ ಒಬ್ಬ ಪುರುಷ ಮತ್ತು ಮಹಿಳೆ ಮೋಟಾರ್ ಸೈಕಲ್‌ನಲ್ಲಿ ಹೋಗಿರುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ. ಸುಮಾರು 6 ಗ್ರಾಂನ ಎರಡು ಚಿನ್ನದ ಉಂಗುರ, 12 ಗ್ರಾಂನ ಚಿನ್ನದ ಕರಿಮಣಿ ಸರ ಸೇರಿ ಸುಮಾರು ₹ 1ಲಕ್ಷ ಮೌಲ್ಯದ ಚಿನ್ನಾಭರಣ ಕಸಿದಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT