ಮಂಗಳೂರಿನ ಜೋಡುಪಾಲದಲ್ಲಿ ಭೂಕುಸಿತ: 3 ಸಾವು

7
ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ 180 ಮಂದಿ ರಕ್ಷಣೆ

ಮಂಗಳೂರಿನ ಜೋಡುಪಾಲದಲ್ಲಿ ಭೂಕುಸಿತ: 3 ಸಾವು

Published:
Updated:

ಮಂಗಳೂರು: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿರುವ ಜೋಡುಪಾಲದಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಮೂವರು ಮೃತಪಟ್ಟಿದ್ದಾರೆ. ಅಪಾಯದಲ್ಲಿ ಸಿಲುಕಿದ್ದ 180 ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ರಕ್ಷಣೆ ಮಾಡಲಾಗಿದೆ.

ಸಂಪಾಜೆ ಸಮೀಪದ ಜಿಲ್ಲಾ ಗಡಿಭಾಗದಲ್ಲಿರುವ ಕೊಡಗು ಜಿಲ್ಲೆಯ ಜೋಡುಪಾಲ ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿದೆ. ರಸ್ತೆಯ ಅಂಚಿನಲ್ಲಿದ್ದ 25 ಮನೆಗಳು ಭೂಕುಸಿತದಿಂದ ಸಂಪೂರ್ಣ ನೆಲಸಮವಾಗಿವೆ. 200ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.

‘ಒಬ್ಬ ಪುರುಷನ ಮೃತದೇಹ ಪತ್ತೆಯಾಗಿದೆ. ಇನ್ನೂ ಎರಡು ಮೃತದೇಹಗಳು ಘಟನಾ ಸ್ಥಳದಲ್ಲಿ ಕಾಣಿಸುತ್ತಿದ್ದು, ಹೊರ ತೆಗೆಯಲು ಪ್ರಯತ್ನಿಸಲಾಗುತ್ತಿದೆ. ಇನ್ನೂ ಕೆಲವರು ನಾಪತ್ತೆಯಾಗಿರುವ ಮಾಹಿತಿ ಇದೆ. ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಮತ್ತು ಎಸ್‌ಪಿ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದರು.

ಜೋಡುಪಾಲ ಗ್ರಾಮ ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿದ್ದರೂ, ಹೆದ್ದಾರಿಯಲ್ಲಿನ ಭೂಕುಸಿತದಿಂದಾಗಿ ಜಿಲ್ಲೆಯ ಜೊತೆ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿದೆ. ಈ ಕಾರಣದಿಂದ ಅಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲು ಕೊಡಗು ಜಿಲ್ಲಾಡಳಿತಕ್ಕೆ ಸಾಧ್ಯವಾಗಿರಲಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತ 180 ಮಂದಿಯನ್ನು ರಕ್ಷಿಸಿ, ಕರೆತಂದಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್‌) ಸಿಬ್ಬಂದಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮೂರು ಗಂಜಿಕೇಂದ್ರ:

ನಿರಾಶ್ರಿತರಾಗಿರುವ ಜನರಿಗಾಗಿ ಕಲ್ಲುಗುಂಡಿ ಸರ್ಕಾರಿ ಶಾಲೆ, ಕೊಯ್ನಾಡು ಸರ್ಕಾರಿ ಶಾಲೆ ಮತ್ತು ಅರಂತೋಡು ಗ್ರಾಮದಲ್ಲಿರುವ ತೆಕ್ಕಿಲ್ ಸಭಾಂಗಣದಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿಯೇ ಅವರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿದೆ. ವೈದ್ಯರ ತಂಡ ಚಿಕಿತ್ಸೆಯನ್ನೂ ನೀಡುತ್ತಿದೆ.

ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಶುಕ್ರವಾರ ರಾತ್ರಿ ಘಟನಾ ಸ್ಥಳಕ್ಕೆ ಭೇಟಿನೀಡಿ ಮಾಹಿತಿ ಪಡೆದರು.

ಇದನ್ನೂ ಓದಿ...

ಕೊಡಗು ಜಿಲ್ಲೆಯಲ್ಲಿ ಮಳೆಗೆ ಸಿಲುಕಿದ್ದೀರಾ? ಸಹಾಯ ಮಾಡುವವರು ಇಲ್ಲಿದ್ದಾರೆ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !